ತುಮಕೂರು

ವೈಭವದ ಚಾಮುಂಡೇಶ್ವರಿ ಕರಗ ಮಹೋತ್ಸವ

Published On :

ಕ.ಪ್ರ.ವಾರ್ತೆ, ರಾಮನಗರ, ಜು.23
ಸುಮಾರು 300 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ನಗರದ ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವಕ್ಕೆ ಚಾಲನೆ ದೊರೆಯಿತು. ನಗರವು ವಿಶೇಷ ದೀಪಾಲಂಕಾರದಿಂದ ನವವಧುವಿನಂತೆ ಕಂಗೊಳಿಸುತ್ತಿತ್ತು.
ನಗರದಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿರುವ ಅಮ್ಮನವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕರಗ ಮಹೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮಂಗಳವಾರ ಇಡೀ ದಿನ ವಿಶೇಷ ಪೂಜೆ ಮತ್ತು ಧಾರ್ಮಿಕ ವಿಧಿ- ವಿಧಾನಗಳು ನಿರಂತರವಾಗಿ ನಡೆದವು.
ಮಂಗಳವಾರ ಬೆಳಗಿನ ಜಾವದಿಂದಲೇ ಸಾವಿರಾರು ಸುಮಂಗಲಿಯರು ತಂಬಿಟ್ಟಿನ ಆರತಿಯೊಂದಿಗೆ ದೇವಾಲಯಕ್ಕೆ ಆಗಮಿಸಿ, ಆರತಿ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿಕೊಂಡರು. ಹರಕೆ ಹೊತ್ತ ಭಕ್ತರು ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿರುವ ಅಗ್ನಿಕೊಂಡಕ್ಕೆ ತಾಲೂಕಿನ ವಿವಿಧ ಭಾಗಗಳಿಂದ ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಸೌದೆ ತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ನಡೆಯುವ ಈ ಕರಗ ಮಹೋತ್ಸವವು ರಾತ್ರಿಯಿಡೀ ನಗರದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮೂಲಕ ಸಾಗುತ್ತದೆ. ಪ್ರತಿ ಮನೆಯಲ್ಲಿಯೂ ಭಕ್ತಿಭಾವದಿಂದ ಕರಗ ಹೊತ್ತವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಸಪ್ತ ಕರಗಗಳ ವೈಭವ: ಚಾಮುಂಡೇಶ್ವರಿ ಕರಗ ನಡೆಯುವ ದಿನದಂದೇ ಸಪ್ತ ದೇವತೆಗಳ ಕರಗ ಮಹೋತ್ಸವಗಳು ನಡೆಯುತ್ತವೆ. ವಿವಿಧ ಬಡಾವಣೆಗಳಲ್ಲಿ ನೆಲೆಸಿರುವ ಆದಿಶಕ್ತಿದೇವಿ, ಮುತ್ತುಮಾರಮ್ಮ, ಬಾಲಗೇರಿಯ ಬಿಸಿಲುಮಾರಮ್ಮ, ಕೊಲ್ಲಾಪುರದಮ್ಮ, ಭಂಡಾರದಮ್ಮ, ಹಾಗೂ ಮಗ್ಗದಕೇರಿ ಮಾರಮ್ಮ, ಐಜೂರಿನ ಆಧಿಪರಾಶಕ್ತಿ ಮಾರಮ್ಮನ ಕರಗಗಳೂ ಮಂಗಳವಾರ ರಾತ್ರಿ ನಗರದಾದ್ಯಂತ ಸಂಚರಿಸಿದವು.
ರಾತ್ರಿಯಿಡೀ ನಗರದಾದ್ಯಂತ ಸಂಚರಿಸಿದ ಕರಗವು ಬೆಳಗಿನ ವೇಳೆಗೆ ಅಗ್ನಿಕುಂಡ ಹಾಯ್ದು ದೇವಾಲಯ ಸೇರುವ ಮೂಲಕ ಮುಕ್ತಾಯಗೊಳ್ಳುತ್ತದೆ.
ನಗರದ ಶಕ್ತಿದೇವತೆ ಚಾಮುಂಡೇಶ್ವರಿ ದೇವಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.