ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕ ಜಾರಿಗೆ ಎಸ್ಐಓ ಒತ್ತಾಯ
ಕ.ಪ್ರ. ವಾರ್ತೆ ತುಮಕೂರು ಜು.5
ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸುವಂತೆ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ (ಎಸ್ಐಓ) ಸಂಘಟನೆಯ ರಾಜ್ಯಾಧ್ಯಕ್ಷ ತೌಸೀಫ್ ಅಹಮದ್ ಮಡಿಕೇರಿ ಒತ್ತಾಯಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಶಿಕ್ಷಣ ವ್ಯವಸ್ಥೆಯ ಕುರಿತು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಸಂಘಟನೆ ಕಳೆದ 30 ವರ್ಷಗಳಿಂದಲೂ ಹಲವಾರು ಚರ್ಚೆಗಳನ್ನು ಹಾಗೂ ಅಧ್ಯಯನಗಳನ್ನು ನಡೆಸಿದೆ. ರಾಜ್ಯದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಯಾಗಿ 3 ವರ್ಷ ಕಳೆದರೂ ಸಮಸ್ಯೆಗಳು ಹಾಗೆ ಉಳಿದುಕೊಂಡಿವೆ. ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕ ಅಧ್ಯಯನ ನಡೆಯದಿರುವುದು ದುರಂತವೇ ಸರಿ ಎಂದರು.
ಶಿಕ್ಷಣ ಹಕ್ಕು ಕಾಯ್ದೆಯೆಂದರೆ ಕೇವಲ ಖಾಸಗಿ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಸೀಟು ಎಂಬುದನ್ನು ಮಾತ್ರ ಪ್ರಚುರಪಡಿಸಲಾಗಿದೆ. ಕಾಯ್ದೆಯ ಇತರ ಆಯಾಮಗಳನ್ನು ಹೆಚ್ಚಾಗಿ ಪ್ರಚಾರ ಮಾಡಲಿಲ್ಲ. ಸಾರ್ವಜನಿಕರಲ್ಲಿಯೂ ಆರ್ಟಿಇ ಎಂದರೆ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟು ಎಂಬ ಭಾವನೆ ಇದೆ. ದೂರುಗಳು ಕೂಡ ಹೆಚ್ಚಾಗಿ ಸೀಟುಗಳಿಗೆ ಸಂಬಂಧಿಸಿದ್ದೇ ಆಗಿದೆ. ಸೀಟು ನಿರಾಕರಣೆ, ಅಲ್ಪಸಂಖ್ಯಾತರ ಶಾಲೆ ಎಂದು ಸುಳ್ಳು ಮಾಹಿತಿ ನೀಡುವುದು. ಮಕ್ಕಳಿಗೆ ಮತ್ತು ಪೋಷಕರಿಗೆ ಪ್ರವೇಶ ಪರೀಕ್ಷೆ ನಡೆಸುವುದು. ಹೀಗೆ ಹಲವು ದೂರುಗಳು ದಾಖಲಾಗಿವೆ. ಸೇವೆಯ ಹೆಸರಿನಲ್ಲಿ ಸರ್ಕಾರಿಂದ ಉಚಿತ ಅಥವಾ ರಿಯಾಯ್ತಿಯಲ್ಲಿ ಹಲವಾರು ಸೌಲಭ್ಯಗಳನ್ನು ಪಡೆದು ಶಾಲೆ ತೆರೆಯುವ ಶಾಸಗಿ ಸಂಸ್ಥೆಗಳು, ಸಮಾಜದ ಬಡವರ್ಗದ ಮಕ್ಕಳಿಗೆ ಉಚಿತ ಸೀಟು ನಿರಾಕರಿಸುವ ಮೂಲಕ ತಾವು ಮಾಡುವ ಸೇವೆಯ ಸ್ಯಾಂಪಲ್ಲನ್ನು ನಮ್ಮ ಮುಂದೆ ಇಟ್ಟಿದೆ. ಇತರೆಲ್ಲಾ ರಾಜ್ಯಗಳಿಗಿಂತ ಹೆಚ್ಚಾಗಿ ಕರ್ನಾಟಕ ಸರ್ಕಾರ ಪ್ರತಿ ವಿದ್ಯಾರ್ಥಿಯ ಶುಲ್ಕ ರು. 11,600 ನೀಡುತ್ತಿರುವುದು ವಿಶೇಷ. ಶುಲ್ಕ ಪಾವತಿಯಲ್ಲೂ ಕೂಡ ಸರ್ಕಾರ ವಿಳಂಬ ಮಾಡಿದೆಯೆಂಬ ದೂರುಗಳು ಕೇಳಿ ಬಂದಿವೆ ಎಂದು ಮಾಹಿತಿ ನೀಡಿದರು.
