ಕ್ಷುಲ್ಲಕ ಕಾರಣಕ್ಕೆ ಹಿಮ್ಮೆಟ್ಟುವ ಅಂಕವೀರರು
ಕ.ಪ್ರ. ವಾರ್ತೆ ತುಮಕೂರು ಜೂ. 6
ಅಂಕವೀರರು ಜೀವನದಲ್ಲಿನ ಕ್ಷುಲ್ಲಕ ಕಾರಣಗಳಿಗೆ ಹೆದರಿ ಹಿಮ್ಮೆಟ್ಟುತ್ತಿರುವುದು ದೇಶದ ದುರಂತ ಎಂದು ವಕೀಲ, ತುಮಕೂರು ತಾಲೂಕು ಕಸಾಪ ಮಾಜಿ ಅಧ್ಯಕ್ಷ ರವೀಂದ್ರನಾಥ ಠಾಗೂರ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಗೋಕುಲ ಬಡಾವಣೆಯಲ್ಲಿ ನಡೆದ ಡಾ. ಜಯದೇವಿತಾಯಿ ಲಿಗಾಡೆ ಅವರ ಒಂದು ನೂರು ಉಪನ್ಯಾಸ ಮಾಲೆಯ 96 ನೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕೇವಲ ಶಾಲಾ ಪಠ್ಯಕ್ರಮದ ಅಂಕಗಳಿಕೆಯ ವೇಗಕ್ಕಷ್ಟೇ ಒಗ್ಗಿ, ಜೀವನ ಸವೆಸುವ ಇಂದಿನ ಯುವ ಪೀಳಿಗೆ, ಕ್ಷುಲ್ಲಕ ವಿಚಾರಗಳಿಗೆ ಹೆದರುವ, ತೀರ - ತೀರ ಸಣ್ಣ-ಸಣ್ಣ ವಿಷಯಗಳನ್ನು ಎದುರಿಸಲಾಗದೆ ಹಿಮ್ಮೆಟ್ಟುತ್ತಿದ್ದಾರೆ. ಕೆಲ ಬಾರಿ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಜವಾಬ್ದಾರಿಯುತ ಆಲೋಚನೆ ಮತ್ತು ಅನುಸರಣೆಯೇ ಸೇವೆಯ ನಿಜವಾದ ಅಂಕ ಎಂದು ವ್ಯಾಖ್ಯಾನಿಸಿದ ಠಾಗೂರ್, ಮಕ್ಕಳನ್ನು ಉನ್ನತ ಹುದ್ದೆಗೆ ಕೂರಿಸುವ ಭ್ರಮೆಯಲ್ಲಿ ತಳಹದಿಯ ಜೀವನ ಶೈಲಿ ಮರೆಸುವ ಇಂದಿನ ಬದುಕು, ಶೈಕ್ಷಣಿಕ ಕ್ರಮ ಯುವಜನತೆಯನ್ನು ದಾರಿತಪ್ಪಿಸುವಂತೆ ಇದೆ. ನಮ್ಮ ಹಿರಿಯರ ಸೇವೆ, ದೇಶದ ಚರಿತ್ರೆಗಳನ್ನು ಉನ್ನತ ವ್ಯಾಸಂಗದ ಮಟ್ಟದಲ್ಲಿ ವಿಸ್ತರಿಸುವ ಅಗತ್ಯವಿದೆ. ಉನ್ನತ ಹುದ್ದೆ, ಅಲಂಕರಿಸುವವರು ದೇಶ ಸೇವೆ, ನೀತಿ, ನಿಯಮ, ಮೌಲ್ಯ, ಜವಾಬ್ದಾರಿ ಎಲ್ಲಕ್ಕಿಂತ ತಾವೇ ಮಿಗಿಲು ಎಂಬ ಹುಂಬರಾಗಿರುವುದರಿಂದ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಭ್ರಷ್ಟಾಚಾರ ಬೃಹದಾಕಾರವಾಗಿ ಬೆಳೆದಿದೆ ಎಂದು ವಿಶ್ಲೇಷಿಸಿದರು.
