ಜೀವವಿಮಾ ಮೈಕ್ರೋ ಫೈನಾನ್ಸ್ನಲ್ಲಿ ಹಣ ದುರುಪಯೋಗ
ತುರುವೇಕೆರೆ, ಜು,15. ತಾಲೂಕಿನಲ್ಲಿ ಸ್ಥಾಪನೆಗೊಂಡಿದ್ದ ಜೀವವಿಮಾ ನಿಗಮದ ಅಂಗ ಸಂಸ್ಥೆಯಾದ ಮೈಕ್ರೋ ಫೈನಾನ್ಸ್ ನಲ್ಲಿ ಸಾವಿರಾರು ಮಂದಿಗೆ ಕೋಟ್ಯಂತರ ರು. ವಂಚನೆ ಮಾಡಿ ಪರಾರಿಯಾಗಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಸಂಸ್ಥೆಗೆ ಕಟ್ಟಲಾಗಿರುವ ನಿಗದಿತ ಹಣವನ್ನು ಕೂಡಲೇ ಪಾವತಿ ಮಾಡಬೇಕು ಎಂದು ಆಗ್ರಹಿಸಿ ನೂರಾರು ಪ್ರತಿನಿಧಿಗಳು ಜೀವವಿಮಾ ಕಚೇರಿಯ ಮುಂದೆ ಹಾಗೂ ಒಳಗಡೆ ಅಧಿಕಾರಿಗಳಿಗೆ ದಿಗ್ಬಂಧನ ಮಾಡಿ ಪ್ರತಿಭಟನೆ ಮಾಡಿದ ಘಟನೆ ಸೋಮವಾರ ನಡೆಯಿತು.
ಪಟ್ಟಣದ ಹೊರಪೇಟೆಯಲ್ಲಿ ಕಳೆದ ಐದಾರು ವರ್ಷಗಳಿಂದ ಜೀವವಿಮಾ ನಿಗಮದ ಅಂಗ ಸಂಸ್ಥೆಯಾದ ಮೈಕ್ರೋಫೈನಾನ್ಸ್ ಅನ್ನು ತೆರೆಯಲಾಗಿತ್ತು. ತಾಲೂಕಿನ ಅಂಗನವಾಡಿ ಹಾಗೂ ಇತರೆ ಮಹಿಳೆಯರು ಹಾಗೂ ಪುರುಷರಿಗೆ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಮನವರಿಕೆ ಮಾಡಿಕೊಟ್ಟು ಗ್ರಾಮಾಂತರ ಜನರಿಂದ ಪ್ರತಿ ತಿಂಗಳು ನೂರರಿಂದ ಐದುನೂರರ ವರೆಗೆ ವಸೂಲು ಮಾಡಿ ಸಂಸ್ಥೆಗೆ ಕಟ್ಟಲಾಗುತ್ತಿತ್ತು. 5 ವರ್ಷಗಳ ತರುವಾಯ ಗ್ರಾಹಕರಿಗೆ ಬೋನಸ್ ಸಹಿತ ಉತ್ತಮ ಹಣ ಹಿಂತಿರುಗಿಸಲಾಗುವುದು ಎಂಬುದು ಸಂಸ್ಥೆಯ ಕರಾರಾಗಿತ್ತು.
