ಐಟಿ ದಾಳಿ ಸಹಿಸಲು ಸಾಧ್ಯವಿಲ್ಲ
ಕ.ಪ್ರ. ವಾರ್ತೆ ತುಮಕೂರು ಜು.21
ಬೆಂಗಳೂರಿನ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದಲ್ಲಿನ ಕಾಲೇಜು ವಿಭಾಗದ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿರುವುದು ಸಹಿಸಲಸಾಧ್ಯ ಎಂದು ತುಮಕೂರು ಜಿಲ್ಲಾ ಒಕ್ಕಲಿಗರ ಒಕ್ಕೂಟ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಪಿ. ಚೌದ್ರಿಶಂಕರ್, ಉಪಾಧ್ಯಕ್ಷ ಕೆ.ಎಲ್. ಪ್ರಕಾಶ್, ಕಾರ್ಯದರ್ಶಿ ಎಂ.ಕೆ. ರಾಜಣ್ಣ, ಈಗಾಗಲೇ ಒಕ್ಕಲಿಗ ಜನಾಂಗದ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ದೌರ್ಜನ್ಯ ನಡೆಸುತ್ತಿವೆ. ಮುಂದುವರಿದ ಭಾಗವಾಗಿ ಒಕ್ಕಲಿಗರ ಶ್ರದ್ಧಾ ಭಕ್ತಿಯ ಮಂದಿರ, ಸಮಾಜದ ದೀಪ - ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಕಾಲೇಜು ವಿಭಾಗದ ಕಚೇರಿ ಮೇಲೆ ದಾಳಿ ನಡೆಸಿರುವುದು ಅತ್ಯಂತ ಖಂಡನೀಯ. ಮಠ ಬಡವ - ಶ್ರೀಮಂತರೆನ್ನದೆ, ಅನ್ನದಾಸೋಹ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ ಬಂದಿದೆ ಎಂದು ಒಕ್ಕಲಿಗ ಒಕ್ಕೂಟದ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತ ಸರ್ಕಾರ ಮಠ -ಮಾನ್ಯಗಳಿಗೆ ಬೆಂಬಲ ನೀಡಿ ಮಠ ಹಾಗೂ ಭಕ್ತಾದಿಗಳ ಶಕ್ತಿಯನ್ನು ಇಮ್ಮಡಿಗೊಳಿಸಿ, ಇನ್ನೂ ಹೆಚ್ಚಿನ ಸಮಾಜ ಸೇವೆಗೆ ಅವಕಾಶ ಕಲ್ಪಿಸುವಂತಹ ಕೆಲಸವಾಗಬೇಕು. ಈಗಾಗಲೇ ಭ್ರಷ್ಟಾಚಾರ, ನೈತಿಕ ಕಾರ್ಯದ ಕೊರತೆಯಿಂದ ದೇಶ ಜರ್ಜರಿತವಾಗಿದೆ. ದೇಶದ ಬದುಕು ಸಂಕಷ್ಟದಲ್ಲಿ ಸಿಲುಕಿದೆ. ಇಂತಹ ಸಮಯದಲ್ಲಿ ದೇಶಕಟ್ಟುವ ಮಠಗಳ ಕಾರ್ಯ ವೇಗವನ್ನು ಕುಗ್ಗಿಸಿರುವುದು ದೇಶದ ಬೆಳವಣಿಗೆಗೆ ಅಡ್ಡಿಪಡಿಸಿದಂತಾಗಿದೆ. ಇದು ಅಧಿಕಾರಿಗಳ ಕೆಲಸವೇ ಇರಬಹುದು. ಇಂತಹ ನಿರ್ಣಯದ ಹಿಂದೆ ಸರ್ಕಾರದ ಅನುಮತಿ ಇದ್ದೇ ಇದೆ ಎಂದು ಒಕ್ಕಲಿಗರ ಒಕ್ಕೂಟ ಅಭಿಪ್ರಾಯಪಟ್ಟಿದೆ.
