ತುಮಕೂರು

ತುರುವೇಕೆರೆ ಮನೆಗಳಲ್ಲಿ ಕೂಗಲಿವೆ ಕುಕ್ಕರ್

Published On :



ತುರುವೇಕೆರೆ: ತಾವು ತಾಲೂಕಿನ ಜನರ ಕೃಪಾಕಟಾಕ್ಷಕ್ಕೆ ಒಳಗಾಗಬೇಕೆಂದು ಪಟ್ಟು ಬಿದ್ದಿರುವ ರಾಜ್ಯದ ಪ್ರಮುಖ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಮನೆಗೂ ಕುಕ್ಕರ್ ಅನ್ನು ವಿತರಣೆ ಮಾಡುವ ಸಂಕಲ್ಪವಿಟ್ಟುಕೊಂಡಿರುವಂತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು ಸಾಂಕೇತಿಕವಾಗಿ ಸುಮಾರು 2 ಸಾವಿರ ಮಂದಿಗೆ ಕುಕ್ಕರ್‌ಗಳನ್ನೂ ವಿತರಿಸಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಹೆಲಿಕ್ಯಾಫ್ಟರ್‌ನಲ್ಲಿ ಆಗಮಿಸಿದ್ದ  ತಾಲೂಕಿನ ಮುನಿಯೂರು ಗ್ರಾಮದ ಎಂ.ಆರ್. ರಾಜಶೇಖರ್ ಸಂಖ್ಯಾ ಶಾಸ್ತ್ರದ ಅನುಸಾರ ತಮ್ಮ ಹೆಸರನ್ನು ಈಗ ವಿನಯ್ ರಾಜಶೇಖರ್ ಎಂದು ಬದಲಾಯಿಸಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ರಾಜಶೇಖರ್ ತಾಲೂಕಿನಲ್ಲಿ ಹೆಲಿಕ್ಯಾಫ್ಟರ್  ರಾಜಶೇಖರ್ ಎಂದೇ ಖ್ಯಾತಿ. ಸದ್ಯ ಮುಂಬರುವ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಸಲುವಾಗಿ ತಾಲೂಕಿನ ಮನೆ ಮನೆಗೆ ಕುಕ್ಕರ್ ನೀಡುವ ಯೋಜನೆ ರೂಪಿಸಿಕೊಂಡಿದ್ದಾರೆ. 10 ಲೀಟರ್ ಕುಕ್ಕರ್‌ನ ಕೊಡುಗೆ ಕ್ಷೇತ್ರದ ಮನೆಗಳಿಗೆ ತಲುಪಲಿದೆ.  
ರಾಜಕಾರಣಿಗಳು ಈಗ ತಮ್ಮನ್ನು ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಗುಂಡು ಸಮಾರಾಧನೆ ಮಾಡಿ ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತಾರೆ. ಆರೋಗ್ಯಕ್ಕೂ ಹಾನಿ ಮಾಡುತ್ತಾರೆ. ಬಾಡೂಟದ ಸಮಾರಾಧನೆಗಾಗಿ ನೂರಾರು , ಸಾವಿರಾರು ಕುರಿ ಕೋಳಿಗಳ ಸಂಹಾರವಾಗುತ್ತೆ. ಆದರೆ ತಮಗೆ ಅಂತಹ ದಾರಿ ಸರಿಯಲ್ಲ ಎಂಬ ಭಾವನೆ ಬಂದಿದ್ದರಿಂದ ಮನೆ ಮನೆಗೆ ಕುಕ್ಕರ್ ವಿತರಣೆ ಮಾಡುವುದೇ ಒಳಿತು ಎಂದು ಅನ್ನಿಸಿತು ಎಂದು ವಿನಯ್ ರಾಜಶೇಖರ್ ತಮ್ಮ ಕ್ರಮವನ್ನು ಸಮರ್ಥಿಸುತ್ತಾರೆ.
