ತುಮಕೂರು

ಅನ್ನ ಭಾಗ್ಯ ಜನತೆಯ ಹಕ್ಕು: ಸಚಿವ ಜಯಚಂದ್ರ

Published On :

ಕ.ಪ್ರ. ವಾರ್ತೆ   ತುಮಕೂರು   ಜು.10
ಅಧಿಕಾರ ವಹಿಸಿಕೊಂಡ ಕೆಲವೇ ಘಂಟೆಗಳಲ್ಲಿ ಪ್ರಣಾಳಿಕೆಯಲ್ಲಿದ್ದ ಬಹುಮುಖ್ಯ ಅಂಶವನ್ನು ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಅವರು ತುಮಕೂರಿನ ಸಪಪೂ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ,ಆಹಾರ-ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಿಪಿಎಲ್ ಪಡಿತರದಾರರಿಗೆ ಏರ್ಪಾಟಾಗಿದ್ದ ಅನ್ನಭಾಗ್ಯ ಕಾರ್ಯಕ್ರಮ ಯೋಜನೆ ಉದ್ಘಾಟಿಸಿ ಮಾತನಾಡಿದರು.
ಹಸಿವು ರಹಿತ ರಾಜ್ಯ ಮಾಡಬೇಕೆಂಬ ಹಿನ್ನೆಲೆಯಲ್ಲಿ ಒಂದು ರು. ಗೆ ಒಂದು ಕೆಜಿ ಅಕ್ಕಿಯಂತೆ ತಿಂಗಳಿಗೆ 30 ಕೆಜಿ ಅಕ್ಕಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲೇ ಘೋಷಿಸಿದರು.
ಬಡಜನತೆಯ ದೃಷ್ಟಿಯಿಂದ ಈ ಕಾರ್ಯಕ್ರಮ ಜಾರಿ ಅನಿವಾರ್ಯವಾಗಿತ್ತು. ಇಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ವೇಳೆ ಆಡಳಿತಾತ್ಮಕ ತೊಂದರೆಗಳಿರುತ್ತವೆ. ಕಾರ್ಯಕ್ರಮ ಜಾರಿಗೆ ಈಗಲೇ ಅವಸರ ಏನಿತ್ತು ಎಂಬ ಟೀಕೆ-ಟಿಪ್ಪಣಿಗಳು ಇದ್ದವು. ಆದರೆ ಕಾರ್ಯಕ್ರಮ ಜಾರಿಗೊಳಿಸಿದ್ದರಲ್ಲಿ ಯಾವ ತಪ್ಪಿದೆ. ಕೊಟ್ಟ ಭರವಸೆ ಈಡೇರಿಸುವುದು ತಪ್ಪೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಬದ್ಧತೆ ಮುಖ್ಯ: ಕೊಟ್ಟ ಭರವಸೆ ಈಡೇರಿಸುವುದು ಬದ್ಧತೆಯಿದ್ದಾಗ ಮಾತ್ರ ಸಾಧ್ಯ. ಬದ್ಧತೆಯಿದ್ದಾಗ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಅನ್ನ ಭಾಗ್ಯ ಜನತೆಯ ಹಕ್ಕು. ನನ್ನ ಹಕ್ಕು ಎಂಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ. ಕಾರ್ಯಕ್ರಮ ಜಾರಿಯ ಕುರಿತೇ ಅನೇಕ ಅನುಮಾನಗಳು ಹುಟ್ಟುವ ರೀತಿಯಲ್ಲಿ ಸುದ್ದಿಗಳು ಬರತೊಡಗಿದವು. ಅಕ್ಕಿ ಲಭ್ಯತೆ, ಹಣಕಾಸು ಕುರಿತು ಅನುಮಾನಗಳು ಬರುವ ರೀತಿಯಲ್ಲಿ ಸುದ್ದಿಗಳು ಬರತೊಡಗಿದವು. ಆದರೆ ಕೊಟ್ಟ ಮಾತಿನಂತೆ ಪ್ರಣಾಳಿಕೆ ಭರವಸೆ ಈಡೇರಿಸುವುದರ ಮೂಲಕ, ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಲಾಗಿದೆ. ಈ ಯೋಜನೆಗೆ 4500 ಕೋಟಿ ರು. ವೆಚ್ಚವಾಗಲಿದೆ. ಈ ದಿನ ಬಡಜನತೆ ನಿಟ್ಟುಸಿರುವ ಬಿಡುವ ದಿನ ಕೂಡ ಎಂದು ಜಯಚಂದ್ರ ಪ್ರತಿಪಾದಿಸಿದರು.
ಕೇಂದ್ರ ಸರ್ಕಾರದ ಆಹಾರಭದ್ರತೆ ಕಾಯ್ದೆ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವಿದೆ. ಸಮ್ಮಿಶ್ರ ಸರ್ಕಾರ ಇರುವ ಕಡೆ ಅನೇಕ ಅಡ್ಡಿ-ಆತಂಕಗಳು ಸಹಜ. ಎಲ್ಲ ಅಡ್ಡಿ ಆತಂಕಗಳ ಮಧ್ಯೆ ಕೂಡ ಮನಮೋಹನ್ಸಿಂಗ್ ನೇತೃತ್ವದ ಸರ್ಕಾರ ಕೇಂದ್ರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದೆ. ಇದು ವಿಶ್ವದಲ್ಲೇ ಪ್ರಥಮ ಎಂದರೆ ತಪ್ಪಾಗಲಾರದು. ಈ ಯೋಜನೆಯಿಂದ 3 ರು. ಗೆ 35 ಕೆಜಿ ಅಕ್ಕಿ ದೊರೆಯಲಿದೆ. ಇದರಿಂದ ರಾಜ್ಯಕ್ಕೆ ಹೊರೆ ಕಡಿಮೆಯಾಗಲಿದೆ. ಹಾಗಂತ ಅನ್ನಭಾಗ್ಯ ಯೋಜನೆಯಿಂದ ದೂರ ಸರಿಯುವುದು ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದರು.
97 ಲಕ್ಷ ಬಿಪಿಎಲ್ ಕಾರ್ಡ್ದಾರರು: 10 ವರ್ಷಗಳ ಹಿಂದೆ ತಾವು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದೆ. ಇಲಾಖೆಯ ಅನುಭವ ಚೆನ್ನಾಗಿಯೇ ಇದೆ. ಸಮಸ್ಯೆಗಳ ಅರಿವು ಇದೆ. ರಾಜ್ಯದಲ್ಲಿ 97 ಲಕ್ಷ ಮಂದಿ ಬಿಪಿಎಲ್ ಕಾರ್ಡ್ದಾರರಿದ್ದಾರೆ ಎಂಬ ಮಾಹಿತಿಯಿದೆ. ಅನಧಿಕೃತ ಕಾರ್ಡ್ದಾರರನ್ನು ಗುರುತಿಸಿ, ಬಿಪಿಎಲ್ ಪಟ್ಟಿಯಿಂದ  ಹೊರಗಿಡುವ ಕೆಲಸ ಕೂಡ ಆಗಬೇಕಿದೆ. ತೂಕದಲ್ಲಿ ಮೋಸ ತಡೆಗಟ್ಟುವ ಹಿನ್ನೆಲೆಯಲ್ಲಿ ಬಯೋವುಟ್ರಿಕ್ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
 ತಿಪಟೂರು ಶಾಸಕ ಷಡಕ್ಷರಿ, ಪಾವಗಡ ಶಾಸಕ ತಿಮ್ಮರಾಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಎಡಿಸಿ ಪೆದ್ದಪ್ಪಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.