ಪ್ರಸನ್ನನಾಥ ಶ್ರೀಗಳ ಹೇಳಿಕೆಗೆ ಖಂಡನೆ: ಐಟಿ ದಾಳಿಗೆ ಸಂಬಂಧಿಸಿದಂತೆ ಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮಿಗಳ ಹೇಳಿಕೆಯನ್ನು ಜಿಲ್ಲಾ ಒಕ್ಕಲಿಗರ ಒಕ್ಕೂಟ ಖಂಡಿಸಿದೆ. ಶ್ರೀಗಳು, ಆದಾಯ ತೆರಿಗೆ ಅಧಿಕಾರಿಗಳು ಮಠದಲ್ಲಿನ ಕಾಲೇಜು ವಿಭಾಗದ ಕಚೇರಿ ಮೇಲೆ ದಾಳಿ ಮಾಡಿ ಲೆಕ್ಕಪತ್ರ ಪರಿಶೀಲಿಸಿರುವುದು ತಪ್ಪಲ್ಲ. ಮಠ -ಮಾನ್ಯಗಳೂ ಸಂವಿಧಾನದಡಿ ಬರುತ್ತವೆ. ಆದ್ದರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಲು ಸ್ವತಂತ್ರವಾಗಿರುತ್ತವೆ. ದಾಳಿಗೆ ಆಕ್ಷೇಪ ವ್ಯಕ್ತಪಡಿಸಲ್ಲ, ಕಾನೂನಿನಡಿ ಎಲ್ಲರೂ ಒಂದೇ ಭಾವಿಸಿದ್ದೇವೆ. ಜತೆಗೆ ಕೇವಲ ಚುಂಚನಗಿರಿ ಸಂಸ್ಥೆಗಳನ್ನಷ್ಟೇ ಕೇಂದ್ರೀಕರಿಸಿ ದಾಳಿ ನಡೆಸಿಲ್ಲ. ಬೇರೆ ಸಂಸ್ಥೆಗಳ ಮೇಲೂ ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ದಾಳಿಯಿಂದ ಮಠಕ್ಕೆ ಯಾವುದೇ ತೊಂದರೆಯಿಲ್ಲ. ಪ್ರಜಾಪ್ರಭುತ್ವದಲ್ಲಿ ಇಂತದ್ದೆಲ್ಲಾ ಸಾಮಾನ್ಯ. ಸಂವಿಧಾನ ಬದ್ಧವಾದ ಇಲಾಖೆಯೊಂದು ನಡೆಸಿರುವ ದಾಳಿಯಿಂದ ನಾವು ಇನ್ನಷ್ಟು ಪಾರದರ್ಶಕವಾಗಿರಲು ಸಾಧ್ಯ ಎಂದಿರುವ ಪ್ರಸನ್ನನಾಥ ಸ್ವಾಮಿಗಳ ಹೇಳಿಕೆ ವೈಯಕ್ತಿಕ. ಶ್ರೀಗಳ ಹೇಳಿಕೆ ಖಂಡನೀಯ. ಇದನ್ನು ಒಪ್ಪಲಾಗದು. ಜಿಲ್ಲಾ ಒಕ್ಕಲಿಗರ ಒಕ್ಕೂಟ ಯಾರ ಅಧೀನದಲ್ಲೂ ಇಲ್ಲ. ಐಟಿ ದಾಳಿ ಖಂಡನೀಯ. ಪ್ರತಿಭಟನೆ ಅನಿವಾರ್ಯ ಎಂದು ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಒಕ್ಕೂಟದ ಕರಿಯಪ್ಪ, ವೇಣುಗೋಪಾಲ್, ಕೆ.ಬಿ. ಬೋರೇಗೌಡ, ಬ್ಯಾಟರಂಗೇಗೌಡ, ಕೃಷ್ಣಪ್ಪ, ಕುಂಚಿಟಿಗ ಒಕ್ಕಲಿಗ ಒಕ್ಕೂಟದ ದೊಡ್ಡನಿಂಗಪ್ಪ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

