ತುಮಕೂರು

ಗುಣಮಟ್ಟದ ಕಾಮಗಾರಿಗೆ ಸಚಿವ ಜಯಚಂದ್ರ ಸೂಚನೆ

Published On :

ಚನ್ನರಾಯಪಟ್ಟಣ: ತಾಲೂಕಿನ ಕಲಸಿಂದ ಬಳಿ ಹೇಮಾವತಿ ಎಡದಂಡೆ ನಾಲೆಯ ಅಕ್ವೆಡೆಟ್ ಒಡೆದು ಹಾಳಾಗಿರುವ ನಾಲೆ  ಕಾಮಗಾರಿಯನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ ಹಾಗೂ ಸಂಸದ ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವ ಟಿ.ಬಿ ಜಯಚಂದ್ರ ಹಾಗೂ ಸಂಸದ ಬಸವರಾಜು ಕಲಸಿಂದ ಬಳಿ ಅಕ್ವೆಡೆಟ್ ಬಿರುಕು ಬಿಟ್ಟ ಪರಿಣಾಮ ನಾಲೆಯ ನೀರು ಸಂಪೂರ್ಣವಾಗಿ ಹಳ್ಳದ ಪಾಲಾಗುತ್ತಿದ್ದ ಹಿನ್ನಲೆಯಲ್ಲಿ ತುಮಕೂರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದರು.
ತ್ವರಿತ ಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ನಂತರ ಸ್ಥಳದಲ್ಲಿದ್ದ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳೊಂದಿಗೆ ಕಾಮಗಾರಿ ಪೂರ್ಣಗೊಳ್ಳಲು ಅಗತ್ಯ ಅವಧಿಯ ಬಗ್ಗೆ ಮಾಹಿತಿ ಪಡೆದ ಸಚಿವರು ಆದಷ್ಟು ಬೇಗ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ತುಮಕೂರು ಭಾಗಕ್ಕೆ ನೀರು ಬಿಡುವಂತೆ ಸೂಚಿಸಿದರು.
72 ಕಿ.ಮೀ ಉದ್ದದ ಎಡದಂಡೆ ನಾಲೆಯ ಆಧುನೀಕರಣ:  ನಂತರ ಪತ್ರಕರ್ತರೊಂದಿಗೆ ಮಾತನಾಡಿ ಹೇಮಾವತಿ ಜಲಾಶಯ ಬಳಿಯಿಂದ ವಡ್ಡರಹಳ್ಳಿ ಜಾಕ್‌ವೆಲ್ ಬಳಿಯವರೆಗೆ 72 ಕಿ.ಮೀ ಉದ್ದದ ಎಡದಂಡೆ ನಾಲೆಯ ಆಧುನೀಕರಣ ಅಗತ್ಯವಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಾಲೆ ಆಧುನೀಕರಣ ಆಗುವವರೆಗೆ ಎಡದಂಡೆ ನಾಲೆಯಲ್ಲಿ ಯಾವುದೇ ದೋಷವಿದ್ದರೆ ಅವುಗಳನ್ನು ಸರಿಪಡಿಸಿಕೊಂಡು ನಾಲೆಯ ಸಾಮರ್ಥ್ಯ ಮೀರದಂತೆ ಯಾವುದೇ ಹಾನಿಯಾಗದ ರೀತಿಯಲ್ಲಿ ತುಮಕೂರಿಗೆ ಕುಡಿಯುವ ನೀರು ಬಿಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ವಡ್ಡರಹಳ್ಳಿ ಜಾಕ್‌ವೆಲ್ ಬಳಿಯಿಂದ ಬಾಗೂರು ನವಿಲೆ ಸುರಂಗ ಮುಖೇನ 1440 ಹಾಗೂ ಮಂಡ್ಯ ಜಿಲ್ಲೆಗೆ 860 ಕ್ಯುಸೆಕ್‌ಗೂ ಹೆಚ್ಚು ನೀರು ಬಿಡದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ನಾಲೆಯ ಸುರಕ್ಷತೆ ಕಾಯ್ದುಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ತಿಳಿಸಿದರು.
ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ತಮಿಳುನಾಡಿಗೂ ಅಗತ್ಯಕ್ಕಿಂತ ಹೆಚ್ಚು ನೀರು ಬಿಟ್ಟಿರುವ ಕಾರಣ ತುಮಕೂರು ಜಿಲ್ಲೆಗೆ ನೀರು ಕೊಂಡೊಯ್ಯುವಲ್ಲಿ ಯಾವುದೇ ಆಕ್ಷೇಪಣೆಯಿಲ್ಲ. ಆದರೆ ನಾಲೆ ಬಿರುಕಿನಿಂದ ಜಿಲ್ಲೆಗೆ ಕುಡಿಯುವ ನೀರಿಲ್ಲ ಎಂದು ಹೇಳಿದರು.
ಮುಂದಿನ ಭಾನುವಾರದೊಳಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವನ್ನು ಅಧಿಕಾರಿಗಳು ನೀಡಿದ್ದು, ಆ ನಂತರದಲ್ಲಿ ನಾಲೆಗೆ ನೀರು ಬಿಡುವ ಸೂಚನೆಗಳಿದ್ದು, ಆಧುನಿಕ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಸಿಮೆಂಟ್ ಕ್ಯೂರಿಂಗ್‌ಗೆ ಅವಕಾಶವಿಲ್ಲ ಎಂದು ನುಡಿದರು.  
ಶ್ರೀರಾಮದೇವರ ಕಟ್ಟೆಯನ್ನು ಆಧುನೀಕರಣಗೊಳಿಸಲು 30 ಕೋಟಿ ರು. ಮಂಜೂರಾಗಿದ್ದು, ಮುಂದಿನ ಅವಧಿಯೊಳಗೆ ಎಡದಂಡೆ ನಾಲೆಯನ್ನು ಆಧುನೀಕರಣಗೊಳಿಸುವ ಬಗ್ಗೆ ನಾಲೆಯ ವ್ಯಾಪ್ತಿಯ ಎಲ್ಲಾ ಶಾಸಕರನ್ನು ಕೋರಲಾಗಿದ್ದು, ಈ ಬಗ್ಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.