ದಾಖಲೆ ಪರಿಶೀಲನೆ: ಕೆಲ ತಿಂಗಳ ಹಿಂದೆಯಷ್ಟೆ ಐದು ವರ್ಷ ಪೂರೈಸಿದ್ದ ಹಲವಾರು ಮಂದಿಯ ಹಣ ನೀಡಬೇಕಿತ್ತು. ಆ ವೇಳೆ ಕಚೇರಿಯಲ್ಲಿ ಕುಳಿತಿದ್ದ ಸಿಬ್ಬಂದಿಯಿಂದ ಸೂಕ್ತ ಮಾಹಿತಿ ದೊರೆಯಲಿಲ್ಲ. ಅನುಮಾನಗೊಂಡು ಪ್ರಧಾನ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆ ಮಾಡಿದಾಗ ಸಂಸ್ಥೆಯ ಮುಖ್ಯಸ್ಥರು ಗ್ರಾಹಕರ ಹೆಸರಿನಲ್ಲಿ ಸಕಾಲದಲ್ಲಿ ಹಣ ಪಾವತಿ ಮಾಡದಿರುವ ಹಾಗೂ ಮಾಹೆಯಾನ ಹಣ ಕಟ್ಟದಿರುವ ಸಂಗತಿ ಬೆಳಕಿಗೆ ಬಂತು. ದಿನ ಸರಿದಂತೆ ಕಚೇರಿಯ ಮುಖ್ಯಸ್ಥ ಕಚೇರಿಗೆ ಬಾಗಿಲು ಜಡಿದು ಪರಾರಿಯಾಗಿದ್ದ.
ಸೋಮವಾರ ಎಲ್ಐಸಿ ಕಚೇರಿ ಮುಂದೆ ಜಿಲ್ಲಾ ಶ್ರೀರಾಮಸೇನಾ ಸಂಘಟನಾ ಕಾರ್ಯದರ್ಶಿ ಜನಕೆರೆ ಹೇಮಂತ್ ನೇತೃತ್ವದಲ್ಲಿ ನೂರಾರು ಪ್ರತಿನಿಧಿಗಳು ಕಚೇರಿಯ ಮುಂದೆ ಪ್ರತಿಭಟನೆ ಮಾಡಿದರು. ಮೈಕ್ರೋ ಫೈನಾನ್ಸ್ ನ ಬೆಂಗಳೂರು ವಿಭಾಗದ ವ್ಯವಸ್ಥಾಪಕ ರಾಮಚಂದ್ರಯ್ಯ, ಹಾಗೂ ಮತ್ತೊಬ್ಬ ವ್ಯವಸ್ಥಾಪಕ ಮಧು ಅವರ ಮುಂದೆ ತಮ್ಮ ಅಳಲು ಹೇಳಿಕೊಂಡರು. ಗ್ರಾಮೀಣ ಪ್ರದೇಶದಿಂದ ಹಣ ಸಂಗ್ರಹಣೆ ಮಾಡಿಕೊಂಡು ಸಂಸ್ಥೆಗೆ ಹಣ ಕಟ್ಟಲಾಗಿದೆ. ಗ್ರಾಹಕರು ತಮ್ಮನ್ನು ತರಾಟೆಗೆ ತಗೆದುಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಬದುಕುವುದೇ ದುಸ್ತರವಾಗಿದೆ. ಆದ್ದರಿಂದ ಕೂಡಲೇ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಟ್ಟು ಹಣವನ್ನು ಮರುಪಾವತಿ ಮಾಡಬೇಕು. ಇಲ್ಲದಿದ್ದಲ್ಲಿ ತಾವು ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಆಗ್ರಹಿಸಿದರು.
