ತುಮಕೂರು

ಆಹಾರ ನಿರ್ವಹಣೆ ಕುರಿತು ಜಾಗೃತಿ ಮೂಡಿಸಿ

Published On :

ಕ.ಪ್ರ.ವಾರ್ತ್ಣೆ ತುಮಕೂರು   ಜೂ.11
ಆಹಾರ ನಿರ್ವಹಣೆ ಕುರಿತು ಜಾಗೃತಿ ಅತ್ಯಗತ್ಯ ಎಂದು ರಾಜ್ಯ ವಿಜ್ಞಾನ ತಂತ್ರ ವಿದ್ಯಾ ಮಂಡಳಿಯ ವಿಜ್ಞಾನಿ ಡಾ.ಎಸ್.ಜಿ. ಶ್ರೀಕಂಠೇಶ್ವರಸ್ವಾಮಿ ಪ್ರತಿಪಾದಿಸಿದರು.
ಅವರು ತುಮಕೂರಿನ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಲ್ಲಿ  ಏರ್ಪಾಟಾಗಿದ್ದ ಅಂತರಾಷ್ಟ್ರೀಯ ಜಲಸಹಕಾರ ವರ್ಷ 2013 ಆಚರಣೆ ಹಿನ್ನೆಲೆಯಲ್ಲಿ ಏರ್ಪಾಟಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜಾಗತಿಕ ಸಂದರ್ಭದಲ್ಲಿ ದಿನೇ-ದಿನೇ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಪ್ರತಿಯೊಬ್ಬರ ಹಸಿವನ್ನು ನೀಗಿಸಲು ಆಹಾರ ಅತ್ಯಗತ್ಯವಾಗಿದೆ. ಆದರೆ ಇಂದಿನ ಜನರಲ್ಲಿ ಆಹಾರ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಜರೂರಿನ ಸಂಗತಿಯಾಗಿದೆ ಎಂದರು.ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಆಲೋಚನಾ ಶಕ್ತಿ, ಕಾಳಜಿ, ಆತ್ಮವಿಶ್ವಾಸ, ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುತ್ತಾ ಮದುವೆ ಮಂಟಪ ಹಾಗೂ ಇನ್ನಿತರೆ ಸಮಾವೇಶಗಳಲ್ಲಿ ಆಹಾರ ಪೋಲಾಗುವುದರ  ಬಗ್ಗೆ ಎಚ್ಚರಿಕೆ ಮೂಡಿಸುತ್ತಾ, ತ್ಯಾಜ್ಯ ವಿಲೇವಾರಿ, ತ್ಯಾಜ್ಯ ನಿರ್ವಹಣೆ, ಮಳೆ ನೀರಿನ ಕೊಯ್ಲು ಮೊದಲಾದ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಿದರು.
ನಿಸರ್ಗದತ್ತ ಅಂಶ: ತಾಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿ ಟಿ.ಕೆ. ಸೋಮಶೇಖರ್ ಮಾತನಾಡಿ, ಮಣ್ಣು, ನೀರು, ಗಾಳಿ ಇವು ನಿಸರ್ಗದತ್ತ ಅಂಶಗಳು. ಪ್ರತಿಯೊಂದು ಜೀವಿಯ ಬದುಕಿಗೆ ಇವು ಅತ್ಯವಶ್ಯ. ಇವುಗಳ ಶುದ್ಧತೆ, ಬಳಕೆ ಮತ್ತು ಸಂರಕ್ಷಣೆಯ ಬಗ್ಗೆ ಜವಾಬ್ದಾರಿ ಹೊಂದಿರಬೇಕೆಂದು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ನಿರಂತರವಾಗಿ ನಡೆಯಬೇಕು. ಇಂತಹ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಅಧಿಕಾರಿ ವರ್ಗದ ಮಟ್ಟದಿಂದ, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನತೆಗಿರಬೇಕಾದ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದರು.
ವಿದ್ಯಾರ್ಥಿಗಳಿಂದ ಪ್ರತಿಜ್ಞೆ: ವಿದ್ಯಾವಾಹಿನಿ ಪಪೂ ಕಾಲೇಜಿನ ಪ್ರಿನ್ಸಿಪಾಲ್ ಎಸ್. ಕುಮಾರಸ್ವಾಮಿ ಮಾತನಾಡಿ, ಪರಿಸರ ದಿನಾಚರಣೆಯ ಪ್ರಾಮುಖ್ಯತೆ ತಿಳಿಸಿ, ಸುಸ್ಥಿರ ಅಭಿವೃದ್ಧಿಗಾಗಿ ಪರಿಸರ ಉಳಿಸುವಲ್ಲಿ, ನಾವು ಸಕ್ರಿಯವಾಗಿ ಪಾಲ್ಗೊಂಡು, ನೆರೆ ಹೊರೆಯವರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತೇವೆ ಎಂದು ಘೋಷಿಸಿ ಎಂದು ವಿದ್ಯಾರ್ಥಿಗಳಿಂದ ಪ್ರತಿಜ್ಞೆಮಾಡಿಸಿದರು.ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ. ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಹಾರ ಬೆಳೆಗಳು ಇಂದು ವಾಣಿಜ್ಯ ಬೆಳೆಗಳಾಗಿ ಮಾರ್ಪಟ್ಟಿವೆ. ಆ ಮನೋಭಾವನೆ ತ್ಯಜಿಸಿ ಆಹಾರ ಉತ್ಪಾದನೆಗೋಸ್ಕರ ಕೃಷಿ ಮಾಡಬೇಕಾದರೆ ಪರಿಸರ ಉಳಿಸಬೇಕಾಗಿದೆ ಎಂದರು.
ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ಹಸಿರುಪಡೆ ಸಂಚಾಲಕರಾದ ಶಿವಾನಂದ್ ಸ್ವಾಗತಿಸಿ, ಉಪನ್ಯಾಸಕ ನಾಗಭೂಷಣ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.