ಬಡಮಕ್ಕಳಿಗೆ ಉಚಿತ ಪುಸ್ತಕ ವಿತರಣೆ
ಬಡಮಕ್ಕಳಿಗೆ ಉಚಿತ ಪುಸ್ತಕ ವಿತರಣೆ
ಚಿಕ್ಕನಾಯಕನಹಳ್ಳಿ: ಖಾಸಗಿ ಶಾಲೆಗಳಲ್ಲಿರುವಂತೆ ಸರ್ಕಾರಿ ಶಾಲೆಗಳಲ್ಲಿಯು ಸಹ ಇಂದು ಆಟ, ಪಾಠ ಮತ್ತು ಆರೋಗ್ಯದಂತಹ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ಮಟ್ಟಕ್ಕೆ ಬೆಳೆದಿವೆ ಎಂದು ಶಿಕ್ಷಕ ಸಿ.ಗುರುಮೂರ್ತಿ ನುಡಿದರು. ಅವರು ಪಟ್ಟಣದ ಶ್ರೀರೇವಣಸಿದ್ದೇಶ್ವರ ಮಠದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸ್ಪಂದನ ಜನಸೇವಾ ಪ್ರಗತಿಪರ ಒಕ್ಕೂಟದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.ಶಿಕ್ಷಣ ಇಲಾಕೆ ವಿದ್ಯಾರ್ಥಿಗಲ ಅಭ್ಯುದಯಕ್ಕಾಗಿ ಆರ್.ಟಿ. ಸಿ.ಸಿ.ಇ ಕಾಯ್ದೆ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳ ಆರ್ಥಿಕ ನೆರವಿಗಾಗಿ ಹಲವು ಸಂಘ ಸಂಸ್ಥೆಗಳು ಉಚಿತ ನೋಟ್ಬುಕ್, ಬಿಸಿಯೂಟಕ್ಕೆ ಬೇಕಾಗುವ ತಟ್ಟೆ ಲೋಟ, ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯ ಒದಗಿಸುತ್ತಿದ್ದು,ಇದರಿಂದ ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯವನ್ನು ಶಿಕ್ಷಣದ ಕಡೆ ಕೇಂದ್ರೀಕರಿಸುವಂತೆ ಅವರು ಹಿತನುಡಿಗಳನ್ನು ಹೇಳಿದರು. ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೇ ಇಂದು ಉನ್ನತ ಹುದ್ದೆಗಳನ್ನಲಂಕರಿಸಿದ್ದಾರೆ. ಇಂಜಿನಿಯರ್, ವೈದ್ಯಕೀಯ ಪದವಿಗಳನ್ನು ಪಡೆದಿದ್ದಾರೆ ಎಂದರು. ಸಿಆರ್ಪಿ ದುರ್ಗಯ್ಯ ಸ್ಪಂದನ ಒಕ್ಕೂಟದ ಅಧ್ಯಕ್ಷ ತ್ಯಾಗರಾಜು, ಎಸ್ಡಿಎಂಸಿ ಅಧ್ಯಕ್ಷ ರಮೇಶ್ ಮುಂತಾದವರಿದ್ದರು.
ಸ್ವಾಗತ ಸಮಾರಂಭ
ತುಮಕೂರು: ವಿಜ್ಞಾನ ಮತ್ತು ಮಾನವಿಕ ವಿಜ್ಞಾನಗಳ ಅಧ್ಯಯನದಿಂದ ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿಯಬಹುದು ಎಂದು ನಿವೃತ್ತ ಪ್ರಾಚಾರ್ಯ ಡಾ. ನಿರಂಜನಾರಾಧ್ಯ ಅಭಿಪ್ರಾಯಪಟ್ಟರು. ಅವರು ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ 2013 ರ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಇಂದು ಭೌತಿಕ ಮತ್ತು ಮಾನವಿಕ ಶಾಸ್ತ್ರಗಳ ಪದವಿ ಪಡೆಯುವುದು ಅಗತ್ಯವಾಗಿದೆ. ರಾಜ್ಯವನ್ನಾಳುತ್ತಿರುವ ಪ್ರಮುಖ ವ್ಯಕ್ತಿಗಳೆಲ್ಲರೂ ವಿಜ್ಞಾನ ಮತ್ತು ಮಾನವಿಕ ವಿಜ್ಞಾನಗಳ ಪದವಿ ಪಡೆದು ಯಶಸ್ಸು ಕಂಡಿದ್ದಾರೆ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಬೇಕಾದರೆ ವಿಜ್ಞಾನ ಮತ್ತು ಮಾನವಿಕ ವಿಜ್ಞಾನಗಳ ಅರಿವು ಅಗತ್ಯ . ವಿದ್ಯಾರ್ಥಿಗಳು ಶ್ರಮವಹಿಸಿ ಆಳವಾದ ವ್ಯಾಸಂಗ ಮಾಡಿ ಪ್ರಗತಿ ಹೊಂದಬೇಕು ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಂಶುಪಾಲ ಪ್ರೊ. ಹೆಚ್.ಎನ್. ವಿಜಯೇಂದ್ರರು ಕಾಲೇಜಿನಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಯೋಜನಾಧಿಕಾರಿ ಡಾ. ವೈ.ಎಂ. ರೆಡ್ಡಿಯವರು ಶಿಕ್ಷಣ ಕ್ಷೇತ್ರದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಚಂದ್ರಕಾಂತಸ್ವಾಮಿ ಪ್ರಾರ್ಥಿಸಿ, ಪ್ರಾಧ್ಯಾಪಕರಾದ ಎಸ್.ಎಸ್. ಆರಾಧ್ಯ ಸ್ವಾಗತಿಸಿದರು. ಶಿವಲಿಂಗಪ್ಪ ವಂದಿಸಿದರು. ಬಿ.ಮಂಜೇಗೌಡ ನಿರೂಪಿಸಿದರು. ಸಮಾರಂಭದಲ್ಲಿ ಕಾಲೇಜಿನ ಅಧ್ಯಾಪಕ ವರ್ಗ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕ ವರ್ಗದವರು ಉಪಸ್ಥಿತರಿದ್ದರು.
