ಪರಮಶಿವಯ್ಯ ಯೋಜನೆ ನೆನಗುದಿಗೆ ಬಿದ್ದಿದೆಯೇ?
ಕ.ಪ್ರ.ವಾರ್ತೆ ತುಮಕೂರು ಜೂ. 9
9 ಜಿಲ್ಲೆಗಳ ಸುಮಾರು 10 ಸಾವಿರ ಕೆರೆಗಳಿಗೆ ಕುಡಿಯುವ ನೀರೊದಗಿಸುವ ಪರಮಶಿವಯ್ಯ ವರದಿ ಜಾರಿಗೆ (ವಾಟರ್ಗ್ರಿಡ್) ನಿರುತ್ಸಾಹ ತೋರಿರುವ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ವಿರುದ್ಧ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಿಂದಿನ ಸರ್ಕಾರದ ಜಗದೀಶ್ ಶೆಟ್ಟರ್ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು, ರಾಜ್ಯ ಸರ್ಕಾರದ ಮುಂಗಡ ಪತ್ರದಲ್ಲಿ 1000 ಕೋಟಿ ರು. ಮೀಸಲಿಟ್ಟಿರುವ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಹೇಳಿರುವ ಸಚಿವ ಟಿ.ಬಿ. ಜಯಚಂದ್ರ ಹೇಳಿಕೆ ಹಾಸ್ಯಾಸ್ಪದ. ಅವಿವೇಕತನದ ಪರಮಾವಧಿ. ಬೌದ್ಧಿಕ ದಿವಾಳಿಕೋರತನಕ್ಕೆ ಸಾಕ್ಷಿ ಎಂದು ಬಸವರಾಜು ಹರಿಹಾಯ್ದರು. ನೆನೆಗುದಿಗೆ ಬಿದ್ದಿರುವ ರಾಜ್ಯದ 78 ಇತರೆ ನೀರಾವರಿ ಯೋಜನೆಗಳ ಜತೆ ಚಾಲ್ತಿಯಲ್ಲಿರುವ, 3 ಜನ ಮುಖ್ಯ ಎಂಜಿನಿಯರ್ಗಳ ಸಮಿತಿ ಶಿಫಾರಸಿನಂತೆ ಅನುಷ್ಠಾನಕ್ಕೆ ಸಿದ್ಧವಿರುವ ಪರಮಶಿವಯ್ಯ ವರದಿಯನ್ನು ಸೇರಿಸಿ ಹೇಳಿಕೆ ನೀಡಿರುವುದು ಜಯಚಂದ್ರ ಅವರ ಸಣ್ಣತನಕ್ಕೆ, ಬೌದ್ಧಿಕ ದಿವಾಳಿಕೋರತನಕ್ಕೆ ಸಾಕ್ಷಿಯಾಗಿದೆ. ಹಿಂದಿನ ಸರ್ಕಾರ ಒಪ್ಪಿರುವ ನಿರ್ಣಯವನ್ನು ತಿರುಚಿ ಹೇಳಿಕೆ ನೀಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಇದೊಂದು ಸಂವಿಧಾನದ ಕಗ್ಗೊಲೆಯೇ ಸರಿ ಎಂದು ಜಿಎಸ್ಬಿ ಕಿಡಿ ಕಾರಿದರು.
ಎತ್ತಿನಹೊಳೆ ಪರಮಶಿವಯ್ಯ ವರದಿಯ ಭಾಗ: ಎತ್ತಿನಹೊಳೆ ಯೋಜನೆ ಪರಮಶಿವಯ್ಯ ವರದಿಯ ಒಂದು ಭಾಗ. ಆದರೆ ಕೆಲ ರಾಜಕಾರಣಿಗಳು, ಜಯಚಂದ್ರರೂ ಸೇರಿದಂತೆ ಎತ್ತಿನಹೊಳೆ ಯೋಜನೆಯನ್ನೇ ಪ್ರತ್ಯೇಕ ಎಂದು ಬಿಂಬಿಸಿ, ಪರಮಶಿವಯ್ಯನವರ ವರದಿ ವಿಳಂಬವಾಗಲಿದೆ ಎಂದು ಡೋಂಗಿತನವನ್ನು ಪ್ರದರ್ಶಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಜನತೆ ಬೀದಿಗಿಳಿದು ಹೋರಾಟ ಮಾಡುವುದು ಖಚಿತ. ಬಜೆಟ್ನಲ್ಲಿ ಸೇರ್ಪಡೆಯಾಗಿ, ಸಚಿವ ಸಂಪುಟದಲ್ಲಿ ಅನುಮೋದನೆಗೊಂಡಿರುವ ಪರಮಶಿವಯ್ಯ ವರದಿಯಾಧಾರಿತ ಯೋಜನೆ ಚಾಲ್ತಿಯಲ್ಲಿದೆಯೋ ಅಥವಾ ನೆನೆಗುದಿಗೆ ಬಿದ್ದಿರುವ 78 ನೀರಾವರಿ ಯೋಜನೆಗಳ ಪಟ್ಟಿಯಲ್ಲಿದೆಯೋ ಎಂಬುದನ್ನು ತುಮಕೂರು ಸೇರಿದಂತೆ 9 ಜಿಲ್ಲೆಗಳ ಮಹಾಜನತೆ ತೀರ್ಮಾನಿಸುವಂತೆ ಜಿಎಸ್ಬಿ ಮನವಿ ಮಾಡಿದರು.
