ಬೀದಿದೀಪ ಅಳವಡಿಸಲು ಪುರಸಭೆಯಿಂದ ತೊಘಲಕ್ ನೀತಿ
ಕುಣಿಗಲ್: ಪುರಸಭೆಯು ಬೀದಿದೀಪ ಅಳವಡಿಸಲು ತೊಘಲಕ್ ದರ್ಬಾರ್ ಸಂಸ್ಕೃತಿ ಅಳವಡಿಸಿಕೊಂಡಿದೆ. ಹಲವು ವಾರ್ಡ್ಗಳಲ್ಲಿ ಒಂದು ಕಂಬಕ್ಕೆ ಎರಡು ಲೈಟ್ ಸೇರಿದಂತೆ ಅವೈಜ್ಞಾನಿಕವಾಗಿ ಬೀದಿ ದೀಪ ವ್ಯವಸ್ಥೆ ಗೊಳಿಸಿದೆ.
ರಾಷ್ಟ್ರೀಯ ಸಂಪತ್ತಾದ ವಿದ್ಯುತ್ ಅನ್ನು ಅನವಶ್ಯಕವಾಗಿ ಪೋಲು ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಬೆಸ್ಕಾಂ, ಪುರಸಭೆ ಬೀದಿದೀಪ ಅಳವಡಿಸಲು ಅನುಸರಿಸುತ್ತಿರುವ ತೊಘಲಕ್ ಸಂಸ್ಕೃತಿಗೆ ಕಡಿವಾಣ ಹಾಕಲು ಸಿದ್ಧತೆ ನಡೆಸಿದೆ.
ಪುರಸಭೆ ತನ್ನ ವೆಬ್ಸೈಟ್ನಲ್ಲಿ ಘೋಷಿಸಿಕೊಂಡಂತೆ ಪಟ್ಟಣದ ಪುರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಆರು ಕಿಮಿ, ರಾಜ್ಯಹೆದ್ದಾರಿ ಎರಡು ಕಿಮಿ ಹಾಗೂ ಪುರಸಭೆ ರಸ್ತೆ 56.60 ಕಿಮಿ ಒಟ್ಟು 64.60 ಕಿಮಿ ರಸ್ತೆಗೆ ಎರಡು ಹೈಮಾಸ್ ಲೈಟ್, 1253 ಟ್ಯೂಬ್ಲೈಟ್, 231 ಸೋಡಿಯಂ ಲೈಟ್, ಇತರೆ 218 ಲೈಟ್ಗಳನ್ನು ಅಳವಡಿಸಲಾಗಿದೆ ಎಂಬ ಮಾಹಿತಿ ನೀಡಿದೆ. ಆದರೆ, ದುರಂತ ಎಂದರೆ ವಾಸ್ತವಾಂಶ ಇದಕ್ಕೆ ವಿರುದ್ಧವಾಗಿದ್ದು, ಎರಡು ಸಾವಿರಕ್ಕೂ ಹೆಚ್ಚು ಟ್ಯೂಬ್ಲೈಟ್, ಐದುನೂರು ಸೋಡಿಯಂ ಲೈಟ್, ಮುನ್ನೂರಕ್ಕೂ ಹೆಚ್ಚು ಸಿಎಫ್ಲ್ ಬಲ್ಪ್, ಐದು ಹೈಮಾಸ್ ಲೈಟ್ ಮತ್ತು ಹೊಸಬಡಾವಣೆಗಳ ಕೆಲವಡೆ ಇಂಧನ ಇಲಾಖೆಯ ನಿಯಮಾವಳಿ ಮೀರಿ ಇನ್ನೂರಕ್ಕೂ ಹೆಚ್ಚು ಪರಿಸರಕ್ಕೆ ಮಾರಕವಾದ ಬಲ್ಪ್ ಅಳವಡಿಸಿದೆ ಎನ್ನಲಾಗಿದೆ.
ಎರಡು ದೀಪ: ಪುರಸಭೆ ಬೀದಿದೀಪ ಅಳವಡಿಸಲು ವೈಜ್ಞಾನಿಕ ಕ್ರಮ ಕೈಗೊಳ್ಳದೆ, ಕೆಲ ಪ್ರಭಾವಿ ಸದಸ್ಯರ ವಾರ್ಡ್ಗಳಲ್ಲಿ ಸದಸ್ಯರ ಮನೆಗಳ ತಿರುವಿಗೆ ಅನವಶ್ಯಕವಾಗಿ ಒಂದೇ ಕಂಬಕ್ಕೆ ಎರಡು ದೀಪ ಅಳವಡಿಸಿದ್ದರೆ, ಇನ್ನು ಚುನಾವಣೆ ಸಮಯದಲ್ಲಿ ತಮ್ಮ ಆಯ್ಕೆಗೆ ಸಹಕರಿಸಿದವರ ಮನೆ ಬಾಗಿಲಲ್ಲೂ ಒಂದೇ ಕಂಬಕ್ಕೆ ಎರಡು ದೀಪ (ಒಂದು ಸಿಎಫ್ಎಲ್ ಹಾಗೂ ಟ್ಯೂಬ್ ಲೈಟ್ ಹಾಕಿ)ಋಣ ತೀರಿಸಿದ್ದಾರೆ.
