ಪರಿಸರದ ಬಗ್ಗೆ ಯುವ ಜನತೆಗೆ ಜಾಗೃತಿ ಅಗತ್ಯ
ತಿಪಟೂರು: ವಿಶ್ವ ಪರಿಸರ ದಿನಾಚರಣೆ ಯೋಜಿಸಿ, ಸೇವಿಸಿ, ಉಳಿಸಿ ಎಂಬ ಧ್ಯೇಯ ವಿಷಯದೊಡನೆ ಆಚರಿಸುತ್ತಿದ್ದು, ಆಹಾರ ಪೋಲು ಮಾಡುವುದರ ವಿರುದ್ಧ ಜಾಗೃತಿ ಮೂಡಿಸುವಂತಾಗಬೇಕೆಂದು ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ಡಾ.ಜಿ.ಎಂ. ಸುಜಿತ್ ತಿಳಿಸಿದರು.
ತಾಲೂಕಿನ ಬಿದರೆಗುಡಿಕಾವಲ್ ಕೃಷಿ ವಿಜ್ಞಾನ ಕೇಂದ್ರವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ಹೊನ್ನವಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಹೊಟ್ಟೆ ತುಂಬಿಸಿಕೊಳ್ಳಲು ಆಹಾರವಿಲ್ಲದೇ ಒಂದು ಹೊತ್ತಿನ ಊಟ ಮಾಡುವವರು ಒಂದೆಡೆ, ಮೋಜಿಗಾಗಿ ತಿಂದು ತೇಗುವವರು ಮತ್ತೊಂದೆಡೆ ಎಂಬ ವಾಸ್ತವ ಸಂಗತಿಯನ್ನು ವಿವರಿಸಿ, ಆಹಾರವನ್ನು ಪೋಲು ಮಾಡುವುದರಿಂದ ಆರ್ಥಿಕ ಅಪವ್ಯಯವಲ್ಲದೇ ಪರಿಸರದ ಮೇಲೆಯೂ ಕೂಡ ಗಂಭೀರ ದುಷ್ಪರಿಣಾಮ ಬೀರಲಿದೆ. ಬಿಸಾಡಿದ ಆಹಾರ ಪದಾರ್ಥಗಳು ಕೊಳೆಯುವಿಕೆಯಿಂದ ಮಿಥೇನ್ ಅನಿಲ ಹೆಚ್ಚಿನ ಹವಮಾನ ಬದಲಾವಣೆಗೆ ಕಾರಣವಾದ ಹಾನಿಕಾರಕ ಅನಿಲವೊಂದು ವಾತಾವರಣ ಸೇರಲು ನಾವು ಕಾರಣವಾಗುತ್ತಿದ್ದೇವೆಂದರಲ್ಲದೆ ಯುವ ಪೀಳಿಗೆಗೆ ದಿನನಿತ್ಯವೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ಕರೆ ನೀಡಿದರು. ಕೇಂದ್ರದ ವಿಜ್ಞಾನಿ ಎಂ.ಎಚ್.ಶಂಕರ್ ಪರಿಸರ ಸಂರಕ್ಷಣೆ ಹಾಗೂ ಪರಿಸರ ಸ್ವಚ್ಛತೆಯಿಂದ ಕೂಡಿದ್ದರೆ ಆರೋಗ್ಯವಂತ ಬದುಕಿಗೆ ಒಂದು ಬುನಾದಿ ಇದ್ದಂತೆ ಎಂದರು.
ಕರ್ತವ್ಯ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ್ ಡೆಂಘೀಯಂತಹ ಮಾರಕ ರೋಗಗಳನ್ನು ಪರಿಸರದಿಂದಲೇ ನಿಯಂತ್ರಿಸಬಹುದು. ಉತ್ತಮ ಪರಿಸರವು ನಮಗೆ ಹಿರಿಯರು ಕೊಟ್ಟ ಬಳುವಳಿಯಾಗಿದ್ದು, ಅದನ್ನು ಸಂರಕ್ಷಿಸಿ ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕೇಂದ್ರದ ಸಸ್ಯ ಸಂರಕ್ಷಣೆ ವಿಷಯ ತಜ್ಞ ಡಾ.ಕೆ.ಎಂ.ಶ್ರೀನಿವಾಸ ರೆಡ್ಡಿ ಮಾತನಾಡಿ ಉತ್ತಮ ಹಾಗೂ ಆರೋಗ್ಯ ಪೂರ್ಣ ಜೀವನ ನಡೆಸಲು ಗಾಳಿ, ನೀರು ಮತ್ತು ಆಹಾರದ ಸದ್ಬಳಕೆ ಪ್ರಮುಖವಾಗಿದ್ದು, ನಮ್ಮೇಲ್ಲರ ಆಜಾಗರೂಕತೆಯಿಂದ ಇಂದು ಪರಿಸರ ಕಲುಷಿತವಾಗಿದ್ದು ಅದನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಶುಚಿತ್ವ ಅಗತ್ಯ: ಮಣ್ಣು ವಿಜ್ಞಾನದ ವಿಷಯ ತಜ್ಞೆ ಡಾ.ಬಿ.ಮಮತ ನಮ್ಮ ಆರೋಗ್ಯದಲ್ಲಿ ಸುಧಾರಣೆಯಾಗಲು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿತ್ವದಿಂದ ಇಟ್ಟುಕೊಳ್ಳಬೇಕೆಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನವಳ್ಳಿ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ಸುಮಾರು 100ಕ್ಕೂ ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪರಿಸರದ ದಿನಾಚರಣೆ ಜ್ಞಾಪಕಾರ್ಥವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

