ಗಮಕ ಕಲೆಯಿಂದ ಮಹಾಕಾವ್ಯಗಳ ಉಳಿವು ಸಾಧ್ಯ: ಸತ್ಯನಾರಾಯಣ್
ಕ.ಪ್ರ. ವಾರ್ತೆ ತುಮಕೂರು ಜೂ. 2
ಗಮಕ ಕಲೆಯಿಂದ ಮಾತ್ರ ಮಹಾಕಾವ್ಯಗಳ ಉಳಿವು ಸಾಧ್ಯ ಎಂದು ರಾಜ್ಯ ಗಮಕ ಪರಿಷತ್ ಅಧ್ಯಕ್ಷ ಎಂ.ಆರ್. ಸತ್ಯನಾರಾಯಣ್ ಅಭಿಪ್ರಾಯಪಟ್ಟರು.
ಅವರು ನಗರದ ಶಿವಮೂಕಾಂಬಿಕಾ ಬಡಾವಣೆಯ ನಾ. ವೆಂಕಟೇಶ್ ಜೋಯಿಸ್ ಮನೆಯಲ್ಲಿ ಆಯೋಜಿಸಿದ್ದ ಶ್ರೀ ಪ್ರಹ್ಲಾದ ಚರಿತ್ರೆ ಮತ್ತು ತೊರವೆ ರಾಮಾಯಣ ಕಾವ್ಯಗಳ ಮನೆ ಮನೆಗೆ ಗಮಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಲಿಕೆಯಿಂದ ಭಾಷಾ ಜ್ಞಾನ, ಕವಿ, ಕಾವ್ಯ ಪರಿಚಯ ಇಂದಿನ ಪೀಳಿಗೆಯವರಿಗೆ ಉಪಯುಕ್ತವಾಗುವುದಲ್ಲದೇ ಮಾನವೀಯ ಮೌಲ್ಯಗಳು, ವ್ಯಕ್ತಿತ್ವ ನಿರ್ಮಾಣ, ಶುದ್ಧ ಮನಸ್ಸುಗಳ ಉಗಮಕ್ಕೂ ಕಾರಣವಾಗುತ್ತದೆ ಎಂದರು.
ಪ್ರಾಚೀನ ಕಲೆಯಾದ ಗಮಕ ಇತ್ತೀಚೆಗೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ. ಮಕ್ಕಳಲ್ಲಿ ಜ್ಞಾನ ಸಂಪಾದನೆಗೆ ಸಾಹಿತ್ಯ ಪ್ರೌಢಿಮೆಗೆ ಗಮಕ ನೆರವಾಗಬಲ್ಲದು ಎಂದರು.
ಈ ನಿಟ್ಟಿನಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಶಾಲೆಗಳಲ್ಲಿ ಗಮಕ ಪಠ್ಯ ವಿಷಯವಾಗಬೇಕು ಎಂದರು. ಈ ನಿಟ್ಟಿನಲ್ಲಿ ಸರ್ಕಾರ ಹಣ ನೀಡಬೇಕು ಎಂದರು.
ಸರ್ಕಾರಕ್ಕೆ ಒತ್ತಾಯ: ಗ್ರಾಮೀಣ ಮಟ್ಟದಿಂದ ಮಹಾನಗರದವರೆಗೂ ಈ ಕಲೆಯನ್ನು ವಿಸ್ತರಿಸಲು ಸಹಕಾರ ನೀಡಬೇಕೆಂದು ಇದೇ ಸಂದರ್ಭದಲ್ಲಿ ಅವರು ಸರ್ಕಾರವನ್ನು ಒತ್ತಾಯಿಸಿದರು.
ಗಮಕ ಕಲೆ ಉಳಿದಿರುವುದು ಕಾವ್ಯದಿಂದ, ಕಾವ್ಯ ಉಳಿದಿರುವುದು ಗಮಕಿಯಿಂದ. ಇದೊಂದು ಬಹು ದೊಡ್ಡ ಪರಂಪರೆ. ಸಂಗೀತ, ಸಾಹಿತ್ಯದ ಸುಮಧುರ ಸಂಬಂಧವೇ ಗಮಕ. ದೃಶ್ಯ ಮಾಧ್ಯಮ ಈ ಕಲೆಗೆ ಹೆಚ್ಚಿನ ಪ್ರಚಾರ ನೀಡುತ್ತಿದೆ. ಬಡಾವಣೆಯ ಪ್ರತಿಯೊಂದು ಮನೆಗಳಲ್ಲಿ ಈ ಕಾರ್ಯಕ್ರಮ ನಡೆಸಿದ ರಾಜ್ಯ ಪರಿಷತ್ನ ಪ್ರತಿನಿಧಿ ಹಾಗೂ ಗಮಕ ಭಾರತಿ ಚಾರಿಟಬಲ್ ಟ್ರಸ್ಟ್ನ ಕೋಶಾಧಿಕಾರಿಯಾಗಿರುವ ಜೋಯಿಸರ ಶ್ರಮ ಮತ್ತು ಆಸಕ್ತಿ ಹಾಗೂ ಸೇವಾ ಮನೋಭಾವನೆಯನ್ನು ಪ್ರಶಂಸಿಸಿದರು.
