ಕುಡಿವ ನೀರಿಗಾಗಿ ಬೀಗ ಜಡಿದು ಪ್ರತಿಭಟನೆ
ಕ.ಪ್ರ. ವಾರ್ತೆ ತಿಪಟೂರು ಜು.16
ನಗರಸಭಾ ವ್ಯಾಪ್ತಿಯ ಹಳೇಪಾಳ್ಯ, ಅಣ್ಣಾಪುರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ಮಳೆಗಾಲವಾದರೂ ಮಳೆ ಇಲ್ಲದೆ ಕಡು ಬೇಸಿಗೆಯಾಗಿರುವುದರಿಂದ ಕುಡಿಯುವ ನೀರಿಗಾಗಿ ತುಂಬಾ ಹಾಹಾಕಾರವುಂಟಾಗಿದೆ ಎಂದು ನೊಂದ ಮಹಿಳೆಯರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದ್ದಲ್ಲದೆ ಸಾಂಕೇತಿಕವಾಗಿ ಕಚೇರಿ ಮುಖ್ಯ ದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ನಗರದ ಹಳೇಪಾಳ್ಯ, ಅಣ್ಣಾಪುರ, ಹೊಸೂರ, ಹೊಸ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದು, ಸಾರ್ವಜನಿಕರು ನೀರಿಗಾಗಿ ಪ್ರತಿನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊಳವೆ ಬಾವಿ ಕೊರೆಸಿ 3 ತಿಂಗಳಾಗಿದ್ದು, ಅದರಲ್ಲಿ ಸಾಕಷ್ಟು ನೀರು ಬಂದಿದ್ದರೂ ಕೊಳವೆಬಾವಿಗಳಿಗೆ ಮೋಟಾರ್ ಅಳವಡಿಸದೆ ನಗರಸಭೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರವುದು ನಾಚಿಕೆಗೇಡಿನ ಸಂಗತಿ ಎಂದು ಮಹಿಳೆಯರು ಪೌರಾಯುಕ್ತ ಕೊಠಡಿಗೆ ನುಗ್ಗಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಂದು ಕೊಳವೆಬಾವಿ ಕೆಟ್ಟಿದ್ದರೂ ದುರಸ್ಥಿ ಮಾಡುವ ಕೆಲಸವನ್ನು ನಗರಸಭಾ ಅಧಿಕಾರಿಗಳು ಮಾಡಿಲ್ಲ.
ತಿಪಟೂರು ನಗರಕ್ಕೆ ನೀರುಣಿಸುತ್ತಿದ್ದ ಹೇಮಾವತಿ ನೀರು ಕಳೆದ 4-5 ತಿಂಗಳಿಂದ ಬಂದಾಗಿದ್ದು, ನಗರದಾದ್ಯಂತ ನೀರಿಗಾಗಿ ಜನತೆ ಕಂಗಾಲಾಗಿದ್ದರೂ ಕೂಡ ಅಧಿಕಾರಿಗಳು ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಭಂಡತನ ತೋರಿಸುತ್ತಿದ್ದು, ಜನರ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ ಎಂದು ಪ್ರತಿಭಟನೆ ವೇಳೆ ಜಮಾಯಿಸಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಡು ಬೇಸಿಗೆಯಾದ ಈ ಸಮಯದಲ್ಲಾದರೂ ನಗರಸಭಾ ಪೌರಾಯುಕ್ತರು ಈ ಗ್ರಾಮಗಳ ನಾಗರಿಕರ ನೀರಿನ ಭವಣೆ ಅರಿತು ಜನತೆಗೆ ಕುಡಿಯುವ ನೀರಿಗೆ ಉಂಟಾಗಿರುವ ಹಾಹಾಕಾರವನ್ನು ತಪ್ಪಿಸಬೇಕು. ಅಲ್ಲದೆ ದಿನಪೂರ್ತಿ ಮಕ್ಕಳು, ಮಹಿಳೆಯರು ಬಿಂದಿಗೆ ಹಿಡಿದುಕೊಂಡು ಬೀದಿ ಬೀದಿಗಳಲ್ಲಿ ನಡೆಸುತ್ತಿರುವ ಅಲೆದಾಟಕ್ಕೆ ಇತಿಶ್ರೀ ಹಾಡಿ, ನಗರಸಭೆ ಕಾರ್ಯೋನ್ಮುಖವಾಗಬೇಕೆಂದು ಪೌರಾಯುಕ್ತರಿಗೆ ಮನವರಿಕೆ ಮಾಡಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಯದುನಂದನ, ಜಯಲಕ್ಷ್ಮಮ್ಮ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