ರಸ್ತೆ ತಡೆ: ಕಚೇರಿಯ ಹೊರಗೆ ಕೆಲ ಕಾಲ ರಸ್ತೆ ತಡೆ ಕಾರ್ಯಕ್ರಮವೂ ಆಯಿತು. ನಂತರ ಕಚೇರಿಯ ಒಳಗೇ ಪ್ರವೇಶಿಸಿದ ನೂರಾರು ಪ್ರತಿನಿಧಿಗಳು ಸಿಬ್ಬಂದಿ ಕೆಲಸ ಮಾಡದಂತೆ ತಡೆದರು. ಹಾಗೂ ತಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಹಿರಿಯ ಅಧಿಕಾರಿಗಳು ರಾಜ್ಯದಲ್ಲಿ ಸುಮಾರು 25 ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳಿಗೆ ಮೈಕ್ರೋ ಫೈನಾನ್ಸ್ ಜವಾಬ್ದಾರಿಯನ್ನು ನೀಡಲಾಗಿದೆ. ಅವರೇ ಸೂಕ್ತ ದಾಖಲಾತಿಗಳನ್ನು ಕಾಲಕಾಲಕ್ಕೆ ಪ್ರಧಾನ ಕಚೇರಿಗೆ ನೀಡಬೇಕು. ಅದರಂತೆಯೇ ಹಲವಾರು ಮಂದಿಯ ಹಣವನ್ನೂ ಸಹ ಸದರಿ ವ್ಯಕ್ತಿ ನೀಡಿದ್ದಾರೆ. ಮಿಕ್ಕವರ ಬಗ್ಗೆ ಕೇಳಲಾಗಿ ಬರಗಾಲ ಹಾಗೂ ಇತರೆ ವೈಯಕ್ತಿಕ ಕಾರಣಗಳಿಂದ ಗ್ರಾಹಕರು ಸರಿಯಾಗಿ ಹಣ ನೀಡುತ್ತಿಲ್ಲ ಎಂದು ಸಬೂಬು ಹೇಳಿ ಅಧಿಕಾರಿಗಳನ್ನು ನಂಬಿಸಿದ್ದಾನೆ. ಆದರೆ ಪ್ರಕರಣ ಈ ಮಟ್ಟಕ್ಕೆ ಬೆಳೆದಿದೆ ಎಂಬುದು ಈಗಷ್ಟೇ ಬೆಳಕಿಗೆ ಬಂದಿದೆ ಎಂದು ಹೇಳಿದರು.
ಕಾನೂನುಬಧ್ಧವಾಗಿ ಪ್ರಧಾನ ಕಚೇರಿಗೆ ಸಂದಾಯ ಮಾಡಿರುವ ಹಣವನ್ನು ಮರು ಪಾವತಿ ಮಾಡಲು ತಮ್ಮದೇನೂ ಅಭ್ಯಂತರವಿಲ್ಲ. ಆದರೆ ಹಣವನ್ನು ಪ್ರಧಾನ ಕಚೇರಿಗೆ ಸಂದಾಯ ಮಾಡದೇ ಇರುವ ಪ್ರಕರಣಗಳ ಬಗ್ಗೆ ತಮ್ಮ ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಮೇಲ್ಮಟ್ಟ ಅಧಿಕಾರಿಗಳು ಮಿಕ್ಕ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಅವಕಾಶ ನೀಡಿ: ಇತ್ತ ಪಟ್ಟು ಬಿಡದ ಪ್ರತಿನಿಧಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಕಚೇರಿಯ ಹೊರಗೆ ಪುನಃ ಸಾರ್ವಜನಿಕರ ಒತ್ತಡವೂ ಹೆಚ್ಚಾಯಿತು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಜಿ.ಪಿ.ಮಂಜೇಗೌಡ ಜುಲೈ ಅಂತ್ಯದೊಳಗೆ ಸೂಕ್ತ ತೀರ್ಮಾನ ಕೈಗೊಳ್ಳಲು ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿ. ತದ ನಂತರವೂ ಸಮಸ್ಯೆಗೆ ಪರಿಹಾರ ದೊರೆಯದಿದ್ದಲ್ಲಿ ಹೋರಾಟ ಮುಂದುವರೆಸಿ ಎಂದು ಕಿವಿ ಮಾತು ಹೇಳಿದರು.
ಇದಕ್ಕೆ ಸ್ಪಂದಿಸಿದ ಜನಕೆರೆ ಹೇಮಂತ್ ನೇತೃತ್ವದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು. ಎಸೈ ಅಜರುದ್ದೀನ್ ಸ್ಥಳಕ್ಕೆ ಭೇಟಿ ನೀಡಿ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಓರ್ವ ವ್ಯಕ್ತಿಯನ್ನು ನೆರೆ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಉಳಿದವರ ಪತ್ತೆ ಕಾರ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

