ವಾರಕ್ಕೊಮ್ಮೆ ಸ್ನಾನ, ಕುಡಿವ ನೀರಿಗೆ ಹಾಹಾಕಾರ
ತುರುವೇಕೆರೆ: ಸಾರ್ ನಾವು ನೆಟ್ಟಗೆ ಸ್ನಾನ ಮಾಡಿ ಅದೆಷ್ಟೋ ತಿಂಗಳಾಯಿತು. ಪ್ರತಿ ವಾರಕ್ಕೊಮ್ಮೆ ಮನೆ ಶುದ್ಧ ಮಾಡಿ ದೇವರ ವಾರ ಮಾಡ್ತಿದ್ವಿ. ಈಗ ಮನೆ ಶುದ್ಧ ಮಾಡಿಯೂ ಅದೆಷ್ಟೋ ದಿನ ಆತು. ಇನ್ನು ಕುಡಿಯುವ ನೀರಿಗೆ ಪಡುತ್ತಿರೋ ಸಂಕಟ ಹೇಳಕ್ಕಾಗಲ್ಲ. ಒಂದೊಂದು ತೋಟದವರನ್ನ ಕಾಡಿ ಬೇಡಿ ಒಂದೆರಡು ಕೊಡ ನೀರು ತರಬೇಕು. ಈ ಸಮಸ್ಯೆನಾ ಅದೆಷ್ಟು ಸಾರಿ ಗ್ರಾಮ ಪಂಚಾಯಿತಿಯವರಿಗೆ ಹೇಳಿದರೂ ಕೇಳೋ ಮನಸ್ಸಿಲ್ಲ. ಅದಕ್ಕೆ ನಾವೆಲ್ಲರೂ ಸೇರಿ ಗ್ರಾಮ ಪಂಚಾಯ್ತಿ ಹಾಗೂ ತಾಲೂಕು ಪಂಚಾಯಿತಿಗೆ ಬೀಗ ಜಡಿದು ಪೊರಕೆಯೊಂದಿಗೆ ಖಾಲಿ ಬಿಂದಿಗೆ ಪ್ರದರ್ಶನ ಮಾಡ್ಬೇಕು ಅಂತ ಅಂದ್ಕಂಡಿದಿವಿ...
ಈ ಮಾತುಗಳನ್ನು ಹೇಳಿದವರು ಪಟ್ಟಣಕ್ಕೆ ಹೊಂದಿಕೊಂಡಿರುವ ರಾಘವೇಂದ್ರ ನಗರ ಹಾಗೂ ಕೊಟ್ಟೂರಿನ ಕೊಟ್ಟಿಗೆಯ ನಿವಾಸಿಗಳು.
4 ಬಿಂದಿಗೆ ನೀರು: ಪಟ್ಟಣಕ್ಕೆ ಸೇರಿಕೊಂಡಂತಿರುವ ರಾಘವೇಂದ್ರ ನಗರ ಹಾಗೂ ಕೊಟ್ಟೂರನಕೊಟ್ಟಿಗೆ ಗ್ರಾಮ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮನೆಗಳಿವೆ. ಕಳೆದ ಮೂರ್ನಾಲ್ಕು ತಿಂಗಳಿಂದ ನೀರಿಗೆ ತತ್ವಾರ ಪ್ರಾರಂಭವಾಗಿದೆ. ಮನೆಗಳಿಗೆ ಕುಡಿಯುವ ನೀರು ಹಾಗೂ ಮನೆ ಬಳಕೆಗೆ 4 ಬೋರ್ ವೆಲ್ಗಳು ಇದ್ದವು. ಇವುಗಳಲ್ಲಿ ಮೂರು ಬೋರ್ ವೆಲ್ಗಳು ಒಣಗಿವೆ. ನೀರಿಗಾಗಿ ಹನ್ನೆರಡು ಮಿನಿ ಟ್ಯಾಂಕ್ ಗಳಿದ್ದವು. ಈಗ ಕೇವಲ ಒಂದು ಬೋರ್ ವೆಲ್ ಮಾತ್ರ ಇದ್ದುದರಲ್ಲಿ ಸ್ವಲ್ಪ ನೀರು ನೀಡುತ್ತಿದೆ. ಹಾಗಾಗಿ ಪ್ರತಿ ನಾಲ್ಕು ದಿನಕ್ಕೆ 4 ಬಿಂದಿಗೆ ನೀರು ಬಿಡಲಾಗುತ್ತಿದೆ. ಈ ನಾಲ್ಕು ಬಿಂದಿಗೆ ನೀರಿನಲ್ಲಿ ಮನೆ ಮಂದಿಯೆಲ್ಲಾ ಕುಡಿದು, ಮನೆ ಬಳಕೆ ಮಾಡಿಕೊಂಡು ಸ್ನಾನ ಮಾಡಬೇಕು. ಗ್ರಾಮಾಂತರ ಪ್ರದೇಶಕ್ಕೆ ಅನುಗುಣವಾಗಿ ವಾರದಲ್ಲಿ ಒಮ್ಮೆ ಮನೆ ಶುದ್ಧಗೊಳಿಸಿ ಮನೆ ಮಂದಿಯೆಲ್ಲಾ ಸ್ನಾನ ಮಾಡಿಕೊಂಡು ದೇವರ ಪೂಜೆ ಮಾಡುತ್ತಿದ್ದೆವು. ಈಗ ವಾರದಲ್ಲಿ ಓರ್ವರು ಮಾತ್ರ ಸ್ನಾನ ಮಾಡಿಕೊಂಡು ದೇವರ ಪೂಜೆ ಮಾಡಬೇಕು ಎಂಬ ಸ್ಥಿತಿ ಬಂದಿದೆ ಎಂದು ಸ್ವತಃ ಗ್ರಾಮ ಪಂಚಾಯ್ತಿಯ ಸದಸ್ಯರಾಗಿರುವ ಮಹೇಂದ್ರ ಹೇಳುತ್ತಾರೆ.
ಬೆಲೆ ಸಿಗುತ್ತಿಲ್ಲ: ಗ್ರಾಮ ಪಂಚಾಯ್ತಿಯಲ್ಲಿ ತಮ್ಮ ಮಾತಿಗೆ ಬೆಲೆ ಸಿಗುತ್ತಿಲ್ಲ. ಕಾರ್ಯದರ್ಶಿ ಹಾಗೂ ಅಧ್ಯಕ್ಷರಿಗೆ ಹೇಳಿದರೆ ನೋಡೋಣ ಎಂಬ ಹಾರಿಕೆಯ ಮಾತು ಕೇಳಿ ಸಾಕಾಗಿ ಹೋಗಿದೆ. ಜನ ಅನುಭವಿಸುತ್ತಿರುವ ಕಷ್ಟ ಹೇಳತೀರದಾಗಿದೆ. ಆದ್ರಿಂದ ಇಂದು ಸಾಂಪ್ರದಾಯಿಕವಾಗಿ ಕಿರು ಟ್ಯಾಂಕ್ ಬಳಿ ಗ್ರಾಮಸ್ಥರೊಂದಿಗೆ ಖಾಲಿ ಬಿಂದಿಗೆ ಪ್ರದರ್ಶನ ಮಾಡಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಹಾಗೂ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಟ್ಯಾಂಕರ್ ಮೂಲಕವಾದರೂ ನೀರು ಒದಗಿಸಬೇಕು. ಇಲ್ಲದಿದ್ದರೆ ಪೊರಕೆ ಸೇವೆ ಖಚಿತ ಎನ್ನುತ್ತಾರೆ ಮಹೇಂದ್ರ.
ಪ್ರತಿಭಟನೆಯಲ್ಲಿ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಮುಬಿನ್ತಾಜ್ ಸಹ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