ಪರಿಚಯಕ್ಕಾಗಿ: ಇದೇನು ಚುನಾವಣೆಯ ಗಿಮಿಕ್ ಅಲ್ಲ, ಆಮಿಷ ಅಲ್ಲ. ರಾಜ್ಯ ಗಾಣಿಗ ಸಮುದಾಯದವರು ಹಾಗೂ ತಮ್ಮ ಅಭಿಮಾನಿಗಳು ಕ್ಷೇತ್ರದಾದ್ಯಂತ ತಮ್ಮನ್ನು ಮನೆ ಮನೆಗೆ ಪರಿಚಯ ಮಾಡಿಸಲು ಮಾಡಿರುವ ತಂತ್ರ ಇದಷ್ಟೇ ಎನ್ನುತ್ತಾರೆ ವಿನಯ್ ರಾಜಶೇಖರ್. ಕುಕ್ಕರ್ ವಿತರಣಾ ಸಮಾರಂಭದಲ್ಲಿ ಮುನಿಯೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಹೇಂದ್ರ, ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಕೈಗಾರಿಕೋದ್ಯಮಿ ಲೋಕೇಶ್, ವಕೀಲ ಲೋಹಿತಾಶ್ವ, ವಿನಯ್ ರಾಜಶೇಖರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಲೋಕೇಶ್ ಹುಲ್ಲೇಕೆರೆ, ಉಪಾಧ್ಯಕ್ಷ ಅರುಣ್ ದುಂಡ, ಎಲೆಕ್ಟ್ರಿಕ್ ಗುತ್ತಿಗೆದಾರ ನರಸಿಂಹಯ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗಾಣಿಗರ ಪ್ರತಿನಿಧಿ: ರಾಜ್ಯಾದ್ಯಂತ ಸುಮಾರು 45 ಲಕ್ಷಕ್ಕೂ ಹೆಚ್ಚು ಗಾಣಿಗ ಸಮುದಾಯದ ಜನಾಂಗವಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿಯ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್. ಯಡಿಯೂರಪ್ಪನವರ ಬಲಗೈ ಭಂಟರೆಂದೇ ಕರೆಯಲ್ಪಡುವ ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿಯವರ ನೆಚ್ಚಿನ ಶಿಷ್ಯನಾಗಿರುವ ವಿನಯ್ ರಾಜಶೇಖರ್‌ರಿಗೆ ಕೆಜೆಪಿಯಿಂದ ಟಿಕೆಟ್  ನೀಡಬೇಕೆಂದಿ ಬಹಳಷ್ಟು ಒತ್ತಡವಿದೆ. ಗಾಣಿಗ ಸಮುದಾಯದ ರಾಜ್ಯಾಧ್ಯಕ್ಷನಾಗಿಯೂ ಸೇವೆ ಸಲ್ಲಿಸಿರುವ ವಿನಯ್ ರಾಜಶೇಖರ್ ಒಬ್ಬರೇ ತಮ್ಮ ಪ್ರತಿನಿಧಿಯೆಂದು ಗಾಣಿಗ ಸಮುದಾಯ ಬಿಎಸ್‌ವೈ ಅವರಿಗೆ ಪಟ್ಟು ಹಿಡಿದಿದೆ. ಆದರೆ ಇತ್ತ  ಕೆಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಎಂ.ಡಿ. ಲಕ್ಷ್ಮೀನಾರಾಯಣ್‌ರಿಗೆ ವಿನಯ್ ರಾಜಶೇಖರ್ ಅವರನ್ನು ಕಂಡರೆ ಅಷ್ಟಕ್ಕಷ್ಟೆ. ಎಂ.ಡಿ. ಲಕ್ಷ್ಮೀನಾರಾಯಣ್ ಹಾಗೂ ವಿನಯ್ ರಾಜಶೇಖರ್ ಇಬ್ಬರೂ ತಾಲೂಕಿನ ಮುನಿಯೂರು ಗ್ರಾಮದವರೇ ಆಗಿದ್ದಾರೆ.  ಕೆಜೆಪಿಯ ಟಿಕೆಟ್‌ಗೆ ಜಿದ್ದಾಜಿದ್ದಿಗೆ ಬಿದ್ದಿರುವ ವಿನಯ್ ರಾಜಶೇಖರ್ ಈಗಿನಿಂದಲೇ ಕ್ಷೇತ್ರದ ಜನರ ಪರಿಚಯ ಮಾಡಿಕೊಳ್ಳಲು ಮನೆ ಮನೆ ಬಾಗಿಲಿಗೆ ತೆರಳಿ 10 ಲೀಟರ್‌ನ ಕುಕ್ಕರ್ ಹಂಚಲು ಸಜ್ಜಾಗಿದ್ದಾರೆ. ವಿನಯ್ ರಾಜಶೇಖರ್‌ಗೆ ಟಿಕೆಟ್ ದೊರೆಯುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಮತದಾರನ ಮನೆಗೆ ಕುಕ್ಕರ್ ತಲುಪುವುದೋ ಕಾದುನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.