ತಂಬಾಕು ಸೇವನೆಯ ವಿರುದ್ಧ ಜನಜಾಗೃತಿ ಅಗತ್ಯ
ಚಿಕ್ಕನಾಯಕನಹಳ್ಳಿ: ಕ್ಷಣಿಕ ಸುಖಕ್ಕಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುವುದಲ್ಲದೆ, ತಮ್ಮನ್ನೇ ನಂಬಿರುವ ಕುಟುಂಬವನ್ನು ಸಹ ಸಂಕಷ್ಟಕ್ಕೀಡು ಮಾಡುವ ತಂಬಾಕು ಸೇವನೆಯ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಸಾಮಾಜಿಕ ಕಳಕಳಿಯುಳ್ಳದ್ದು ಎಂದು ಸಿವಿಲ್ ನ್ಯಾಧೀಶರಾದ ಎನ್.ವೀಣಾ ನುಡಿದರು.
ಅವರು ಶನಿವಾರ ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ
ತಂಬಾಕು ಸೇವನೆಯಿಂದಾಗುವ ದುಷ್ಪಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇದೊಂದು ಅಸಾಂಕ್ರಾಮಿಕ ಮೂಲದಿಂದ ಬರುವ ರೋಗವಾಗಿದ್ದು, ಮನುಷ್ಯನನ್ನು ನಿಧಾನವಾಗಿ ಕೊಲ್ಲುವ ವಿಷ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಗೊತ್ತಿದ್ದು ಮಾಡುವ ತಪ್ಪು. ಸರ್ಕಾರ ಇದರ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆಡಳಿತ ಯಂತ್ರದ ಜೊತೆಗೆ ಸಾರ್ವಜನಿಕರು ಸಹಕರಿಸ ಬೇಕು ಎಂದರು.
ರಕ್ತ ಚಲನೆ ನಿಲ್ಲುತ್ತೆ: ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಶಿಕಿರಣ್ ಪ್ರಪಂಚದಲ್ಲಿ ಅತಿ ಹೆಚ್ಚು ತಂಬಾಕು ಸೇವಿಸುವ ರಾಷ್ಟ್ರಗಳು ಚೀನಾ ಮತ್ತು ಭಾರತ. ಚೀನಾದ ಜನ ಹೊಗೆಸಹಿತ ತಂಬಾಕನ್ನು ಉಪಯೋಗಿಸಿದರೆ, ಭಾರತದಲ್ಲಿನ ಜನ ಬಾಯಿಯಲ್ಲಿ ಹಾಕಿಕೊಂಡು ಜಗಿಯುವ ತಂಬಾಕನ್ನು ಹೆಚ್ಚು ಉಪಯೋಗಿಸುತ್ತಾರೆ. ಪ್ರತಿ ತಂಬಾಕು ವಿರೋಧಿ ವರ್ಷಾಚರಣೆಯ ದಿನ ಹೊಸಹೊಸ ಘೋಷಣೆಗಳನ್ನು ಸರ್ಕಾರ ಹೊರಡಿಸುತ್ತದೆ. ಅದರಂತೆ ಈ ವರ್ಷ ಸಂಪೂರ್ಣ ತಂಬಾಕು ನಿಷೇಧ ಘೋಷಣೆ ಮಾಡಲಾಗಿದೆ. ಕಬ್ಬಿಣವನ್ನು ಕರಗಿಸುವ ಮಟ್ಟದ 1300 ರಿಂದ 1600 ಡಿಗ್ರಿ ಉಷ್ಣಾಂಶ ಹೊಂದಿರುವ ಸಿಗರೇಟ್ ಸುಡುವುದರಿಂದ ನಮ್ಮ ತುಟಿಗಳು ಕಪ್ಪಾಗಿ ರಕ್ತ ಚಲನೆ ನಿಂತು ಹೋಗುತ್ತದೆ. ಆಗ ರಕ್ತ ಚಲನೆಯಿಲ್ಲದ ಕಡೆ ಕ್ಯಾನ್ಸರ್ ಉಂಟಾಗುತ್ತದೆ. ಜಗಿದು ತಿನ್ನುವ ತಂಬಾಕಿನಲ್ಲಿ 3000 ಕ್ರಿಮಿಗಳಿದ್ದರೆ, ಸೇವನೆ ಮಾಡುವ ತಂಬಾಕಿನಲ್ಲಿ 7000 ಕ್ರಿಮಿಗಳಿರುತ್ತವೆ. ಪ್ರಪಂಚದಲ್ಲಿ ಈಗಾಗಲೇ ನಾವು ವಾತಾವರಣವನ್ನು ಕಲುಷಿತಗೊಳಿಸಿದ್ದೇವೆ. ಅಂತಹದರಲ್ಲಿ ಈರೀತಿ ತಂಬಾಕನ್ನು ಸೇವಿಸುಮುದ ಎಷ್ಟು ಸಮಂಜಸ. 30 ವರ್ಷ ಸತತವಾಗಿ ಸಿಗರೇಟ್ ಸೇದುವುದರಿಂದ ಕ್ಯಾನ್ಸರ್ ಸಂಭವ. ಭಾರತದಲ್ಲಿ 30 ಕೋಟಿ ಜನ ತಂಬಾಕು ಸೇವನೆ ಮಾಡುವವರಲ್ಲಿ, ಪ್ರತಿ ವರ್ಷ 2000 ಜನ ಸಾವನ್ನಪ್ಪುತ್ತಾರೆ. ಪ್ರತಿವರ್ಷ 8 ರಿಂದ 9 ಲಕ್ಷ ಜನ ತಂಬಾಕು ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ತಂಬಾಕು ನಿಷೇಧದ ಬಗ್ಗೆ ಪರಿಣಾಮಕಾರಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಅಗತ್ಯವಿದೆ ಎಂದರು.
ಡಾ.ಎನ್.ಎಮ್. ಶಿವಕುಮಾರ್ ಮಾತನಾಡಿ ನಮ್ಮ ಜನ ದೇವಾಲಯಗಳಿಗೆ ಹೋದಾಗ ಯಾರು ಹೇಳದಿದ್ದರೂ, ಪಾದರಕ್ಷೆಗಳನ್ನು ಹೊರಗಡೆ ಬಿಡುತ್ತಾರೆ. ಆದರೆ ಅದೇ ಜನ ಆಸ್ಪತ್ರೆಗಳಿಗೆ ಬಂದರೆ ಪರಿಸರವನ್ನು ಗಲೀಜು ಮಾಡುತ್ತಾರೆ. ಇದನ್ನು ನಾವು ತಿಳುವಳಿಕೆ ಕೊರತೆ ಎನ್ನಬೇಕೋ ಅಥವಾ ಜವಾಬ್ದಾರಿಯಿಲ್ಲದವರು ಎನ್ನಬೇಕೋ ತಿಳಿಯದಾಗಿದೆ. ಸಾರ್ವಜನಿಕ ಸ್ಥಳಗಳನ್ನು ದೇವಾಲಯಗಳೆಂದು ಭಾವಿಸಿದರೆ ಎಲ್ಲಾ ಕಡೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ವಿಶ್ವನಾಥ್ ಮಾತನಾಡಿ, ಸರ್ಕಾರದ ಜನೋಪಯೋಗಿ ನಿರ್ಧಾರಗಳನ್ನು ಜನತೆಗೆ ತಿಳಿಸುವುದು ನಮ್ಮ ಕರ್ತವ್ಯ. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ನ್ಯಾಯಾಲಯ ಆದೇಶ ಹೊರಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಡುವುದರಿಂದ ಹೆಚ್ಚು ಲಾಭವಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

