ತುಮಕೂರು

ಪಿಎಫ್, ಇಎಸ್ಐ ಕಟ್ಟದೆ ಗುತ್ತಿಗೆದಾರರಿಂದ ಮೋಸ

Published On :

ಕ.ಪ್ರ.ವಾರ್ತೆ   ತುಮಕೂರು   ಜೂ. 11
ತುಮಕೂರು:  ಪಿಎಫ್ ಮತ್ತು ಇಎಸ್ಐ ಕಟ್ಟದೆ ಗುತ್ತಿಗೆದಾರರು ಮೋಸ ಮಾಡಿದ್ದಾರೆಂದು ಆರೋಪಿಸಿ ತುಮಕೂರು ನಗರಸಭೆಯ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ನಗರಸಭೆಯಲ್ಲಿ ಸುಮಾರು 380 ಪೌರಕಾರ್ಮಿಕರಿದ್ದು, ಇವರಲ್ಲಿ 66 ಜನ ಮಾತ್ರ ಕಾಯಂ ಪೌರಕಾರ್ಮಿಕರಿದ್ದಾರೆ. ಉಳಿದವರು ಗುತ್ತಿಗೆ ಆಧಾರದ ಮೇಲೆ ಕಳೆದ 18 -20 ವರ್ಷಗಳಿಂದ ನಗರದ ಕಸ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಇಷ್ಟು ವರ್ಷದಿಂದ ಕೆಲಸ ಮಾಡಿದರೂ ಯಾರಿಗೂ ಸಹ ಕಾಯಂ ಆಗಿಲ್ಲ. ಕನಿಷ್ಠ ಕೂಲಿ ಹೆಸರಿನಲ್ಲಿ ಪಿಎಫ್, ಇಎಸ್ಐ ಸೇರಿ ಒಬ್ಬ ನೌಕರ 6  ಸಾವಿರ ರು.  ಕೂಲಿ ಪಡೆಯುತ್ತಿದ್ದು, ಅದನ್ನು ಕೂಡ ನಗರಸಭೆ ನೀಡದೆ ಗುತ್ತಿಗೆದಾರರನಿಂದ ಪಡೆಯುತ್ತಿದ್ದು, ಪೌರಕಾರ್ಮಿಕರಿಗೂ ನಗರಸಭೆಗೂ ಯಾವುದೇ ಸಂಬಂಧಿವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂಜು ಆರೋಪಿಸಿದ್ದಾರೆ.
ಕುಂತು ಕಟ್ಟಿಲ್ಲ: ಜಿಲ್ಲಾ ಪೌರಕಾರ್ಮಿಕರ ಸಂಘದ ಪದಾಧಿಕಾರಿ ದೇವರಾಜು ಮಾತನಾಡಿ, 2008-09ನೇ ಸಾಲಿನಲ್ಲಿ ತುಮಕೂರು ನಗರಸಭೆಯಿಂದ ನಗರದ ಸ್ವಚ್ಛತೆಯ ಗುತ್ತಿಗೆ ಪಡೆದವರು ಇಡೀ ಒಂದು ವರ್ಷದ ಪೌರಕಾರ್ಮಿಕರ ಪ್ರಾವಿಡೆಂಟ್ ಫಂಡ್ ಮತ್ತು ಇಎಸ್ಐ ಕಂತನ್ನು ಕಟ್ಟಿಲ್ಲ. ಒಬ್ಬ ಕಾರ್ಮಿಕರಿಗೆ ವರ್ಷಕ್ಕೆ ಎಂಟು ಸಾವಿರ ರು. ಗಳಂತೆ 330 ಜನ ಕಾರ್ಮಿಕರಿಗೆ 26 ಲಕ್ಷಕ್ಕೂ ಅಧಿಕ ಹಣವನ್ನು ಪಿಎಫ್ ಕಚೇರಿಗೆ ಕಟ್ಟಬೇಕಾಗಿದೆ ಎಂದರು.
ಅಲ್ಲದೆ 2011-12 ರಲ್ಲಿ ಗುತ್ತಿಗೆ ಪಡೆದಿದ್ದ ಬೃಂದಾವನ ಎಂಟರ್ ಪ್ರೈಸಸ್ ಸಂಸ್ಥೆಗೂ ಪೌರಕಾರ್ಮಿಕರ ಆರು ತಿಂಗಳ ಪಿಎಫ್ ಮತ್ತು ಇಎಸ್ಐ ಪಾವತಿಸಿಲ್ಲ. ಅಲ್ಲದೆ ಪ್ರಸ್ತುತ ಗುತ್ತಿಗೆ ಹಿಡಿದು ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಸಂಸ್ಥೆಯೂ ಸಹ ಕಾರ್ಮಿಕರ ಪಿಎಫ್, ಇಎಸ್ಐ ಕಟ್ಟಿದ್ದೇವೆ ಎಂದು ಹೇಳುತ್ತಿದ್ದರೂ ಇದುವರಗೆ ಕಾರ್ಮಿಕರ ಖಾತಗೆ ಜಮಾ ಆಗಿರುವ ರಸೀದಿಯಾಗಲಿ, ತಾವು ಕಟ್ಟಿರುವ ಹಣದ ಓಚರ್ ಆಗಲಿ ನೀಡಿಲ್ಲ. ಆದ್ದರಿಂದ ಹಾಲಿ ಇರುವವರು ಸಹ ನಮಗೆ ಮೋಸ ಮಾಡುತ್ತಿದ್ದಾರೆ ಎಂಬುದು ಪೌರಕಾರ್ಮಿಕರ ಆರೋಪವಾಗಿದೆ.