ವಿಚಾರ ಸಂಕಿರಣ
ಚಿಕ್ಕನಾಯಕನಹಳ್ಳಿ: ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುಜಿಸಿ ಪ್ರಾಯೋಜಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲ ಪ್ರೊ. ಬಸವಲಿಂಗಯ್ಯನವರು ತಿಳಿಸಿದ್ದಾರೆ. ಜುಲೈ 15ರಂದು ನವೋದಯ ಪದವಿ ಕಾಲೇಜಿನ ಕ್ಯಾಂಪಸ್ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಹೊಸ ಪೀಳಿಗೆಗಾಗಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಎಂಬ ವಿಷಯದ ಬಗ್ಗೆ ರಾಜ್ಯದ ಖ್ಯಾತ ವಿಶ್ವವಿದ್ಯಾನಿಲಯಗಳ ವಿಷಯ ಪ್ರಾಜ್ಞರು ವಿಷಯ ಮಂಡಿಸಲಿದ್ದಾರೆ. 15ರಂದು ಬೆಳಿಗ್ಗೆ 10.00 ಗಂಟೆಗೆ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಜೆ.ಸಿ.ಮಾಧುಸ್ವಾಮಿಯವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಕಾರ್ಯದರ್ಶಿಗಳಾದ ಬಿ.ಕೆ.ಚಂದ್ರಶೇಖರ್ ನೆರವೇರಿಸಲಿದ್ದಾರೆ.ಅಂತರಾಷ್ಟ್ರೀಯ ಕಲಾವಿದರಾದ ಡಾ.ಕೆ.ಟಿ.ಶ್ರೀಧರ್ರವರು ಆಶಯ ಭಾಷಣ ಮಾಡಲಿದ್ದು, ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷರಾದ ಪ್ರೊ.ಎಂ.ರೇಣುಕಾರ್ಯ ಭಾಗವಹಿಸಲಿದ್ದಾರೆ.
ಜಿಪಂ ಸಿಇಒ ಪರಿಶೀಲನೆ
ಪಾವಗಡ: ಫ್ಲೋರೈಡ್ಯುಕ್ತ ಕುಡಿಯುವ ನೀರು ಸೇರಿದಂತೆ ತಾ.ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣಕ್ಕೆ ಜಿಪಂ ಸಿಇಒ ಗೋವಿಂದರಾಜುಲು ಭೇಟಿ ನೀಡಿ ಸಮಸ್ಯೆ ಕುರಿತು ಪರಿಶೀಲನೆ ನಡೆಸಿದರು. ಬೆಳಿಗ್ಗೆ 12ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಜಿಪಂ ಸಿಇಒ ತಾ.ಮಟ್ಟದ ಅಧಿಕಾರಿಗಳೊಂದಿಗೆ ವೈ.ಎನ್ ಹೊಸಕೋಟೆಗೆ ಭೇಟಿ ನಂತರ ಹೊಸಕೋಟೆ ಗ್ರಾಪಂನಲ್ಲಿ ಸಭೆ ಏರ್ಪಡಿಸಿ ಫ್ಲೋರೈಡ್ ಹಾಗೂ ವಿವಿಧ ವಾರ್ಡುಗಳಲ್ಲಿ ಸಮರ್ಪಕ ಕುಡಿಯುವ ನೀರಿನ ಸರಬರಾಜು ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮಂಜೂರಾತಿ, ನೈರ್ಮಲ್ಯ ಸ್ವಚ್ಛತೆ ಸೇರಿದಂತೆ ವಿವಿಧ ಯೋಜನೆಗಳ ಪಂಚಾಯಿತಿ ಅಭಿವೃದ್ಧಿ ಕುರಿತು ಚರ್ಚಿಸಿದರು. ಇದೇ ಸಂದರ್ಭದಲ್ಲಿ ತಾಪಂ ಇಒ ರಂಗನಾಥ್, ಜಿಪಂ ಎಇಇ ಆಶೋಕರೆಡ್ಡಿ, ಕೃಷಿ ಸಹಾಯಕ ನಿರ್ದೇಶಕ ಶ್ರೀಧರ್, ಸಿಡಿಪಿಒ ಉಷಾ, ಜಲಾನಯನ ಅಭಿವೃದ್ಧಿ ಅಧಿಕಾರಿ ಪುಟ್ಟರಂಗಪ್ಪ, ಗ್ರಾಪಂ ಕಾರ್ಯದರ್ಶಿ ತಿಪ್ಪಣ್ಣ ಸೇರಿದಂತೆ ಗ್ರಾಪಂ ಪಿಡಿಒ, ಅಧ್ಯಕ್ಷೆ ಹಾಗೂ ಎಲ್ಲಾ ಗ್ರಾಪಂ ಸದಸ್ಯರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