ವಿದ್ಯುತ್ ಪೋಲು: ಇನ್ನು ಕೆಲ ವಾರ್ಡ್ಗಳ ಪ್ರತಿಯೊಂದು ಕಂಬದಲ್ಲೂ ಸೋಡಿಯಂ ಲೈಟ್ ಹಾಕಿಸಿದ್ದರೆ, ಹೈಮಾಸ್ ಲೈಟ್ ಕೆಳಗೂ ಸಹ ಅನಗತ್ಯವಾಗಿ ಸೋಡಿಯಂ ಲೈಟ್ ಅಳವಡಿಸುವ ಮೂಲಕ ರಾಷ್ಟ್ರೀಯ ಸಂಪತ್ತಾದ ವಿದ್ಯುತ್ ಪೋಲಾಗುವಂತೆ ಮಾಡಿದ್ದು ಪ್ರಜ್ಞಾವಂತ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಎಣಿಕೆಗೆ ಚಾಲನೆ: ಸಮರ್ಪಕ ಬೀದಿದೀಪ ಅಳವಡಿಸಲು ನಿಯೋಜನೆ ಗೊಂಡಿರುವ ಪುರಸಭೆಯ ವಿದ್ಯುತ್ ಅಭಿಯಂತರ, ಪ್ರಭಾವಿ ಸದಸ್ಯರ ಒತ್ತಡಕ್ಕೆ ಮಣಿದು ಏನು ಮಾಡಲಾಗದ ಸ್ಥಿತಿಯಲ್ಲಿದ್ದರೆ, ಪುರಸಭೆ ಬೀದಿ ದೀಪಕ್ಕೆ ಮಾಸಿಕ ಇಷ್ಟು ಮೆಗಾವ್ಯಾಟ್ (175ಮೆವ್ಯಾ) ಅನುಮತಿ ಪಡೆದು ಸುಮಾರು 200 ರಿಂದ 250 ಮೆವ್ಯಾ ವಿದ್ಯುತ್ ಹೆಚ್ಚಿಗೆ ಬಳಸುತ್ತಾ, ಮನಬಂದಂತೆ ಕಾರ್ಯ ನಿರ್ವಹಿಸುತ್ತಿರುವುದನ್ನು ಖಂಡಿಸಿ ಪಟ್ಟಣದ ಕೆಲ ಪ್ರಜ್ಞಾವಂತ ನಾಗರಿಕರು, ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಹಲವು ದೂರುಗಳನ್ನು ಸಲ್ಲಿಸಿ, ಗಮನ ಸೆಳೆದ ಮೇರೆಗೆ, ಎಚ್ಚೆತ್ತ ಬೆಸ್ಕಾಂ, ಪುರಸಭೆ ಬೀದಿದೀಪ ಅಸಮರ್ಪಕ ನಿರ್ವಹಣೆಗೆ ಕಡಿವಾಣ ಹಾಕಲು, ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ಬೀದಿ ದೀಪಗಳನ್ನು ಎಣಿಕೆ ಮಾಡಿ, ಆಯಕಟ್ಟಿನ ಜಾಗದಲ್ಲಿ ಬೀದಿ ದೀಪಗಳ ಬಳಕೆಗೆ ಮೀಟರ್ ಹಾಕುವ ಕಾರ್ಯಕ್ಕೆ ಸೋಮವಾರದಿಂದ ಚಾಲನೆ ನೀಡಿದೆ.
ಪುರಸಭೆ ಮುಂದಿನ ದಿನಗಳಲ್ಲಿ ಅನಗತ್ಯವಾಗಿ ಬಳಸುವ ಬೀದಿದೀಪಗಳ ಬಳಕೆಯಿಂದ ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸುವ ಹೊಣೆಗಾರಿಕೆ ಬಿದ್ದು, ಅವಶ್ಯವಿದ್ದಷ್ಟು ಬಳಕೆಗೆ ಮುಂದಾಗುವುದರಿಂದ ಪುರಸಭೆ ಮುಂದಿನ ದಿನಗಳಲ್ಲಿ ಮನಬಂದಂತೆ ಬೀದಿ ದೀಪ ಅಳವಡಿಸುವ ಕ್ರಮಕ್ಕೆ ಕಡಿವಾಣ ಬೀಳಲಿದ್ದು ರಾಷ್ಟ್ರೀಯ ಸಂಪತ್ತಾದ ವಿದ್ಯುತ್ನ ದುರ್ಬಳಕೆ ತಪ್ಪಿದಂತಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

