ತುಮಕೂರು

ಮನೋರೋಗಕ್ಕೆ ದೇವರು, ದೆವ್ವ ಪರಿಹಾರವಲ್ಲ

Published On :

ಕ.ಪ್ರ.ವಾರ್ತೆ   ತುಮಕೂರು   ಜೂ. 10
ಮನೋರೋಗಕ್ಕೆ ದೇವರು - ದೆವ್ವ ಪರಿಹಾರವಲ್ಲ ಎಂದು ತುಮಕೂರಿನ ಸ್ನೇಹ ಮನೋವಿಕಾಸ ಕೇಂದ್ರದ ಖ್ಯಾತ ನರ ಮನೋವೈದ್ಯ ಲೋಕೇಶ್ಬಾಬು ಅಭಿಪ್ರಾಯಪಟ್ಟರು.
ಅವರು ಕೊರಟಗೆರೆ ತಾಲೂಕಿನ ಕೋಳಾಲ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಸ್ನೇಹ ಮನೋವಿಕಾಸ ಕೇಂದ್ರ, ಸೇಜಲ್ ನ್ಯೂ ಲೈಫ್ ಫೌಂಡೇಷನ್, ತುಮಕೂರು, ಕೋಳಾಲ ಗ್ರಾಮಪಂಚಾಯತ್  ಸಂಯುಕ್ತಾಶ್ರಯದಲ್ಲಿ ಏರ್ಪಾಟಾಗಿದ್ದ ಉಚಿತ ನರ ಮನೋರೋಗ,
ಮದ್ಯಪಾನ, ಮಾದಕ ವ್ಯಸನಿಗಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು. ದೇವರು-ದೆವ್ವ ಎಂಬ ಮೂಢನಂಬಿಕೆಯಿಂದ ಗುಡಿ-ಗೋಪುರ ಸುತ್ತಿ, ಸಾವಿರಾರು ರು.ಗಳನ್ನು ಖರ್ಚು ಮಾಡಿಕೊಂಡು, ಕೌಟುಂಬಿಕ ನೆಮ್ಮದಿ ಇಲ್ಲದೆ ಜೀವನ ಹಾಳು ಮಾಡಿಕೊಳ್ಳದೆ, ಸೂಕ್ತ ಸಮಯದಲ್ಲಿ ವೈದ್ಯರ ಸಲಹೆ, ಚಿಕಿತ್ಸೆ ಪಡೆದು ಗುಣಮುಖರಾಗುವಂತೆ ಡಾ. ಲೋಕೇಶ್ ಬಾಬು ಕರೆ ನೀಡಿದರು.
ಮನೋವೈದ್ಯರ ಚಿಕಿತ್ಸೆಯೊಂದೇ ಮಾರ್ಗ: ಮನೋರೋಗಕ್ಕೆ ಮನೋವೈದ್ಯರ ಚಿಕಿತ್ಸೆಯೊಂದೇ ಮಾರ್ಗ. ಇಲ್ಲ-ಸಲ್ಲದ ವಿಷಯಗಳಿಗೆ ತಲೆಕೆಡಿಸಿಕೊಂಡು, ವಿನಾಕಾರಣ ಅನುಮಾನಪಡುತ್ತಾ ಹೋಗುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ವ್ಯಕ್ತಿ ಮತ್ತಷ್ಟು ಕುಗ್ಗಿ ಹೋಗುತ್ತಾನೆ. ಅತಿಯಾದ ವಿಮರ್ಶೆ ಒಳ್ಳೆಯದಲ್ಲ. ಸಣ್ಣ- ಪುಟ್ಟ ವಿಷಯಗಳಿಗೆಲ್ಲಾ ತೀರ ತಲೆಕೆಡಿಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು.
ಕೊರಟಗೆರೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ. ಮೋಹನ್ದಾಸ್ ಮಾತನಾಡಿ, ನಮ್ಮ ನಡವಳಿಕೆಗಳು, ಭಾವನೆಗಳು, ಆಲೋಚನೆಗಳು ಸಕಾರಾತ್ಮಕವಾಗಿದ್ದಾಗ ಇಡೀ ಜಗತ್ತೇ ಚೆನ್ನಾಗಿರುತ್ತದೆ. ಹಾಗೂ ನಮ್ಮನ್ನು ನಾವು ಅರಿತುಕೊಂಡು ಅಭಿವೃದ್ಧಿಪರ ಚಿಂತನೆಗಳನ್ನು ಬೆಳೆಸಿಕೊಂಡಾಗ ನಾವು ಬದಲಾಗಬಹುದು. ಮಾನಸಿಕ ರೋಗಿಗಳು ಸಲಹೆ ಚಿಕಿತ್ಸೆ ಪಡೆಯುವುದರ ಮೂಲಕ ಸಮಾಜದಲ್ಲಿ ಉತ್ತಮವ್ಯಕ್ತಿಗಳಾಗಿ ಯಶಸ್ವಿ ಬದುಕನ್ನು ರೂಪಿಸಿಕೊಳ್ಳಬಹುದು ಎಂದರು.