ದುರಂತ: ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತುಮಕೂರು ವಿವಿ ಕುಮಾರವ್ಯಾಸ ಪೀಠದ ಸಂಯೋಜಕ ಡಾ. ಶ್ರೀಪಾದ ಭಟ್ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಒಂದೇ ಪದವನ್ನು ಐದಾರು ತರಹ ಬರೆಯುತ್ತಾರೆ. ಕನ್ನಡ ಪದಗಳ ಉಚ್ಚಾರಣೆಯ ಸ್ಪಷ್ಟತೆ, ಬರೆಹ ಸಂಪೂರ್ಣ ದೋಷಪೂರಿತವಾಗಿರುತ್ತದೆ. ಕನ್ನಡದ ಬಳಕೆ ಬಗ್ಗೆ ನಿರಾಸಕ್ತಿ, ಅಸಡ್ಡೆ ಮೂಡುತ್ತಿರುವುದು ದುರಂತವೆಂದು ವಿಷಾದಿಸಿದರು.
ಮಾತೃಭಾಷೆ ಕನ್ನಡದ ಸೊಗಸು ನಮಗರಿವಾಗಬೇಕಾದರೆ ಗಮಕ ಕಲೆ, ಪ್ರಾಚೀನ ಕವಿಗಳ ಕಾವ್ಯಾಧ್ಯಯನ, ನಿತ್ಯ ಓದುವಿಕೆ, ವಾಚನ ವ್ಯಾಖ್ಯಾನ ಕಾರ್ಯಕ್ರಮಗಳ ಮೂಲಕ ಬೆಳೆಸಬಹುದು. ತಂದೆ ತಾಯಿಗಳು ಮಕ್ಕಳಿಗೆ ಬದುಕಿಗೆ ಮಾತ್ರ ಶಿಕ್ಷಣ ಎಂಬುದನ್ನು ಪರಿಗಣಿಸದೇ ಬೌದ್ಧಿಕ ಬೆಳವಣಿಗೆಗೆ ಸಾಹಿತ್ಯ ಸಂಸ್ಕಾರವನ್ನೂ ಕೊಡಬೇಕು. ಇದರಿಂದ ಭಾಷಾ ಹಿಡಿತ, ಸಂಶೋಧನಾತ್ಮಕ ಮನೋಭಾವ ಬೆಳೆಯುತ್ತದೆ. ಅನೇಕ ಮೌಲ್ಯಯುತ, ಆದರ್ಶ ವಿಚಾರಗಳು ಮನಸ್ಸಿನಲ್ಲಿ ಮೊಳಕೆಯೊಡೆಯುತ್ತದೆ ಎಂದರು.
ಮುಕ್ತ ಅವಕಾಶ: ಗಮಕವನ್ನು ಜಾತಿ, ಮತ ಮತ್ತು ವಯಸ್ಸೆಂಬ ಬೇಧವಿಲ್ಲದೆ ಪ್ರತಿಯೊಬ್ಬ ನಾಗರಿಕನೂ ಕಲೆಯುವ ಅವಕಾಶವಿದೆ. ಇತ್ತೀಚೆಗೆ ಗಮಕ ಕಲೆಯಲ್ಲೂ ಸಹ ವಿನೂತನವಾದ ಪ್ರಯೋಗಗಳು ನಡೆಯುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಡಾ. ಎಚ್.ಎಸ್. ನಿರಂಜನಾರಾಧ್ಯ ಇದ್ದರು. ಶ್ರೀಗಿರಿ ಗಮಕ ಪಾಠಶಾಲೆಯ ವಿದ್ಯಾರ್ಥಿಗಳು ಗಮಕ ಗೀತೆ ಹಾಡಿದರು. ಚಂಪಕಾ ಶ್ರೀಧರ್ ಅವರು ತೊರವೆ ರಾಮಾಯಣದ ಶ್ರೀರಾಮ ಪಟ್ಟಾಭಿಷೇಕ ಕಾವ್ಯಭಾಗದ ವಾಚನ ಮಾಡಿದರು. ವ್ಯಾಖ್ಯಾನವನ್ನು ಕನ್ನಡ ಉಪನ್ಯಾಸಕ ಡಾ. ಪಾವಗಡ ರೇಣುಕ ಪ್ರಸಾದ್ ನಡೆಸಿಕೊಟ್ಟರು. ನಾಗರತ್ನ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರೇಮ, ಸತ್ಯವತಿ, ಜಯರಾಮು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

