ಹೆಬ್ಬಾಕ ಕೆರೆ ಕಾಮಗಾರಿ ಅವೈಜ್ಞಾನಿಕ, ನಿರರ್ಥಕ
ಕ.ಪ್ರ.ವಾರ್ತೆ ತುಮಕೂರು ಜೂ.3
ತುಮಕೂರು ನಗರಕ್ಕೆ ಕುಡಿಯುವ ನೀರೊದಗಿಸುವ ಹೇಮಾವತಿ 2 ನೇ ಹಂತದ ಜಲ ಸಂಗ್ರಹಣಾಗಾರವಾಗಿ ಅಭಿವೃದ್ಧಿಪಡಿಸಿರುವ ಹೆಬ್ಬಾಕ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ, ನಿರರ್ಥಕ ವೆಚ್ಚವಾಗಿದೆ ಹಾಗೂ ಕುಡಿಯುವ ನೀರಿಗೆ ಸಂಚಕಾರ ಬಂದಿದೆ ಎಂದು ದೂರಿ ತುಮಕೂರಿನ ಗಾಂಧಿನಗರದ ನಿವಾಸಿ ಎನ್. ರಾಮಚಂದ್ರ ರಾಜ್ಯ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ಮೇಲ್ನೋಟಕ್ಕೆ ಕೆರೆಯಲ್ಲಿ ನೀರು ನಿಲ್ಲುವುದಿಲ್ಲವೆಂದು ಅರಿವಿದ್ದರೂ, ಕೆರೆಗೆ ನೀರು ಬಿಟ್ಟು ಅಪಾರ ಪ್ರಮಾಣದ ಅಮೂಲ್ಯವಾದ ಕುಡಿಯುವ ನೀರನ್ನು ಹರಿಸಿ, ವ್ಯರ್ಥಮಾಡಲಾಗಿದೆ. ಆವಿಯಾಗುವಿಕೆ ಮತ್ತು ಇಂಗುವಿಕೆಯಿಂದ ನೀರು ವ್ಯರ್ಥವಾಗಿದೆಯೆಂಬ ಅಧಿಕಾರಿಗಳ ಉತ್ತರ ಯೋಜನೆಯ ಲೋಪವನ್ನು ಮರೆ ಮಾಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಹದ್ದಾಗಿದೆ. ನೀರಿಗೆ ಹಾಹಾಕಾರ ಎದ್ದಿರುವ ಸಂದರ್ಭದಲ್ಲಿ, ಅಮೂಲ್ಯ ನೀರಿನ ಸಂಪತ್ತನ್ನು ವ್ಯರ್ಥಗೊಳಿಸಿದ್ದರಿಂದ, ನಗರದ ಜನತೆ
ಅನುಭವಿಸುತ್ತಿರುವ ಸಮಸ್ಯೆಗಳು ಹೇಳತೀರದಾಗಿದೆ. ಹೆಬ್ಬಾಕ ಕೆರೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಹಣ ಪೋಲಾಗಿದೆ. ಕುಡಿಯುವ ನೀರು ವ್ಯರ್ಥವಾಗಿದೆ. ಬೇಜವಾಬ್ದಾರಿ, ಮುನ್ನೋಟರಹಿತ ಯೋಜನೆಗೆ ಇದೊಂದು ಉತ್ತಮ ಉದಾಹರಣೆಯಾಗಿದ್ದು, ಸೂಕ್ತ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.
ಯೋಜನೆ ರೂಪಿಸಿಲ್ಲ: ತುಮಕೂರು ನಗರಕ್ಕೆ ಕುಡಿಯುವ ನೀರಿಗಾಗಿ, ಹಂಚಿಕೆ ಮಾಡಿ ನಿಗದಿಪಡಿಸಲಾದ, ಒಟ್ಟು ನೀರಿನ ಪ್ರಮಾಣ 1130 ಎಂಸಿಎಫ್ಟಿಯನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳುವಂತೆ ಯೋಜನೆಗಳನ್ನು ರೂಪಿಸಲಾಗಿಲ್ಲ. ಇದರಿಂದಾಗಿ ಅರ್ಧದಷ್ಟು ಜನಸಂಖ್ಯೆ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ. ಇದೊಂದು ಮುನ್ನೋಟವಿಲ್ಲದ ಅಪೂರ್ಣ ಯೋಜನೆಯಾಗಿದೆ. ಪ್ರಸಕ್ತ ಕಾಮಗಾರಿ ಪೂರೈಸಿರುವ ಹೆಬ್ಬಾಕ ಕೆರೆಯ ಹೂಳು ತೆಗೆಯುವ ಮೊದಲು, ತಳಭಾಗದ ಮಣ್ಣನ್ನು ಪರೀಕ್ಷೆ ಮಾಡಿರುವುದಿಲ್ಲ. ಯೋಜನೆಯ ಅಂದಾಜು ಪಟ್ಟಿ ತಯಾರಿಸಿರುವ ಸಂದರ್ಭದಲ್ಲಿ, ಕೆರೆಯ ತಳಭಾಗದ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳಲು ಯೋಗ್ಯವಾಗಿದೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಅಂಶವನ್ನು ಕೈಬಿಟ್ಟಿರುವುದು ಯೋಜನೆ ಸಿದ್ಧಪಡಿಸುವವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಈ ಲೋಪದಿಂದಾಗಿ ಪ್ರಸ್ತುತ ಹೆಬ್ಬಾಕ ಕೆರೆ ಕಾಮಗಾರಿ ಪೂರ್ಣವಾಗಿ, ನೀರು ಸಂಗ್ರಹ ಮಾಡಿದರೂ ನೀರು ನಿಲ್ಲುತ್ತಿಲ್ಲ. ಹೀಗಾಗಿ ಅಮೂಲ್ಯ ಕುಡಿಯುವ ನೀರು ವ್ಯರ್ಥವಾಗಿ, ತುಮಕೂರು ನಗರ ಸಮಸ್ಯೆ ಎದುರಿಸುವಂತಾಗಿದೆ ಎಂದು ರಾಮಚಂದ್ರ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೆ ಹೂಳು ತುಂಬಿಕೊಳ್ಳಲಿದೆ: ಹೆಬ್ಬಾಕ ಕೆರೆಯ ನೀರು ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು, ಕೆರೆಯ ಹೂಳನ್ನು ತೆಗೆದು, ಹೂಳು ಮತ್ತು ಮಣ್ಣನ್ನು ಎಂಡಬ್ಲ್ಯೂಎಲ್ ಮತ್ತು ಎಫ್ಟಿಎಲ್ ನೊಳಗೆ ಕೆರೆಯ ಸುತ್ತಲೂ ಶೇಖರಿಸಿ, ಸಡಿಲವಾಗಿ ಗುಡ್ಡೆ ಹಾಕಲಾಗಿದೆ. ಹೂಳೆತ್ತಿದ ಮಣ್ಣಿನ ಪ್ರಮಾಣ 150 ಲಕ್ಷ ಸಿಎಂಟಿಆರ್ 5300 ಲಕ್ಷ ಸಿಎಫ್ಟಿ. ಈ ಹೂಳು ಮಣ್ಣಿನ ಶೇಖರಣೆಯಿಂದಾಗಿ ಕೆರೆಯ ನೀರು ಸಾಮರ್ಥ್ಯ (ಏರಿಯ) ಕಡಿಮೆಯಾಗಿದೆ. ನೀರು ತುಂಬಿದಾಗ, ಮಳೆಯಾದಾಗ ಮಣ್ಣು ಕರಗಿ ಒಳಮುಖವಾಗಿ ಜರುಗಿ ಮತ್ತೆ ಹೂಳು ತುಂಬಿಕೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನೀರಿಗೆ ಹಾಹಾಕಾರ: ಒಟ್ಟಾರೆ ಹೆಬ್ಬಾಕ ಕೆರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ತುಮಕೂರು ನಗರ ಜನತೆ ನೀರಿಗಾಗಿ ಪರದಾಡುವಂತಾಗಿದೆ. ಇದ್ದ ನೀರನ್ನು ಸದುಪಯೋಗಪಡಿಸಿಕೊಳ್ಳದೆ, ವ್ಯರ್ಥ ಮಾಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಹೀಗಾಗಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಿ ರಾಜ್ಯ ಲೋಕಾಯುಕ್ತರಿಗೆ ರಾಮಚಂದ್ರ ಮನವಿ ಮಾಡಿದ್ದಾರೆ.
