ತುಮಕೂರು

ಭಾರತದ ಎಲ್ಲ ಸಮಸ್ಯೆಗೆ ಸಂಸ್ಕೃತದಲ್ಲಿ ಉತ್ತರವಿದೆ

Published On :

ತುಮಕೂರು: ಪ್ರಾಂತೀಯತೆ, ಜಾತೀಯತೆ ಮೊದಲಾದ ಭಾರತದ ಎಲ್ಲ ಸಮಸ್ಯೆಗಳಿಗೆ ಸಂಸ್ಕೃತದಲ್ಲಿ ಉತ್ತರವಿದೆ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್ ಹೇಳಿದರು.
ಅವರು ಭಾನುವಾರ ಸುದ್ದಿಗೋಷ್‌ಠಿಯಲ್ಲಿ ಮಾತನಾಡಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಇಂದು ಸಂಸ್ಕೃತವನ್ನು ಸಾರ್ವತ್ರಿಕಗೊಳಿಸುವ ಅವಶ್ಯಕತೆಯಿದೆ ಎಂದರು.
ಮೊಘಲರ ಆಕ್ರಮಣ, ಬ್ರಿಟಿಷರ ಶಿಕ್ಷಣ ಪದ್ಧತಿ ಹಾಗೂ ಕೆಲವೇ ಜಾತಿ-ವರ್ಗಗಳ ಸ್ವತ್ತಾಗಿ ಸಂಸ್ಕೃತ ಉಳಿದುದು ಸಂಸ್ಕೃತದ ಹಿನ್ನೆಡೆಗೆ ಕಾರಣವಾಯಿತು. ಈಗ ಮತ್ತೆ ಸಂಸ್ಕೃತ ಜನರ ನಡುವಿನ ಭಾಷೆಯಾಗಿ ಬೆಳೆಯುತ್ತಿದೆ. ಮೃತಭಾಷೆಗಳ ಪಟ್ಟಿಯಿಂದ ಈಚೆಗೆ ಬಂದು ಸಂಸ್ಕೃತ ಅಪಾಯವನ್ನು ಎದುರಿಸುತ್ತಿರುವ ಭಾಷೆಯಾಗಿ ಬದಲಾಗಿದೆ ಎಂದರು.
ಅವಿನಾಭಾವ ಸಂಬಂಧ: ಸಂಸ್ಕೃತವು ಭಾರತದ ಅಧಿಕೃತ  ಭಾಷೆಯಾಗಿರಬೇಕು ಎಂದು ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಬಯಸಿದ್ದರು. ಆದರೆ ನಮ್ಮ ನಾಯಕರ ದೂರದೃಷ್ಟಿಯ ಕೊರತೆ ಹಾಗೂ ಸಂಕುಚಿತ ದೃಷ್ಟಿಕೋನದಿಂದ ಹಿಂದಿ ಭಾರತದ ರಾಷ್ಟ್ರಭಾಷೆಯಾಯಿತು. ಇದರರ್ಥ ನಾವು ಹಿಂದಿಯನ್ನು ವಿರೋಧಿಸುತ್ತೇವೆ ಎಂದಲ್ಲ. ಸಂಸ್ಕೃತವು ಎಲ್ಲ ಭಾಷೆಗಳೊಂದಿಗೂ ಅವಿನಾಭಾವ ಸಂಬಂಧ ಹೊಂದಿದೆ ಎಂದು ಕಾಮತ್ ಪ್ರತಿಪಾದಿಸಿದರು.
ಸಂಸ್ಕೃತ ಬ್ರಾಹ್ಮಣರ, ಪುರೋಹಿತಶಾಹಿಗಳ ಸೊತ್ತು ಎಂಬ ತಪ್ಪುಕಲ್ಪನೆಯಿದೆ. ಇದು ಸರಿಯಲ್ಲ. ಭಾರತದಲ್ಲಿ ಸಂಸ್ಕೃತವನ್ನು ಮಾತನಾಡುವ ಲಕ್ಷಾಂತರ ಜನರಿದ್ದಾರೆ. ಸ್ವತಃ ಸಂಸ್ಕೃತ ಭಾರತಿಯೇ ಈವರೆಗೆ 1.20 ಲಕ್ಷ ಸಂಸ್ಕೃತ ಶಿಬಿರಗಳನ್ನು ನಡೆಸಿ 80 ಲಕ್ಷಕ್ಕೂ ಹೆಚ್ಚು ಸಂಸ್ಕೃತ ಮಾತನಾಡುವವರನ್ನು ಸೃಷ್ಟಿಸಿದೆ. ಇದರಲ್ಲಿ ಎಲ್ಲಾ ಜಾತಿ ಹಾಗೂ ಪಂಗಡಗಳ ಜನರಿದ್ದಾರೆ ಎಂದರು.
ಸಂಸ್ಕೃತದಲ್ಲಿ 45 ಲಕ್ಷ ಹಸ್ತಪ್ರತಿಗಳು ಲಭ್ಯವಾಗಿದ್ದು, 20 ಸಾವಿರಕ್ಕಿಂತಲೂ ಹೆಚ್ಚು ಹಸ್ತಪ್ರತಿಗಳು ಮುದ್ರಣಗೊಂಡಿವೆ. ಭಾರತದಲ್ಲಿ ಸುಮಾರು 112 ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತವನ್ನು ಬೋಧಿಸಲಾಗುತ್ತಿದೆ.  ಭಾರತದ ಹೊರಗೆ 240  ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತವನ್ನು ಬೋಧಿಸಲಾಗುತ್ತಿದೆ. ಭಾರತದಲ್ಲಿ 14 ವಿಶ್ವವಿದ್ಯಾನಿಲಯಗಳನ್ನು ಸಂಸ್ಕೃತಕ್ಕಾಗಿಯೇ ಸ್ಥಾಪಿಸಲಾಗಿದೆ ಎಂದರು.
ಸಂಸ್ಕೃತದ ಅಭಿವೃದ್ಧಿಗಾಗಿ ಸಂಸ್ಕೃತ ಭಾರತಿ ಕೈಗೊಂಡಿರುವ ಹಲವಾರು ಯೋಜನೆಗಳ ವಿವರ ನೀಡಿದರು. ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಎನ್. ಲಕ್ಷ್ಮೀಕಾಂತ, ಸ್ವಾಗತ ಸಮಿತಿಯ ಕೋಶಾಧ್ಯಕ್ಷ ಸಿ. ವಿ. ಕೇಶವಮೂರ್ತಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.