ಎಚ್ಚರಿಕೆಗಷ್ಟೇ ಸೀಮಿತ ಕೆಡಿಪಿ ಸಭೆ
ಅದಲಗೆರೆ ನಾಗೇಂದ್ರಕುಮಾರ್
ಕ.ಪ್ರ. ವಾರ್ತೆ ತುಮಕೂರು ಜೂ.13
ಜಿಲ್ಲೆಯ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ನಡೆಸಲಾಗುವ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಪ್ರಗತಿ ಪರಿಶೀಲನಾ ಕೆಡಿಪಿ ಸಭೆ ಜೂ. 15 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಾಟಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಏರ್ಪಾಟಾಗಿರುವ ಮೊದಲ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆ ಇದಾಗಿದ್ದು, ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಒಂದು ವರ್ಷಕ್ಕೆ 4 ಕೆಡಿಪಿ ಸಭೆಗಳನ್ನು ಮಾಡಬೇಕೆಂಬ ನಿಯಮವಿದ್ದರೂ, ಕಾರಣಾಂತರಗಳಿಂದ ತುಮಕೂರು ಜಿಲ್ಲೆಯಲ್ಲಿ ಈ ತ್ರೈಮಾಸಿಕ ಸಭೆಗಳು ಸಮಯಕ್ಕೆ ಸರಿಯಾಗಿ ನಡೆದಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್. ಸುರೇಶ್ ಕುಮಾರ್ ಅವಧಿಯಲ್ಲಿ ನಿರಂತರವಾಗಿ ಸಭೆ ನಡೆದಿದ್ದು ಬಿಟ್ಟರೆ, ನಂತರ ಬಂದ ಸಚಿವ ಸೋಮಣ್ಣ, ಮುರುಗೇಶ್ ನಿರಾಣಿ ಅವಧಿಯಲ್ಲಿ ಸಭೆಗಳೂ ತೀರ ಅಪರೂಪವಾಗಿ, ವರ್ಷವಾದರೂ ಕೆಡಿಪಿ ಸಭೆ ನಡೆಯದ ಉದಾಹರಣೆಗಳಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೇಳುವವರು, ಕೇಳುವವರು ಇಲ್ಲದಂತಾಗಿ ಹೋಗಿತ್ತು. ಬಿಜೆಪಿ ಸರ್ಕಾರದ ಕೊನೆ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ, ತುಮಕೂರು ನಗರ ಶಾಸಕರಾದ ಸೊಗಡು ಶಿವಣ್ಣನವರ ನೇತೃತ್ವದಲ್ಲಿ ಒಂದೆರಡು ಸಭೆಗಳು ನಡೆದವು.
ಹಳಸಲು ಎಚ್ಚರಿಕೆಗಷ್ಟೇ ಸೀಮಿತ: ಈ ತ್ರೈಮಾಸಿಕ ಸಭೆಯಲ್ಲಿ ಆಯಾ ಇಲಾಖೆ ಮುಖ್ಯಸ್ಥರು ಸಂಪೂರ್ಣ ವರದಿ ನೀಡಬೇಕಾದ್ದು ಕರ್ತವ್ಯ. ಸಂಬಂಧಪಟ್ಟ ಜಿಪಂ ಸದಸ್ಯರೋ, ಶಾಸಕರೋ, ಮಂತ್ರಿಗಳೋ ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು. ಆದರೆ ಬಹುತೇಕ ಸಂದರ್ಭಗಳಲ್ಲಿ ಅಧಿಕಾರಿಗಳು ಕೊಡುವ ಮಾಹಿತಿ ಅಪೂರ್ಣ. ಇಂತಹ ಅಧಿಕಾರಿಗಳಿಗೆ ಒಂದು ಎಚ್ಚರಿಕೆ ಕೊಟ್ಟು, ಮುಂದಿನ ಕೆಡಿಪಿ ಸಭೆಗೆ ಸಂಪೂರ್ಣ ಮಾಹಿತಿ ನೀಡುವಂತೆ ಸಚಿವರು ಆದೇಶಿಸುತ್ತಾರೆ. ಅಲ್ಲಿಗೆ ಆ ಅದಕ್ಷ ಅಧಿಕಾರಿ ತ್ರೈಮಾಸಿಕ ಕರ್ತವ್ಯ ಪೂರ್ಣವಾದಂತೆಯೇ. ನಂತರ ಅದೇ ಗೋಳು ಮುಂದಿನ ತ್ರೈಮಾಸಿಕ ಸಭೆಯಲ್ಲಿ. ಸಂಬಂಧಪಟ್ಟ ಅಧಿಕಾರಿಗಳು ಈ ಹಳಸಲು ಎಚ್ಚರಿಕೆಗೆ ಒಗ್ಗಿ ಹೋಗಿದ್ದು, ಯಾರಿಂದ, ಏನೂ ತೊಂದರೆಯಾಗಲ್ಲ ಬಿಡ್ರಿ ಎಂಬ ಮನೋಸ್ಥಿತಿ ತಲುಪಿದ್ದಾರೆ.