63.948 ಎಂಸಿಎಫ್ಟಿ ನೀರು ವ್ಯರ್ಥ
ಹೆಬ್ಬಾಕ ಕೆರೆಗೆ ಹರಿಸಿ, ಸಂಗ್ರಹಿಸಲಾದ ಅಮೂಲ್ಯ ಕುಡಿಯುವ ನೀರು ಅಪಾರ ಪ್ರಮಾಣದಲ್ಲಿ ವ್ಯರ್ಥವಾಗಿದೆ. 11-8-2012 ರಿಂದ 20-1-13 ರವರೆಗೆ ಹೆಬ್ಬಾಕ ಕೆರೆಗೆ 3011.00 ದಶಲಕ್ಷ ಲೀಟರ್ ನೀರನ್ನು ಹರಿಸಲಾಗಿದೆ. ಇದರಲ್ಲಿ ವಿತರಣೆ ಮಾಡಿರುವುದು 1200.00 ದಶಲಕ್ಷ ಲೀಟರ್ ನೀರು. ವ್ಯರ್ಥವಾದ ನೀರು ಇಂಗುವಿಕೆಯಿಂದ 1811.00 ದಶಲಕ್ಷ ಲೀಟರ್ ನೀರು (63.948 ಎಂಸಿಎಫ್ಟಿ) ಮಳೆಯಿಂದಾಗಿ ಕೆರೆಗೆ ಒಳಹರಿವಿನ ನೈಸರ್ಗಿಕ ನೀರಿನ ಕಣಿವೆಗಳನ್ನು ಕೆಲವು ಕಡೆ ಮುಚ್ಚಲಾಗಿದೆ (ಮಾಹಿತಿ ಹಕ್ಕಿನಡಿಯಲ್ಲಿ ಪಡೆಯಲಾಗಿದೆ) ಜಲ ಸಂಗ್ರಹಾಗಾರದ ಸಾಮರ್ಥ್ಯ ವೃದ್ಧಿಸಲು ಕೆರೆ ಏರಿಯನ್ನು ಎತ್ತರಿಸಲಾಗಿದೆ. ಇದರಿಂದಾಗಿ ಕೆರೆಯ ಸಾಮರ್ಥ್ಯ 40.89 ಎಂಸಿಎಫ್ಟಿ. ಹೂಳೆತ್ತಿರುವುದರಿಂದ ಕರೆಯ ಸಾಮರ್ಥ್ಯ 52.82 ಎಂಸಿಎಫ್ಟಿ. ಒಟ್ಟು ಯೋಜಿತ ಸಾಮರ್ಥ್ಯ 93.75 ಎಂಸಿಎಫ್ಟಿ. ಕೆರೆಯ ಮೂಲ ಸಾಮರ್ಥ್ಯ (ಅಭಿವೃದ್ಧಿ ಪೂರ್ವ) 96.80 ಎಂಸಿಎಫ್ಟಿ. ಅಭಿವೃದ್ಧಿ ನಂತರ ಒಟ್ಟು ಸಾಮರ್ಥ್ಯ 190.55 ಎಂಸಿಎಫ್ಟಿ. ಆದರೆ ಹೂಳೆತ್ತಿದ ಮಣ್ಣನ್ನು, ಕೆರೆಯ ಎಂಡಬ್ಲ್ಯೂಎಲ್ ಮತ್ತು ಎಫ್ಟಿಎಲ್ ನೊಳಗೆ ರಾಶಿ ಹಾಕಿರುವುದರಿಂದ ಜಲಸಂಗ್ರಹಾಗಾರದ ಸಾಮರ್ಥ್ಯ ಕಡಿಮೆಯಾಗಿದೆ ಎಂದು ರಾಮಚಂದ್ರ ತಿಳಿಸಿದ್ದಾರೆ.
ಕಾಮಗಾರಿ ಮುಗಿದ ಮೇಲೆ ಮಣ್ಣು ಪರೀಕ್ಷೆ
ಕೆರೆ ನಿರ್ಮಾಣದ ಆರಂಭದಲ್ಲೇ ಮಾಡಬೇಕಾದ, ಮಣ್ಣಿನ ಪರೀಕ್ಷೆಯನ್ನು ಕಾಮಗಾರಿ ಮುಗಿದ ಮೇಲೆ, ನಾಗರಿಕರು ಮಾಹಿತಿ ಕೇಳಿದ ಮೇಲೆ, ಇದೀಗ ಮಣ್ಣನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಇದೊಂದು ಕರ್ತವ್ಯಲೋಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ರಾಮಚಂದ್ರ ತಿಳಿಸಿದ್ದಾರೆ. ಹೂಳು ತೆಗೆದ ಮೇಲೆ ತಳಭಾಗದಲ್ಲಿರುವ ಮಣ್ಣಿನ ಬಗ್ಗೆ ಪರೀಕ್ಷೆ ನಡೆಸಿಲ್ಲ. ತಳಭಾಗದಲ್ಲಿರುವ ಮಣ್ಣಿನ ಪರೀಕ್ಷೆ ಮಾಡಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯವರನ್ನು ಕೋರಲಾಗಿದೆ ಎಂದು ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಲಾಗಿದೆ ಎಂದು ರಾಮಚಂದ್ರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