ದೂರು ನೀಡಿದರೂ ಪ್ರಯೋಜನವಿಲ್ಲ: ತುಮಕೂರು ನಗರಸಭೆಯಲ್ಲಿ 2009 ರಿಂದ ಇಲ್ಲಿಯವರೆಗೆ ಏಳು ಜನ ಆಯುಕ್ತರು ಕೆಲಸ ಮಾಡಿದ್ದು ಗುತ್ತಿಗೆ ಪೌರಕಾರ್ಮಿಕರ ಪಿಎಫ್, ಇಎಸ್ಐಯನ್ನು ಗುತ್ತಿಗೆದಾರರು ಪಾವತಿಸದಿರುವ ಬಗ್ಗೆ ಹಲವಾರು ದೂರುಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲದಂತಾಗಿದೆ. ಕಾರ್ಮಿಕರ ಪಿಎಫ್ ಮತ್ತು ಇಎಸ್ಐ ಕಟ್ಟದಿದ್ದರೆ ಅಂತಹ ಸಂಸ್ಥೆಯ ವಿರುದ್ಧ ಕ್ರಿಮಿಲ್ ಕೇಸು ದಾಖಲಿಸಲು ಮತ್ತು ಆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲು ಕಾನೂನಿನಲ್ಲಿಯೇ ಅವಕಾಶವಿದೆ. ಆದರೆ ಇದುವರೆಗೂ ಅಧಿಕಾರ ನಡೆಸಿರುವ ಯಾವೊಬ್ಬ ಆಯುಕ್ತರು ಕೂಡ ಪೌರಕಾರ್ಮಿಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ಎಲ್ಲರೂ ಸಹ ಮನವಿ ಪತ್ರ ಪಡೆದು ಕಸದ ಬುಟ್ಟಿಗೆ ಹಾಕಿ ಕೈತೊಳೆದುಕೊಂಡಿದ್ದು, ಗುತ್ತಿಗೆ ಪೌರಕಾರ್ಮಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಕಳೆದ ಒಂದು ವರ್ಷದಲ್ಲಿ ಏಳು ಜನ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರಕಾರ್ಮಿಕರು ಸಾವನಪ್ಪಿದ್ದು, ಕಳೆದ ಒಂದೂವರೆ ತಿಂಗಳಲ್ಲಿ ಮೂರು ಜನ ಸಾವನ್ನಪ್ಪಿದ್ದು, ಕುಟುಂಬದವರು ಕಾರ್ಮಿಕನ ಪಿಎಫ್ ಪಡೆಯಲು ಹೋದರೆ ಯಾವುದೇ ರೀತಿಯ ಹಣ ಪಾವತಿಯಾಗದೆ ಕಣ್ಣೀರಿನಲ್ಲಿ ಕೈತೊಳ್ಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವಾಗಿ ಹಲವಾರು ಬಾರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿಯೂ ಚರ್ಚೆಯಾಗಿದ್ದು, ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳುವ ಚರ್ಚೆಗಳು ನಡೆದರೂ ಇದುವರೆಗೂ ಮಾತ್ರ ಯಾರ ವಿರುದ್ಧವೂ ಕನಿಷ್ಠ ಕೇಸು ದಾಖಲಿಸುವ ಪ್ರಯತ್ನ ಸಹ ನಡೆದಿಲ್ಲ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.