ಬಿಜೆಪಿಯಲ್ಲಿ ಯಾರ ಪಟ್ಟು ಹೇಗಿದೆಯೋ ಬಲ್ಲವರಾರು?
ಕ.ಪ್ರ.ವಾರ್ತೆ ತುಮಕೂರು ಜೂ. 9ಪ್ರಸ್ತುತ ರಾಷ್ಟ್ರಮಟ್ಟದ ಬಿಜೆಪಿಯಲ್ಲಿ ನಡೆದಿರುವ ಅಧಿಕಾರದ ಮೇಲಾಟ, ಪ್ರಧಾನಿ ಅಭ್ಯರ್ಥಿ ಘೋಷಣೆ ಹಿನ್ನೆಲೆಯಲ್ಲಿ ನಡೆದಿರುವ ಮುಸುಕಿನ ಗುದ್ದಾಟ ಕುರಿತು ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಬಿಜೆಪಿ ಹಿರಿಯ ಮುಖಂಡ ಆಡ್ವಾಣಿಗೆ ಸದ್ಯ ಹಿನ್ನೆಡೆಯಾಗಿಲ್ಲವೇ, ಅವರ ಯುಗಾಂತ್ಯವಾದಂತಲ್ಲವೇ ಎಂಬ ಪ್ರಶ್ನೆಗಳಿಗೆ, ಬಿಜೆಪಿಯಲ್ಲಿ ಯಾರ ಪಟ್ಟು ಹೇಗಿದೆಯೋ ಬಲ್ಲವರಾರು ಎಂದು ಮರು ಪ್ರಶ್ನಿಸಿದರು.
ರಾಷ್ಟ್ರಮಟ್ಟದ ಬಿಜೆಪಿಯಲ್ಲಿ ನಡೆದಿರುವ ಒಳ ರಾಜಕೀಯ ತಮಗೆ ಗೊತ್ತಿಲ್ಲ. ಬಿಜೆಪಿಯದ್ದು ಮೊದಲೇ ಗರ್ಭಗುಡಿ ಸಂಸ್ಕೃತಿ. ಆಡ್ವಾಣಿ - ಮೋದಿ ಗುಂಪಿನ ನಡುವಿನ ಮುಸುಕಿನ ಗುದ್ದಾಟ, ಒಳಪಟ್ಟುಗಳು, ಒಳಸುಳಿ ತಮಗೆ ಗೊತ್ತಿಲ್ಲ ಎಂದರು. ಎಲ್.ಕೆ. ಆಡ್ವಾಣಿಯವರನ್ನು ತಾವು ಹುಡುಗನಾದಾಗಿನಿಂದಲೂ ನೋಡಿದ್ದೇನೆ. ಅವರೊಬ್ಬ ಹಿರಿಯ ಮುಖಂಡ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿದವರು ಎಂದು ಆಡ್ವಾಣಿ ಕುರಿತು ಅಭಿಪ್ರಾಯವ್ಯಕ್ತಪಡಿಸಿದರು.
ಮೋದಿ ಇಷ್ಟ, ಬಿಜೆಪಿ ಕಷ್ಟ: ಆಡ್ವಾಣಿಯವರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಅವರನ್ನು ಹಾಡಿ ಹೊಗಳಿದ್ದಾರೆ. ಮೋದಿ ಮೊದಲೇ ಅಭಿವೃದ್ಧಿಯಾಗಿದ್ದ ಗುಜರಾತನ್ನು ಮತ್ತಷ್ಟು ಅಭಿವೃದ್ಧಿಪಡಿಸಿದ್ದಾರೆ. ಆದರೆ ನಿಜಕ್ಕೂ ಹಿಂದುಳಿದಿದ್ದ, ಪಾತಾಳ ಕಂಡಿದ್ದ ಮಧ್ಯಪ್ರದೇಶ ರಾಜ್ಯವನ್ನು ಶಿವರಾಜ್ ಸಿಂಗ್ ಚೌಹಾಣ್ ಅಭಿವೃದ್ಧಿಪಥದತ್ತ ಕೊಂಡೊಯ್ದಿದಿದ್ದಾರೆ, ಮೇಲೆತ್ತಿದ್ದಾರೆ ಎಂದು ಹೇಳುವುದರ ಮೂಲಕ ಕಾಲೆಳಿದಿದ್ದಾರೆ ಎಂದು ಬಿಜೆಪಿ ರಾಷ್ಟ್ರ ರಾಜಕೀಯವನ್ನು ವಿಶ್ಲೇಷಿಸಿದರು. ಬಿಜೆಪಿಯದ್ದು ಮೊದಲೇ ಗರ್ಭಗುಡಿ ಸಂಸ್ಕೃತಿ. ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪನವರನ್ನು ಸಹಿಸಲಿಲ್ಲ. ಕಾಟ ಕೊಟ್ಟರು. ಕಾಲೆಳೆದರು. ಅದೇ ರೀತಿ ಮೋದಿಯವರದ್ದೂ ಕೂಡ. ಮೋದಿಗೆ ಬಿಜೆಪಿ ಹೈಕಮಾಂಡ್ ಅಡ್ಡಗಾಲಾಗುತ್ತಿದೆ. ಕಾಟ ಕೊಡುತ್ತಿದೆ. ಕಾಲೆಳೆಯುತ್ತಿದೆ ಎಂದು ಬಿಜೆಪಿ ಸಂಸದ ಜಿಎಸ್ಬಿ ವಿಶ್ಲೇಷಿಸಿದರು. ನರೇಂದ್ರ ಮೋದಿ ಅಭಿವೃದ್ಧಿಪಥದತ್ತ ರಾಜ್ಯ ಕೊಂಡೊಯ್ಯುತ್ತಿರುವುದರ ವೇಗ, ನಮ್ಮ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಅವರಿಗಿಂತಲೂ ಹೆಚ್ಚು. ಮೋದಿ ವೈಯಕ್ತಿಕವಾಗಿ ಇಷ್ಟ. ಆದರೆ ಬಿಜೆಪಿ ಕಷ್ಟ ಎಂದು ಬಸವರಾಜು ಮಾರ್ಮಿಕವಾಗಿ ನುಡಿದರು. ಮೋದಿ ಪ್ರಧಾನಿಯಾಗುವುದರಿಂದ ತುಮಕೂರಿಗೇನೂ ಲಾಭವಿಲ್ಲ. ತಾವಂತೂ ಗರ್ಭಗುಡಿ ಸಂಸ್ಕೃತಿಯ ಬಿಜೆಪಿಯಲ್ಲಿರುವುದಿಲ್ಲ. ಇದಂತೂ ಶತಃಸಿದ್ಧ ಎಂದು ಷರ ಬರೆದರು.
ತೃತೀಯ ರಂಗಕ್ಕೆ ಅವಕಾಶವಿದೆ: ಹಾಲಿ ರಾಜಕೀಯ ಸನ್ನಿವೇಶ ನೋಡಿದರೆ ರಾಷ್ಟ್ರಮಟ್ಟದಲ್ಲಿ ತೃತೀಯ ರಂಗಕ್ಕೆ ಅವಕಾಶವಿದೆ. ಕೆಜೆಪಿ ರಾಜ್ಯಾಧ್ಯಕ್ಷ ಹಾಗೂ ತಮ್ಮ ನಾಯಕ ಯಡಿಯೂರಪ್ಪ ಕೂಡ ಈ ಕುರಿತು ಮಾತನಾಡಿದ್ದಾರೆ. ತಾವು ಮತ್ತೆ ಬಿಜೆಪಿಯಿಂದ ಸ್ಫರ್ಧಿಸುವುದಿಲ್ಲ. ಸಾಕಾಗಿ ಹೋಗಿದೆ. ಯಡಿಯೂರಪ್ಪ ಕೂಡ ಬಿಜೆಪಿಗೆ ಮರಳಿ ಹೋಗುವುದು ಸಾಧ್ಯವೇ ಇಲ್ಲ. ಅವರೂ ಕೂಡ ಸ್ಪಷ್ಟಪಡಿಸಿದ್ದಾರೆ. ತಾವಾಗಲೀ, ಯಡಿಯೂರಪ್ಪನವರಾಗಲೀ ಮತ್ತೆ ಬಿಜೆಪಿಗೆ ಹೋಗುವುದು ಸಾಧ್ಯವೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಷವಿಲ್ಲದೆ ಸ್ಪರ್ಧೆಯಿಲ್ಲ: ತಾವಂತೂ ಪಕ್ಷವಿಲ್ಲದೆ, ಏಕಾಂಗಿಯಾಗಿ ಮುಂಬರುವ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಕಾಂಗ್ರೆಸ್ಗೆ ಹೋಗುತ್ತೇನೋ ಇಲ್ಲವೋ, ತೃತೀಯ ರಂಗ ಅಸ್ತಿತ್ವಕ್ಕೆ ಬರುತ್ತೋ ಇಲ್ಲವೇ ಕಾದು ನೋಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

