ತುಮಕೂರು

'200 ತೆಂಗು ಉತ್ಪಾದಕರ ಸಂಘ ಸ್ಥಾಪನೆಗೆ ಯತ್ನ'

Published On :

ಕ.ಪ್ರ. ವಾರ್ತೆ   ತುರುವೇಕೆರೆ   ಜು.18
ಕಲ್ಪತರು ನಾಡೆಂದೇ ಪ್ರಸಿದ್ಧಿ ಹೊಂದಿರುವ ಈ ತಾಲೂಕಿನಲ್ಲಿ ವಿಶ್ವ ತೆಂಗು ಅಭಿವೃದ್ಧಿ ಮಂಡಲಿಯ ಸೂಚನೆಯನ್ವಯ ಪ್ರತಿ 5 ಸಾವಿರ ತೆಂಗಿನ ಮರಕ್ಕೆ ಒಂದು ತೆಂಗು ಉತ್ಪಾದಕರ ಸಂಘ ರಚನೆ ಮಾಡಬೇಕಿದೆ. ಇದರಂತೆ ತಾಲ್ಲೂಕಿನಲ್ಲಿ ಕನಿಷ್ಠ 200 ತೆಂಗು ಉತ್ಪಾದಕರ ಸಂಘದ ರಚನೆ ಮಾಡಲು ತಾಲೂಕು ತೆಂಗು ಬೆಳೆಗಾರರ ಒಕ್ಕೂಟದಿಂದ ಪ್ರಯತ್ನಿಸಲಾಗುವುದು ಎಂದು ರಾಜ್ಯ ತೆಂಗು ಉತ್ಪಾದಕರ ಸಂಘದ ಸಂಚಾಲಕ ಎಂ.ಬಿ .ಸಿದ್ದಬಸಪ್ಪ ತಿಳಿಸಿದ್ದಾರೆ.  
ತಾಲೂಕಿನಲ್ಲಿ ಕನಿಷ್ಠ 20 ಲಕ್ಷ ತೆಂಗಿನ ಮರಗಳು ಇವೆ. ಇಲ್ಲಿ ಕನಿಷ್ಠ 25 ತೆಂಗಿನ ಮರಗಳ ಮಾಲೀಕರಿಂದ ಹಿಡಿದು ಒಂದೂವರೆ ಸಾವಿರ ಮರಗಳ ಮಾಲೀಕರೂ ಸಹ ಇದ್ದಾರೆ. ಇವರೆಲ್ಲರ ಸಹಕಾರದಿಂದ ಸಂಘಗಳ ರಚನೆ ಮಾಡಿದಲ್ಲಿ ತೆಂಗಿನ ಬೆಳೆಗಾರರಿಗೆ ಸುವರ್ಣಾವಕಾಶವನ್ನು ತೆಂಗು ಅಭಿವೃಧ್ಧಿ ಮಂಡಲಿ ಕಲ್ಪಸಲಿದೆ ಎಂದು ಸಿದ್ದಬಸಪ್ಪ ಹೇಳಿದರು. ಪ್ರತಿ 5 ಸಾವಿರ ಮರಕ್ಕೆ ಒಂದು ಉತ್ಪಾದಕ ಸಂಘ ರಚನೆ ಮಾಡುವುದು. 20 ಉತ್ಪಾದಕರ ಸಂಘಕ್ಕೆ 1 ಫೆಡರೇಷನ್, 10 ಫೆಡರೇಷನ್ಗೆ 1 ಕಂಪನಿಯೆಂದು ತೆಂಗು ಅಭಿವೃಧ್ಧಿ ಮಂಡಲಿ ತಿಳಿಸಿದೆ. ಕಾರ್ಖಾನೆ ಪ್ರಾರಂಭಿಸಿದರೆ ತೆಂಗು ಬೆಳೆಯಿಂದ ವಿವಿಧ ಉತ್ಪನ್ನಗಳನ್ನು ತಯಾರು ಮಾಡಬಹುದಾಗಿದೆ. ತೆಂಗಿನ ಎಣ್ಣೆ, ಕೊಬರಿ ಎಣ್ಣೆ, ಎಳನೀರು ಸಂಗ್ರಹಣೆ ಹಾಗೂ ವಿವಿಧ ಜನಪ್ರಿಯ ಉತ್ಪನ್ನಗಳನ್ನು ತಯಾರು ಮಾಡುವ ಯಂತ್ರಗಳನ್ನು ತಾಲೂಕಿನಲ್ಲಿ ಪ್ರಾರಂಭ ಮಾಡಿ ಗ್ರಾಮೀಣ ಪ್ರದೇಶದ ಜನರಿಗೂ ಉದ್ಯೋಗಾವಕಾಶವನ್ನು ಕಲ್ಪಿಸಬಹುದು. ಅಲ್ಲದೇ ತೆಂಗಿನ ಬೆಳೆಗೆ ಹೆಚ್ಚು ಬೇಡಿಕೆಯನ್ನು ಸಹ ಉಂಟು ಮಾಡಬಹುದಾಗಿದೆ. ಇದರಿಂದಾಗಿ ರೈತರ ಬಾಳಿನಲ್ಲಿ ಹರ್ಷವನ್ನು ಸಹ ತರಬಹುದಾಗಿದೆ ಎಂದು ಸಿದ್ದಬಸಪ್ಪ ತಿಳಿಸಿದರು.