ಅಲ್ಪಸಂಖ್ಯಾತರ ಶಾಲೆಯಲ್ಲೂ ನಿರಾಕರಣೆ: ಅಲ್ಪಸಂಖ್ಯಾತರಿಗೆ ಯಾವುದೇ ರಿಯಾಯ್ತಿ ನೀಡದೇ ಅಥವಾ ಅವರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸದೇ ಕೇವಲ ಶಿಕ್ಷಣದ ವ್ಯಾಪಾರೀಕರಣ ನಡೆಸುವ ಹಲವಾರು ಶಾಲೆಗಳು ಉಚಿತ ಸೀಟುಗಳ ವಿಚಾರಕ್ಕೆ ಬಂದಾಗ ಬಹಳ ಹೆಮ್ಮೆಯಿಂದ ನಮ್ಮದು ಅಲ್ಪಸಂಖ್ಯಾತರ ಶಾಲೆಯೆಂದು ಹೇಳಿ ತಪ್ಪಿಸಿಕೊಳ್ಳುತ್ತಿವೆ. ಸರ್ಕಾರ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಶೇ. 75 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರಬೇಕೆಂದು ನಿಗಧಿಪಡಿಸಿದೆ. ಆದರೆ ಅಷ್ಟು ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಲ್ಲದ ಶಾಲೆಗಳು ಕೂಡ ಉಚಿತ ಸೀಟು ನೀಡಲು ನಿರಾಕರಿಸಿವೆ ಎಂದು ತೌಸೀಫ್ ಅಹಮದ್ ಮಡಿಕೇರಿ ತಿಳಿಸಿದರು.
ಸರ್ಕಾರ ಮರೆತಿದೆ: ಆರ್ಟಿಇ ಯಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಶಿಕ್ಷಕರು, ಆಟದ ಮೈದಾನ, ಶೌಚಾಲಯಗಳು ಮತ್ತು ಇನ್ನಿತರ ಸೌಲಭ್ಯಗಳ ಬಗೆಗಿರುವ ವಿಚಾರವನ್ನು ಸರ್ಕಾರ ಮರೆತಿದೆ. ಎಸ್ಐಓ ಕಳೆದ ವರ್ಷ ಸುಮಾರು 15 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಡಿ ಗ್ರೂಪ್ ನೌಕರರಿಲ್ಲದ, ಶೌಚಾಲಯಗಳು, ಶಿಕ್ಷಕರು ಮತ್ತು ಆಟದ ಮೈದಾನವಿಲ್ಲದ ಸಾಕಷ್ಟು ಶಾಲೆಗಳು ಕರ್ನಾಟಕದಲ್ಲಿವೆ. ಪ್ರಥಮ್ ಸಂಸ್ಥೆಯ 2012 ರ ವರದಿಯ ಪ್ರಕಾರ ಶಿಕ್ಷಣದ ಗುಣಮಟ್ಟ ಕೂಡ ಇನ್ನಷ್ಟು ಕುಸಿದಿದೆ. ಜನರಿಗೆ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ್ದು. ಆದ್ದರಿಂದ ಶಿಕ್ಷಣ ಹಕ್ಕು ಕಾಯ್ದೆಯ ಇತರ ಆಯಾಮಗಳನ್ನು ಸರ್ಕಾರ ಆದಷ್ಟು ಬೇಗ ಅನುಷ್ಟಾನಕ್ಕೆ ತರಬೇಕಿದೆ. ಅಷ್ಟು ಮಾತ್ರವಲ್ಲದೇ, ಶಿಕ್ಷಣ ಹಕ್ಕು ಕಾಯ್ದೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸರ್ಕಾರ ಕೂಡಲೇ ಅದನ್ನು ಕಾಯ್ಕ್ರಮಗಳ ಮೂಲಕ ರಾಜ್ಯಾದ್ಯಂತ ಆಯೋಜಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಎಸ್ಐಓ ಅಧ್ಯಕ್ಷ ಮಸೂದುರ್ರಾಖಾನ್, ಕಾರ್ಯದರ್ಶಿ ಇನಾಮುಲ್ಲಾಖಾನ್, ಸಾರ್ವಜನಿಕ ಸಂಪರ್ಕಾಧಿಕಾರಿ ಶಾಕಿರ್ ಅಹಮದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