ಮೈದಾಳದ ಬಳಿ ಪೈಪ್ ಪ್ಯಾಕ್ಟರಿ: ಪೈಪ್ ಲಾಬಿಯಿಂದಾಗಿ ಪರಮಶಿವಯ್ಯ ಯೋಜನೆಗೆ ಅಡ್ಡಿಯಾಗಿದೆ. ಈ ಪೈಪ್ ಲಾಬಿಯಲ್ಲಿ ಸಚಿವ ಜಯಚಂದ್ರರ ಹೆಸರು ಕೇಳಿಬರುತ್ತಿದೆ. ಈಗಾಗಲೇ ತುಮಕೂರು ಗ್ರಾಮಾಂತರದ ಮೈದಾಳದಲ್ಲಿ ಪೈಪ್ ಫ್ಯಾಕ್ಟರಿ ಕೂಡ ಆರಂಭವಾಗಿದೆ. ಇಐ ಟೆಕ್ನಾಲಜೀಸ್ ಎಂಬ ಸಂಸ್ಥೆ ಕೂಡ ಈ ಪೈಪ್ ಲಾಬಿಯಲ್ಲಿದೆ. ಹಿಂದಿನ ಸರ್ಕಾರದ ನೀರಾವರಿ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ, ಅಂದಿನ ಸಿಎಂ ಆರ್ಥಿಕ ಸಲಹೆಗಾರ ಕೆ.ವಿ. ರಾಜು ಕೂಡ ಈ ಪೈಪ್ ಲಾಬಿ ಜತೆಗೆ ಸೇರಿ, ಪರಮಶಿವಯ್ಯ ವರದಿ ಕುರಿತ ಸಂಪುಟ ನಿರ್ಣಯಕ್ಕೆ ಅಡ್ಡಗಾಲಾಗಿದ್ದರು. ಅವರ ಕುತಂತ್ರ ಬಯಲಾಗಿ, ಹೋರಾಟ ಮಾಡಲಾಗಿ, ಪರಮಶಿವಯ್ಯ ವರದಿಯನ್ನು ಸಂಪುಟ ಅಂಗೀಕರಿಸಿತು. ಆದರೆ ಪಶ್ಚಿಮಾಭಿವಮುಖವಾಗಿ ಹರಿಯುವ ಹಳ್ಳಗಳ ನೀರು, ಪರಮಶಿವಯ್ಯ ವರದಿಯಲ್ಲಿ ಹೇಳಿರುವಂತೆ ಗುರುತ್ವಾಕರ್ಷಣೆಯ ಮೂಲಕ ಸಲೀಸಾಗಿ ನೀರು ಹರಿದು ಬರಲಿದೆ. ಆದರೆ ಸರ್ಕಾರ ಈ ನೀರನ್ನು ಪೈಪ್ ಮೂಲಕ ನೀರು ಹರಿಸಲು ಸಹಕರಿಸಿ, ಪೈಪ್ ಲಾಬಿಗೆ ಮಣಿದಲ್ಲಿ ಸಾವಿರಾರು ಕೋಟಿ ರು. ಪೈಪ್ಗಳಿಗೆ ವ್ಯಯವಾಗಲಿದೆ. ಇದೊಂದು ಸಾರ್ವಜನಿಕರ ಹಣ ನಷ್ಟವೇ ಸರಿ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಪೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

