ಅಧಿಕಾರಿಗಳು ಅರ್ಹ ಫಲಾನುವಿಗಳಿಗೆ ಸೌಲಭ್ಯ ತಲುಪಿಸಲಿ
ಕ.ಪ್ರ.ವಾರ್ತೆ ಮಧುಗಿರಿ ಜೂ.3
ತಾಲೂಕಿನ ಅಭಿವೃದ್ಧಿಗೆ ಸದಾ ಸಿದ್ಧನಿದ್ದು ಸರ್ಕಾರದ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಜವಾನರ ಜೊತೆಗೆ ಓಡಾಡಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಶಾಸಕ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು.
ಭಾನುವಾರ ಇಲ್ಲಿನ ತಾ.ಪಂ.ಸಭಾಂಗಣದಲ್ಲಿ ಏರ್ಪಟಾಗಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಅರ್ಹ ಫಲಾನುವಿಗಳಿಗೆ ತಲುಪಿಸಲು ಮುತುವರ್ಜಿ ವಹಿಸಬೇಕು ಎಂದು ತಾಕೀತು ಮಾಡಿದರು.
ಎಚ್ಚರಿಕೆ: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ತಾ.ಮಟ್ಟದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುವಲ್ಲಿ ತಬ್ಬಿಬ್ಬಾದ ಘಟನೆ ನಡೆಯಿತು. ಈಗ್ಗೆ 3 ವರ್ಷಗಳ ಕಾಲ ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಯದೇ ಅಧಿಕಾರಿಗಳು ಸೋಮಾರಿಗಳಾಗಿದ್ದಾರೆ ಎಂದು ಕಿಡಿಕಾರಿದ ರಾಜಣ್ಣ ಭ್ರಷ್ಟಾಚಾರದಲ್ಲಿ ಭಾಗಿಯಾದರೆ ಅಮಾನತ್ತಿಗೆ ಆದೇಶ ನೀಡುವುದಾಗಿ ಅಧಿಕಾರಿ ವರ್ಗಕ್ಕೆ ಎಚ್ಚರಿಕೆ ನೀಡಿದರು. ಅರಣ್ಯ ಪ್ರದೇಶದಲ್ಲಿ ಆಹಾರವಿಲ್ಲದೆ ಕರಡಿಗಳು ಗ್ರಾಮಗಳತ್ತ ಕಾಲಿಟ್ಟು ಜನ-ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಇದನ್ನು ತಡೆಗಟ್ಟಲು ಅರಣ್ಯಾಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಗೆಡ್ಡೆ, ಗೆಣಸು ಮತ್ತಿತರೆ ಆಹಾರ ಫಲ ಸಿಗುವ ಮರ-ಗಿಡಗಳನ್ನು ಬೆಳೆಸಿ ಅವುಗಳಿಗೆ ಆಹಾರ ದೊರಕುವಂತೆ ಮಾಡಬೇಕು ಎಂದರು.
ಕ್ರಿಮಿನಲ್ ಮೊಕದ್ದಮೆ: ಶಾಲಾಭಿವೃದ್ಧಿಗೆ ನೀಡುವ ಹಣ ದುರುಪಯೋಗವಾಗುತ್ತಿದೆ ಎಂಬ ದೂರು ಕೇಳಿ ಬಂದಿದ್ದು ದುರ್ಬಳಕೆ ಮಾಡಿಕೊಳ್ಲುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬಿಇಓಗೆ ಸೂಚಿಸಿದರು. ಕೆಲ ಶಿಕ್ಷಕರು ಸಕಾಲಕ್ಕೆ ಸರಿಯಾಗಿ ಶಾಲೆಗೆ ಹೋಗದೇ ಪಟ್ಟಣದ ಡಿಡಿಪಿಐ ಕಚೇರಿ ಎದುರು ಕಾಲ ಕಳೆಯುತ್ತಾರೆ ಎಂಬ ದೂರು ಇದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ತೆರಳಿ ಬೋಧಿಸಿದರೆ ಶಿಕ್ಷಣದ ಗುಣ ಮಟ್ಟ ಇನ್ನು ಹೆಚ್ಚುತ್ತದೆ. ಆದ ಕಾರಣ ಬಿಇಓ ಅವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
ನೇರ ಹೊಣೆ: ತಾಲೂಕಿನಲ್ಲಿ 15 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದಾರೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದ ರಾಜಣ್ಣ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರ ಬಗ್ಗೆ ದೂರುಗಳು ಕೇಳಿ ಬಂದಿದ್ದು ಹಾಸ್ಟೆಲ್ನಲ್ಲಿ ವಿದ್ಯೆ ಕಲಿಯುವ ಮಕ್ಕಳಿಗೆ ಊಟ, ತಿಂಡಿ ಮತ್ತು ಸರ್ಕಾರದ ಎಲ್ಲ ಸೌಲಭ್ಯ ಕಲ್ಪಿಸಬೇಕು. ಸುಳ್ಳು ದಾಖಲೇ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕೆಡಿಪಿ ಸಭೆಗೆ ಗೈರು ಹಜಾರದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾ.ಪಂ.ಇಓಗೆ ಸೂಚಿಸಿದರು. ನಂತರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಂದು-ಕೊರತೆ ಬಗ್ಗೆ ವೈದ್ಯಾಧಿಕಾರಿ ಜತೆ ಚರ್ಚಿಸಿದರು.
ಸೂಕ್ತ ಕ್ರಮ ಕೈಗೊಳ್ಳಿ: ತಾಲೂಕಿನಲ್ಲಿ ಬೀಡು ಬಿಟ್ಟಿರುವ ನಕಲಿ ವೈದ್ಯರ ಶಾಪಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಜಿ.ಪಂ.ಸದಸ್ಯರಾದ ಶಾಂತಲಾ ರಾಜಣ್ಣ, ಎಚ್.ಕೆಂಚಮಾರಯ್ಯ, ಸುಮನಾ ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ್, ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ, ಉಪಾಧ್ಯಕ್ಷೆ ಸಿದ್ಧಾಗಂಗಾಭಿಕೆ ಸುಬ್ಬರಾಯಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಎಂ.ವಿ. ಗೋವಿಂದರಾಜು, ಕೆ.ಪ್ರಕಾಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

