2 ವಾರದಲ್ಲಿ ಮರಳು ನೀತಿ ಜಾರಿ: ಸಚಿವ ಜಯಚಂದ್ರ
ಕ.ಪ್ರ.ವಾರ್ತೆ , ತುಮಕೂರು , ಜು. 6
ಇನ್ನೆರಡು ವಾರದಲ್ಲಿ ರಾಜ್ಯದಲ್ಲಿ ಮರಳು ನೀತಿ ಜಾರಿಯಾಗಲಿದೆ. ಈ ಕುರಿತು ಚರ್ಚೆಗಳು ನಡೆದಿದ್ದು, ಸಿದ್ಧತೆಗಳು ನಡೆದಿವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಈವರೆವಿಗೆ ಮರಳು ನೀತಿ ಜಾರಿಯಲ್ಲಿರಲಿಲ್ಲ ಎಂದರೆ ಜನ ನಂಬುವುದಿಲ್ಲ. ಆದರೆ ಇದು ಸತ್ಯ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮರಳು ನೀತಿ ಜಾರಿ ಕುರಿತಂತೆ ರಾಜ್ಯಪಾಲರ ಭಾಷಣದಲ್ಲೂ ಹೇಳಲಾಗಿದೆ ಎಂದರು.
ಮರಳಿಗೆ ಪರ್ಯಾಯವಾಗಿ ಜಲ್ಲಿಪುಡಿಯನ್ನು ಈಗಾಗಲೇ ಬಳಸಲಾಗುತ್ತಿದೆ. ಇನ್ನು ಮುಂದೆ ಜಲ್ಲಿ ಕ್ರಷರ್ಗಳ ಮೂಲಕ ಮರಳಿಗೆ ಪರ್ಯಾಯವಾಗಿ ಜಲ್ಲಿಪುಡಿಯನ್ನು ಸರಬರಾಜು ಮಾಡಲಾಗುವುದು. ಈ ಕುರಿತಂತೆ ಸಿದ್ಧತೆಗಳು ನಡೆದಿವೆ. ಇನ್ನು ಮುಂದೆ ಮರಳು ಸಾಗಣೆಗೆ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಕಾಲ ನಿಗಧಿ ಮಾಡಲಾಗುವುದು. ಮರಳು ಒಂದು ಸಮಾಜೋ - ಆರ್ಥಿಕ ವಿಷಯವಾಗಿದೆ. ಈ ಸಂಬಂಧ ಶೀಘ್ರದಲ್ಲೇ ನೀತಿ ರೂಪಿಸಲಾಗುವುದು ಎಂದರು.
ಪಿಂಚಣಿ ಅದಾಲತ್: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ತಮ್ಮ ಶಿರಾ ಕ್ಷೇತ್ರದಲ್ಲಿ ಪಿಂಚಣಿ ಅದಾಲತ್ ಅನ್ನು ಶನಿವಾರ ಆಯೋಜಿಸಿದ್ದೆ. ಅಂಗವಿಕಲ, ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರೆ ಪಿಂಚಣಿಗೆ ಸಂಬಂಧಿಸಿದಂತೆ ಸ್ಥಳದಲ್ಲೇ 401 ಮಂದಿಗೆ ಮಂಜೂರಾತಿ ನೀಡಲಾಗಿದೆ. ಜನ ಸಂಬಂಧಪಟ್ಟ ದಾಖಲಾತಿ ಮಾಡಿಸಿಕೊಳ್ಳಲು ಇಲಾಖೆಗಳಿಗೆ ಕಾಲು ಸವೆಸಿ ಅವರ ಮನೆಗಳು ಹಾಳಾಗಿ ಹೋಗಿವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಈ ವಿನೂತನ ಪಿಂಚಣಿ ಅದಾಲತ್ ಆಯೋಜಿಸಿದ್ದೆ. ಬಾಬು ಜಗಜೀವನ್ರಾಂ ಸ್ಮರಣೆ ಹಿನ್ನೆಲೆಯಲ್ಲಿ ಈ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಹೇಮಾವತಿ ನೀರು: ಹೇಮಾವತಿ ನೀರು ತುಮಕೂರಿನತ್ತ ಬರಲು ಕನಿಷ್ಠ 15 ಟಿಎಂಸಿ ಡ್ಯಾಂನಲ್ಲಿರಬೇಕು. ಈಗ ಸುಮಾರು 14.7 ಟಿಎಂಸಿ ನೀರಿದೆ ಎಂಬ ಮಾಹಿತಿ ಬಂದಿದೆ. 15 ಟಿಎಂಸಿ ತಲುಪಿದ ಕೂಡಲೇ ನೀರು ತುಮಕೂರಿನತ್ತ ಹರಿದು ಬರಲಿದೆ. ಈ ಕುರಿತು ಈಗಾಗಲೇ ಸಂಬಂಧಪಟ್ಟ ಎಂಜಿನಿಯರ್ಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಜಿಪಂ ಸಿಇಓ ಗೋವಿಂದರಾಜು ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