ಮೌಢ್ಯ ತೊಳೆಯುವ ಡಾಕ್ಟರ್: ಇಂದು ಡಾಕ್ಟರ್, ಎಂಜಿನಿಯರ್, ಐಎಎಸ್, ಐಪಿಎಸ್, ಎಫ್ಎಸ್ ಆಗಬೇಕೆಂದು ಕನಸು ಕಾಣುವವರ ಸಂಖ್ಯೆ ಹಾಗೂ ಅವರ ಪೋಷಕರ ಸಂಖ್ಯೆ ವಿಪರೀತವಾಗಿದೆ. ಕನಿಷ್ಠ 1000 ಜನರಲ್ಲಿ ಒಬ್ಬರೂ ಕೂಡ ತಾವೊಬ್ಬ ಸಾಮಾಜಿಕ ಮೌಢ್ಯ ತೊಳೆಯುವ ಡಾಕ್ಟರ್ ಆಗಬೇಕೆಂಬ ಕನಸು ಕಾಣುವ ವ್ಯಕ್ತಿ ಸಿಗುವುದು ಇಂದು ವಿರಳವಾಗಿದೆ. ಇದಕ್ಕೆಲ್ಲಾ ಕಾರಣ ಆತ್ಮವಿಶ್ವಾಸ ಬೆಳೆಸದ, ದೇಶಪ್ರೇಮ ಬೆಳೆಸದ ಶಿಕ್ಷಣ ವ್ಯವಸ್ಥೆಯೇ ಮೂಲ ಕಾರಣ. ದೇಶದ ಶೈಕ್ಷಣಿಕ ವ್ಯವಸ್ಥೆ ವೈಫಲ್ಯದಿಂದಾಗಿ ಮೇಲಿನ ಸಮಸ್ಯೆಗಳು ಉದ್ಬವಿಸಿವೆ. ಸಹೋದರತೆಯ ಭಾವನೆ ಇಂದು ಇಲ್ಲವಾಗಿದೆ. ಕೇವಲ ಹುದ್ದೆಗಳನ್ನು ಅಲಂಕರಿಸಿದರೆ ವ್ಯಕ್ತಿತ್ವ ಬಾರದು. ಅದು ಜನಸಾಮಾನ್ಯರ ನೋವು ಅರಿವು ಮಾಡಿಕೊಳ್ಳದೇ ಹೋದಲ್ಲಿ ಹುದ್ದೆಗೆ ಯಾವುದೆ ಅರ್ಥವಿಲ್ಲ. ಸಾಮಾನ್ಯರ ನೋವು ಅರಿವು ಮಾಡಿಕೊಂಡು, ಸಮಸ್ಯೆ ನೀಗಿಸುವುದೇ ಹುದ್ದೆಗೆ ಒಂದು ಶೋಭೆ ಎಂದು ಠಾಗೂರ್ ವಿಶ್ಲೇಷಿಸಿದರು.
ಸಮಾಜ ಸೇವೆಗೆ ಪ್ರಚೋದನೆ: ನಿಂತಲ್ಲಿ, ಕೂತಲ್ಲಿ, ಎಲ್ಲೆಲ್ಲಿಯೂ ಮನರಂಜನೆಗೆ ಒತ್ತುಕೊಡುವ, ವ್ಯಾಪಾರೀಕರಣಕ್ಕೆ ಒತ್ತು ನೀಡುವ ಭಿತ್ತಿ ಚಿತ್ರಗಳು ರಾರಾಜಿಸುವ ಸಂದರ್ಭಗಳು ಹೆಚ್ಚುತ್ತಿವೆ. ಇವೆಲ್ಲಾ ಘಟನಾವಳಿಗಳು ದೇಶ ಎತ್ತ ಸಾಗುತ್ತಿದೆ ಎಂಬುದರ ಸಂಕೇತ. ಸಮಾಜಕ್ಕೆ ಮಾರಕ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲವೂ ಮಿತಿಯಲ್ಲಿ ಸಾಗಿದಾಗ, ಕಷ್ಟಗಳನ್ನು ಸವಾಲಾಗಿ ಭಾವಿಸುವ ಜೀವನಕ್ರಮ ಸಮಾಜದಲ್ಲಿ ಬೆಳೆಯುತ್ತದೆ. ಕನ್ನಡ ಕುಲೋದ್ಧಾರಕರು ಅನುಪಮ ಸೇವೆ ಮಾಡಿರುವುದನ್ನು ಹೆಚ್ಚಾಗಿ ಪಠ್ಯಕ್ರಮದಲ್ಲಿ ತೊಡಗಿಸಿ, ಯುವ ಪೀಳಿಗೆಯನ್ನು ಸಾಮಾಜಿಕ ಸೇವೆಗೆ ಪ್ರಚೋದಿಸುವುದು ಆಳುವ ಸರ್ಕಾರ ಕರ್ತವ್ಯವಾಗಬೇಕು ಎಂದು ಠಾಗೂರ್ ಪ್ರತಿಪಾದಿಸಿದರು.