ಹಣಕ್ಕೆ ಒತ್ತು: ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ ಮಾತನಾಡಿ, ಇಂದು ಜನತೆ ಹಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅದೇ ರೀತಿ ಮಾನಸಿಕ ಆರೋಗ್ಯಕ್ಕೂ ಅಷ್ಚೇ ಮಹತ್ವ ನೀಡಬೇಕು ಎಂದರು.
ಹಣಕ್ಕೆ ಮಹತ್ವ ಕೊಡುವ ವಿಷಯದಲ್ಲಿ ಗ್ರಾಮೀಣ ಅಥವಾ ನಗರ ಪ್ರದೇಶ ಎಂಬ ತಾರತಮ್ಯವಿಲ್ಲ. ಹಣ ಮಾಡುವುದೇ ಉದ್ಯೋಗವಾಗಿದ್ದು, ಇದರಿಂದ ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುವ ಪ್ರಸಂಗ ನಿರ್ಮಾಣವಾಗುವುದು. ಹೇಗೆ ಹಣಕ್ಕೆ ಮಹತ್ವ ನೀಡುತ್ತೇವೆಯೋ, ಹಾಗೆಯೇ ಮಾನಸಿಕ ಆರೋಗ್ಯಕ್ಕೂ ಮಹತ್ವ ನೀಡಿ, ಸಧೃಡರಾಗಿ, ಸಮಾಧಾನ, ನೆಮ್ಮದಿಯಿಂದ ಜೀವನ ರೂಪಿಸಿಕೊಂಡಾಗ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಅಭಿವೃದ್ಧಿಪಥದತ್ತ ಸಾಗುತ್ತೇವೆ ಎಂದು ಪ್ರೇಮ ಮಹಾಲಿಂಗಪ್ಪ ವಿಶ್ಲೇಷಿಸಿದರು.
ಸ್ನೇಹ ಮನೋವಿಕಾಸಕ್ಕೆ ಶ್ಲಾಘನೆ: ಮಾನಸಿಕ  ಸ್ಥಿಮಿತತೆ ಕಳೆದುಕೊಂಡಾಗ ಅನಾಹುತಗಳು ಸಂಭವಿಸಿ, ಸಮಸ್ಯೆಗಳು ಸೃಷ್ಟಿಯಾಗುವ ಸಂಭವ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಎಚ್ಚೆತ್ತುಕೊಂಡು ಆರೋಗ್ಯಕರ ಜೀವನ ರೂಢಿಸಿಕೊಳ್ಳಬೇಕು. ಹಾಗೂ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶದಲ್ಲಿನ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಸ್ನೇಹ ಮನೋವಿಕಾಸ ಕೇಂದ್ರದ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಮ್ಮ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯೆ ಸಿದ್ದಗಂಗಮ್ಮ, ಉಪಾಧ್ಯಕ್ಷೆ ರಾಧಮ್ಮ, ಡಾ. ಎಂ.ಆರ್. ಪ್ರಭ, ಡಾ. ಮೈತ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎನ್. ಪುಟ್ಟರಾಜ್ ತರೂರು, ಚೇತನ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ  ವರ್ಗ ಉಪಸ್ಥಿತರಿದ್ದರು.  ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 150 ಕ್ಕೂ ಹೆಚ್ಚು ರೋಗಿಗಳಿಗೆ ಸಲಹೆ - ಚಿಕಿತ್ಸೆ ಮತ್ತು ಔಷಧಿ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.