ವಿಶ್ವ ತೆಂಗು ದಿನಾಚರಣೆ: ಸೆ.2 ರಂದು ವಿಶ್ವ ತೆಂಗು ದಿನಾಚರಣೆ ನಡೆಯಲಿದೆ. ಅಂದು ತುಮಕೂರು ಜಿಲ್ಲೆಯಲ್ಲೇ ವಿಶ್ವ ತೆಂಗು ದಿನಾಚರಣೆಯನ್ನು ಆಚರಿಸಲಾಗುವುದು. ಗಂಗಾಧರಯ್ಯ ಮೆಮೋರಿಯಲ್ ಹಾಲ್ ನಲ್ಲಿ 2 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಅಂತರಾಷ್ಟ್ರೀಯ ಮಟ್ಟದಿಂದ ಸುಮಾರು 200 ಮಂದಿ, ದೇಶದ ವಿವಿಧ ರಾಜ್ಯಗಳಿಂದ ಸುಮಾರು 500 ಮಂದಿ ಪ್ರತಿನಿಧಿಗಳು ಹಾಗೂ ತೆಂಗು ಬೆಳೆಗೆ ಸಂಬಂಧಿಸಿದಂತೆ ವಿಜ್ಞಾನಿಗಳು ಆಗಮಿಸಲಿದ್ದಾರೆ. ತಂತ್ರಜ್ಞರು, ವಿವಿಧ ರಸಗೊಬ್ಬರ ಕಂಪನಿಗಳು, ತೆಂಗಿನ ಉತ್ಪನ್ನವನ್ನು ತಯಾರು ಮಾಡುವ ಕಂಪನಿಗಳೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆಂಗು ಬೆಳೆಗಾರರಿಗೆ ಸೂಕ್ತ ಮಾಹಿತಿ ನೀಡಲಿದ್ದಾರೆ ಎಂದು ಸಿದ್ದಬಸಪ್ಪ ತಿಳಿಸಿದರು.
ನಿರ್ದೇಶನ: ತಾಲೂಕಿನಲ್ಲಿ ಸುಮಾರು 50 ಹೆಕ್ಟೇರ್ನಲ್ಲಿ ತೆಂಗು ಬೆಳೆಯನ್ನು ಉತ್ತಮ ಪಡಿಸಲು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಏರ್ಪಡಿಸಲು ತೋಟಗಾರಿಕಾ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಪ್ರಾತ್ಯಕ್ಷತೆಗೆ ಸುಮಾರು 18 ಲಕ್ಷ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ತಾಲೂಕಿನ 5 ಹೋಬಳಿಗಳಿಂದ ರೈತರನ್ನು ಗುರುತಿಸಿ ಅಂತಹವರ ತೋಟಗಳಲ್ಲಿ ಪ್ರಾತ್ಯಕ್ಷಿತೆ ಮಾಡಿ ಬೆಳೆಯನ್ನು ಉತ್ತಮಪಡಿಸಲು ಪ್ರಯತ್ನಿಸಲಾಗುವುದು ಎಂದು ಸಿದ್ದಬಸಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುಡ್ಡೇನಹಳ್ಳಿ ನಂಜುಂಡಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮೂಡಲಗಿರಿಗೌಡ, ನಿರ್ದೇಶಕರಾದ ಎಂ.ಕೆ.ಕೆಂಪರಾಜು, ತಂಡಗ ಸೋಮಶೇಖರ್, ಮುತ್ತುಗದಹಳ್ಳಿ ಜಯಕುಮಾರ್, ದುಂಡ ರೇಣುಕಯ್ಯ, ವಿದ್ಯಾನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.