ಬೀಗಬೇಕಿಲ್ಲ: ಊರು-ಕೇರಿಗೆ ಹಲವು ಆಸ್ಪತ್ರೆ, ಪೊಲೀಸ್ ಠಾಣೆಗಳು, ನ್ಯಾಯಾಲಯಗಳು ಬಂದವೆಂದು ಬೀಗದಿರಿ ಎಂದು ಮಾರ್ಮಿಕವಾಗಿ ನುಡಿದ ಠಾಗೂರ್, ಈ ಮೂರು ಸಂಸ್ಥೆಗಳು ಹೆಚ್ಚಾದಂತೆ ದೇಶ ಆರೋಗ್ಯವಾಗಿಲ್ಲ. ನ್ಯಾಯಯುತವಾಗಿಲ್ಲ. ಅಪರಾಧಮುಕ್ತವಾಗಿಲ್ಲ ಎಂಬುದನ್ನು ಸಾರಿ-ಸಾರಿ ಹೇಳುತ್ತವೆ ಎಂಬುದನ್ನು ಮರೆಯದಿರೋಣ ಎಂದರು.
ಲಿಗಾಡೆ ಆದರ್ಶ ಅನುಕರಣೀಯ: ಮರಾಠಿ ನೆಲದಲ್ಲಿ ಹುಟ್ಟಿದ ಜಯದೇವಿತಾಯಿ ಲಿಗಾಡೆ ಅವರ ಸೇವೆ ಕೇವಲ ಕನ್ನಡ ಸಾಹಿತ್ಯಕ್ಕಷ್ಟೇ ಸೀಮಿತವಲ್ಲ. ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟ, ತಮ್ಮ ಅಪಾರ ಸಂಪತ್ತನ್ನು ಬಡಜನತೆಗೆ ಹಂಚಿ, ಮೌಲ್ಯಯುತ ಬದುಕಿಗಾಗಿ ಹೋರಾಟ ಮಾಡಿದ ಲಿಗಾಡೆ ಅವರ ಆದರ್ಶ ಅನುಕರಣೀಯ ಎಂದರು. ಇಂತಹ ವ್ಯಕ್ತಿತ್ವದ ಲಿಗಾಡೆಯವರ ಶತಮಾನೋತ್ಸವದ ವೇಳೆ ಎಂ.ಜಿ. ಸಿದ್ದರಾಮಯ್ಯನವರು ಲಿಗಾಡೆ ಕುರಿತು ಒಂದು ನೂರು ಉಪನ್ಯಾಸ ಕೊಡಲು ಮುಂದಾಗಿ, ಶತಕ ಸಮೀಪಿಸುತ್ತಿರುವುದು. ಅಭಿನಂದನೀಯ ಎಂದರು.
ಎಂ.ಜಿ. ಸಿದ್ದರಾಮಯ್ಯ ಜಯದೇವಿ ತಾಯಿ ಲಿಗಾಡೆಯವರ ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರೌಢಶಾಲೆಯಲ್ಲಿ ಆಂಗ್ಲಭಾಷೆ ಕಲಿತು, ಅಂದಿನ ಹೈದರಾಬಾದ್ ಪ್ರಾಂತ್ಯದ ಬೀದರ್, ಗುಲ್ಬರ್ಗ, ರಾಯಚೂರು ಜಿಲ್ಲೆಗಳಲ್ಲಿ ಜನ ಜಾಗೃತಿಗಾಗಿ ಚಳವಳಿಗಳಲ್ಲಿ ಭಾಗವಹಿಸಿ ಉರ್ದುಭಾಷೆಯನ್ನು ಕಲಿತು ಪಂಚಭಾಷೆ ತಾರೆಯಾಗಿ, ಕರ್ನಾಟಕ ಮರೆಯಲಾಗದ ಕವಯತ್ರಿಯಾದರು ಎಂದು ಪ್ರಶಂಶಿಸಿದರು.
ಗಂಗಾ ನರ್ಸಿಂಗ್ ಹೋಂನ ಡಾ.ಹೆಚ್.ಬಿ.ಎಂ. ಹಿರೇಮಠ್ ಮಾತನಾಡಿ, ಮನುಷ್ಯ ಹಣದ ದಾಸನಾಗಿ ಮೃಗೀಯ ವರ್ತನೆಗೆ ಇಳಿಯುತ್ತಿದ್ದಾನೆ. ಸಾಹಿತ್ಯ ನಮ್ಮ ಮನಸ್ಸನ್ನು ಅರಳಿಸುತ್ತದೆ ಎಂದರು. ಮಹಿಳಾ ತೋಂಟಾದಾರ್ಯ ಅರ ಕುಟುಂಬದ ಶ್ರಮದೊಂದಿಗೆ ಕಾರ್ಯಕ್ರಮ ಏರ್ಪಾಟಾಗಿತ್ತು. ಚಿಕ್ಕಬೆಳ್ಳಾವಿ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿ, ಸಿದ್ದಲಿಂಗಸ್ವಾಮಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

