ತುಮಕೂರು

ಸಮರ್ಥ ಶಿಕ್ಷಕನೇ ದೇಶದ ದಿಕ್ಸೂಚಿ

Published On :

ಕ.ಪ್ರ.ವಾರ್ತೆ ,  ತುಮಕೂರು ,  ಜು.30
ಯಾವುದೇ ರಾಷ್ಟ್ರದ ಶಕ್ತಿಯನ್ನು ಅಲ್ಲಿನ ಶಿಕ್ಷಣದ ಗುಣಮಟ್ಟ ಹಾಗೂ ಮೌಲ್ಯಗಳನ್ನು ಆಧರಿಸಿರುತ್ತದೆ. ಆದ್ದರಿಂದ ಶೈಕ್ಷಣಿಕ ಶಸ್ತ್ರವೇ ರಾಷ್ಟ್ರದ ಪರಿಪೂರ್ಣ ಸಾಮರ್ಥ್ಯವನ್ನು ಪ್ರತಿಪಾದಿಸುವ ಪ್ರಮುಖ ಅಂಶವಾಗಿರುತ್ತದೆ. ಮಾನವನ ಬುದ್ಧಿ ಮತ್ತು ಭಾವನೆಗಳಿಗೆ ಸಂಸ್ಕಾರವನ್ನು ದೊರಕಿಸಿಕೊಡುವ ಪ್ರಮುಖ ಅಂಶ ಎಂದು ತುಮಕೂರಿನ ರಾಮಕೃಷ್ಣ ಆಶ್ರಮದ  ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ನಗರದ ಡಯಟ್‌ನಲ್ಲಿ ಕೆ.ಪಿ.ಎಚ್.ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಕೆ.ಪಿ.ಹನುಮಂತರಾಯಪ್ಪನವರ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ವಿಶೇಷ ಉಪನ್ಯಾಸ ನೀಡಿದರು.
ಯೋಗ್ಯ ಶಿಕ್ಷಕರೇ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನವನ್ನು ಸರ್ವೋತ್ಕೃಷ್ಟ ಎಂದೇ ಪರಿಗಣಿಸಲಾಗಿದೆ. ಸಮಾಜದಲ್ಲಿ ಆಟೋಪಕರಣ, ಪಾಠೋಪಕರಣ, ಊಟೋಪಕರಣದ ಕುರಿತಾದ ಸೌಲಭ್ಯಗಳು ಹೇರಳವಾಗಿ ಇದ್ದರೂ ಬದ್ಧತೆ ಮತ್ತು ಅರ್ಪಣಾ ಮನೋಭಾವದ ಶಿಕ್ಷಕರು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವ್ಯಕ್ತಿಗೆ ಶೋಭೆ ತರುವುದು ಕೇವಲ ಅಂಕಪಟ್ಟಿಯಿಂದಲ್ಲ. ಬದಲಾಗಿ, ಬುದ್ಧಿಯನ್ನು ಸೂಚಿಸುವ ಅಂಕಗಳನ್ನು ನಿಯಂತ್ರಿಸುವ ನೈತಿಕತೆಯ ಅಂಕೆಯೂ ಅನಿವಾರ್ಯ. ಆದ್ದರಿಂದ ಶೀಲವಂತ ಹಾಗೂ ಸುಸಂಸ್ಕೃತರೂ ಆದ ಕಾರ್ಯಶೀಲ ಶಿಕ್ಷಕರು ಈ ನಿಟ್ಟಿನಲ್ಲಿ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಸಮರ್ಥರಾಗಿರುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅಕ್ಷರ ದಾಸೋಹ ರಾಜ್ಯ ಜಂಟಿ ನಿರ್ದೇಶಕ ಜಯಕುಮಾರ್, ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ನಾವು ಮಾಡಿದ ಕೆಲಸದ ಮೇಲೆ ನಮ್ಮ ಜೀವನ ನಿಂತಿದೆ. ಎಲ್ಲರಲ್ಲೂ ಪ್ರತಿಭೆ ಅಡಗಿರುತ್ತದೆ. ಆದರೆ ಅದನ್ನು ಸಮಯ ಬಂದಾಗ ತೋರಿಸಬೇಕು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆದರೂ ಸಹ ಉನ್ನತ ಸ್ಥಾನಕ್ಕೇರಿದ ಕೆ.ಪಿ. ಹನುಮಂತರಾಯಪ್ಪನವರ ಆದರ್ಶಗಳನ್ನು ಎಲ್ಲಾ ಅಧಿಕಾರಿಗಳೂ ರೂಢಿಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು ಎಂದರು. ಅಭಿನಂದನೆಗಳನ್ನು ಸ್ವೀಕರಿಸಿದ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಇತರೆ ಪರೀಕ್ಷೆಗಳ ನಿರ್ದೇಶಕ ಕೆ.ಪಿ.ಹನುಮಂತರಾಯಪ್ಪ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.