ಮಾನವ ಜೀವನ ವಿಕಾಸಕ್ಕೆ ಪ್ರಚೋದನೆ ನೀಡುವುದೇ ನಾಟಕ
ಕ.ಪ್ರ.ವಾರ್ತೆ ತುಮಕೂರು ಜು. 27
ನಾಟಕಗಳು ಮಾನವ ಜೀವನದ ವಿಕಾಸಕ್ಕೆ ಪ್ರಚೋದನೆ ನೀಡುವಂತಿರಬೇಕು ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಡಾ.ವೀರೇಶಾನಂದಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಪ್ರಯೋಗದಾಟಗಳ ರಂಗಕೇಂದ್ರ ನಾಟಕಮನೆ ಆಯೋಜಿಸಿದ್ದ ಡಾ.ಬಾಬು ಕೃಷ್ಣಮೂರ್ತಿ ವಿರಚಿತ ಕೃತಿ ಅಜೇಯವನ್ನಾಧರಿಸಿದ ಆಜಾದ್ ಲೀವುಡ್ ಡೆಂಜರಸ್ಲಿ ಎಂಬ ನಾಟಕ ಪ್ರಯೋಗದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ಇಂದಿನ ನಾಟಕಗಳು ಭಾರತೀಯ ಸಂಸ್ಕೃತಿಯನ್ನು ಅಪಚಾರಗೊಳಿಸುವ ನಿಟ್ಟಿನತ್ತ ಸಾಗುತ್ತಿವೆ ಎಂದು ವಿಷಾದ ವ್ಯಕ್ತ ಪಡಿಸಿದರು.
ನಾನು ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಅಭಿನಯಿಸಿದ ಕುವೆಂಪು ಅವರ ಜಲಗಾರ ನಾಟಕದ ಈಶ್ವರನ ಪಾತ್ರ ಹಾಗೂ ರಾಮಕೃಷ್ಣ ಪರಮಹಂಸರ ಪಾತ್ರಗಳು ನನ್ನ ಬುದುಕಿಗೆ ಹೊಸ ದಿಕ್ಕು ತೋರಿಸಿದವು. ಆದ್ದರಿಂದ ಬದುಕಿನ ಯಾವ ಸನ್ನಿವೇಶವೂ ನಿರುಪಯುಕ್ತವಲ್ಲ. ಅವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದ ಸ್ವಾಮೀಜಿಯವರು, ನಾಟಕಗಳು ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಿರಬೇಕು ಎಂದರು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಬಾಬು ಕೃಷ್ಣಮೂರ್ತಿ ಮಾತನಾಡಿ, ಆಜಾದ್ ನಾಟಕ ಒಂದು ವರ್ಷದ ಹಿಂದಿನ ಪ್ರಯತ್ನ. ಹೊಸ ಪೀಳಿಗೆಯವರು ಸೇರಿ ಅದ್ಬುತವಾಗಿ ರಂಗದ ಮೇಲೆ ತಂದಿದ್ದಾರೆ ಎಂದು ಪ್ರಶಂಸಿಸಿದರು.
ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಮರುಳಯ್ಯ ಮಾತನಾಡಿದರು. ಚಿಕ್ಕನಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ನಾಗಪ್ಪ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿಯವರು ನಾಟಕಕ್ಕಿಂತ ಅದರೊಳಗಿನ ಕಥಾ ವಸ್ತು ಅತ್ಯಂತ ಮುಖ್ಯ.
ಕಥಾವಸ್ತು ವಿಭಿನ್ನವಾಗಿದ್ದರೆ ಹೆಚ್ಚು ಜನರನ್ನು ತಲುಪಲು ಸಾಧ್ಯವೆಂದರು. ಲೋಕಸಭೆಯ ಮಾಜಿ ಉಪಾಧ್ಯಕ್ಷ ಹಾಗೂ ಮಾಜಿ ಸಂಸದ ಎಂ.ಮಲ್ಲಿಕಾರ್ಜುನಯ್ಯ ನಾಟಕ ಪ್ರಯೋಗಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ವೇದಿಕೆಯಲ್ಲಿ ಹಿರಿಯ ರಂಗಸಂಘಟಕ ನಾಟಕಮನೆ ಮಹಾಲಿಂಗು,ಮೆಳೇಹಳ್ಳಿ ದೇವರಾಜು,ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

