ಸಮಸ್ಯೆ ನಿವಾರಣೆಯಾಗದಿದ್ದರೆ ಅಧಿಕಾರಿಗಳೇ ಹೊಣೆ
ಕ.ಪ್ರ. ವಾರ್ತೆ ತುಮಕೂರು ಜೂ. 1
ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ ಆಧಾರ್ ಆಧಾರಿತ ಎಲ್ಪಿಜಿ ಸಬ್ಸಿಡಿ ನೇರ ನಗದು ವರ್ಗಾವಣೆ ಕಾಯಕ್ರಮದಲ್ಲಿ ಮಾತನಾಡಿದರು.
ಬರೀ ಭರವಸೆಗಳನ್ನು ನೀಡುವುದಲ್ಲ. ಬದ್ಧತೆಯಿಂದ ಕೆಲಸ ಮಾಡುವುದು ಮುಖ್ಯ. ಬದಲಾವಣೆ ಅಕ್ಷರಶಃ ಜಾರಿಗೆ ಬರಬೇಕು. ಪಕ್ಷ ಮಾತು ಕೊಟ್ಟಂತೆ ಚುನಾವಣಾ ಪ್ರಣಾಳಿಕೆಯಲ್ಲಿನ 7 ಕಾರ್ಯಕ್ರಮಗಳನ್ನು ಅಧಿಕಾರ ಸ್ವೀಕರಿಸಿದ ಅರ್ಧ ಗಂಟೆಯೊಳಗೆ ಈಡೇರಿಸಿದೆ. ಒಂದು ರು. ಗೆ ಅಕ್ಕಿ ಕೊಡುವ ವಿಷಯದಲ್ಲಿ ಸಿದ್ದರಾಮಯ್ಯ ಮಾತಿಗೆ ತಪ್ಪಿದ್ದಾರೆ ಎಂಬ ವರದಿಗಳನ್ನು ಓದಿದ್ದೇನೆ. ಆದರೆ ಮಾತಿಗೆ ತಪ್ಪುವ ಪ್ರಶ್ನೆಯೇ ಇಲ್ಲ. ವಿರೋಧಿಗಳ ಹೇಳಿಕೆಯಲ್ಲಿ ಹುರುಳಿಲ್ಲ. ಗೊಂದಲ ಬೇಡ. ಬೇಡಿಕೆ ಈಡೇರಿಸಲು 1.30 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಸ್ಟಾಕ್ ಇಲ್ಲ. ಹೀಗಾಗಿ ಜೂನ್ಗೆ ಬದಲು ಜುಲೈಗೆ ಹೋಗಿದೆ ಅಷ್ಟೆ ಎಂದು ಸಮಜಾಯಿಷಿ ನೀಡಿದರು. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರು, ಆಹಾರ ಖಾತೆ ಸಚಿವರು ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನೂ ಭೇಟಿ ಮಾಡಲಾಗಿದೆ. ಭರವಸೆಯನ್ನು ನೀಡಿದ್ದಾರೆ. ಬೇಡಿಕೆ ಜು. 1 ರಿಂದ ಈಡೇರಲಿದೆ ಎಂದು ತಿಳಿಸಿದರು.
ಅಧಿಕಾರಿಗಳೇ ಹೊಣೆ: ಜನ ಬದಲಾವಣೆ ಬಯಸಿ ಕಾಂಗ್ರೆಸ್ಗೆ ಮತ ನೀಡಿದ್ದಾರೆ. ಬದಲಾವಣೆ ಕಣ್ಣಿಗೆ ಕಾಣುವಂತಿರಬೇಕು. ಜಡತ್ವ ಇರಬಾರದು. ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳು ನಿವಾರಣೆಯಾಗದಿದ್ದರೆ, ಏನಾದರೂ ಹೆಚ್ಚು-ಕಡಿಮೆಯಾದರೆ ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳೇ ನೇರ ಹೊಣೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. 2 ದಿನಗಳ ಕಾಲ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಅಧಿಕಾರಿಗಳು ಸಹ ಜನರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ದಲಿತರು, ಬಡವರು, ಹಿಂದುಳಿದವರ ಪರ ಕಾಂಗ್ರೆಸ್ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾರ್ಯಕ್ರಮ ಜಾರಿಗೆ ಬದ್ದ. ಯಾವುದೇ ರಾಜಿಯಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಹಿಂದಿನ ಸರ್ಕಾರ ಬರಗಾಲ ನಿಭಾಯಿಸಿಲ್ಲ: ಹಿಂದಿನ ಬಿಜೆಪಿ ಸರ್ಕಾರ ಬರಗಾಲವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ. ಈ ಮಾತನ್ನು ರಾಜಕೀಯ ಅರ್ಥವಿಟ್ಟುಕೊಂಡು ಹೇಳುತ್ತಿಲ್ಲ. ಆ ಉದ್ದೇಶ ನನಗಿಲ್ಲ. ಮುಂಗಾರು ಮಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