ಅವ್ಯವಸ್ಥೆಯ ಆಗರ: ಇಲಾಖೆಯ ಪ್ರಸ್ತಾಪವಾಗುತ್ತಿದ್ದಂತೆ ವರದಿ ಹೇಳಲು ಆರಂಭಿಸುವ ಸಂಬಂಧಪಟ್ಟ ಇಲಾಖೆ ಅಧಿಕಾರಿ ಸಭೆಗೆ ತಮ್ಮ ಪರಿಚಯವನ್ನು ಕೂಡ ಮಾಡಿಕೊಳ್ಳುವುದಿಲ್ಲ. ಪರಿಚಯ ಮಾಡಿಕೊಳ್ಳಿ ಎಂದು ಸಚಿವರು, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸಿಇಓ, ಡಿಸಿ ಸೇರಿದಂತೆ ಯಾರೊಬ್ಬರೂ ಹೇಳುವುದಿಲ್ಲ. ಸಂಬಂಧಪಟ್ಟ ಇಲಾಖೆಯ ಯೋಜನಾ ಪ್ರಗತಿಯ ಘಟಕ, ಭೌತಿಕ, ವಾರ್ಷಿಕ, ಗುರಿ, ಸಾಧನೆಯ ಎಲ್ಲ ಕಾಲಂಗಳಲ್ಲಿ ಸೊನ್ನೆ ಸುತ್ತಿರುವ ಉದಾಹರಣೆಗಳು ಈ ಹಿಂದೆ ಬಂದು ಹೋಗಿವೆ. ಆ ವೇಳೆ ಆಶ್ಚರ್ಯಚಕಿತರಾಗುವ ಸಚಿವರು ಏನ್ರೀ ಎಲ್ಲ ಕಡೆ ಸೊನ್ನೆ ಸುತ್ತಿದ್ದೀರಲ್ರೀ, ಜವಾಬ್ದಾರಿಯಿಲ್ಲವೇ ನಿಮಗೆ ಎಂದು ಅದೇ ಹಳಸಲು ಎಚ್ಚರಿಕೆ ಕೊಟ್ಟಿದ್ದು ಬಿಟ್ಟರೆ, ಕ್ರಮ ಜರುಗಿಸಿದ ಉದಾಹರಣೆಗಳು ಇಲ್ಲವೇ ಇಲ್ಲ.
ಪ್ರಶಂಸೆಯಿಲ್ಲ, ಶಿಕ್ಷೆಯೂ ಇಲ್ಲ: ಶಿಷ್ಟ ಅಧಿಕಾರಿಗಳಿಗೆ ಪ್ರಶಂಸೆಯಿಲ್ಲ, ಅದಕ್ಷ ಅಧಿಕಾರಿಗಳಿಗೆ ಶಿಕ್ಷೆಯಿಲ್ಲ ಎಂಬುದೇ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯ ಧ್ಯೇಯ ವಾಕ್ಯವಾಗಿದೆ ಎಂದರೆ ತಪ್ಪಾಗಲಾರದು. ದಕ್ಷತೆಯಿಂದ ಕೆಲಸ ಮಾಡುವ, ಪ್ರಾಮಾಣಿಕ ಅಧಿಕಾರಿಗಳನ್ನು ಗುರುತಿಸಿ ಸಭೆಯಲ್ಲಿ ಒಂದೆರಡು ಪ್ರಶಂಸನೀಯ ಮಾತುಗಳನ್ನಾಡುವ ಸಂಪ್ರದಾಯ ಕಳೆದ 5 ವರ್ಷಗಳಲ್ಲಿ ಕಾಣಲೇ ಇಲ್ಲ. ಈ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಶಾಸಕರಾಗಲೀ, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸಿಇಓ, ಡಿಸಿಯಾಗಲೀ ಮಾಡಲೇ ಇಲ್ಲ ಎಂದರೆ ತಪ್ಪಾಗಲಾರದು. ಹೋಗಲಿ ಪ್ರಶಂಸೆ ಬೇಡ. ಅದಕ್ಷ ಅಧಿಕಾರಿಗಳಿಗೆ ಶಿಕ್ಷೆಯಾದರೂ ಇದೆಯೇ ಎಂದರೆ ಅದೂ ಇಲ್ಲ. ಕೇವಲ ಎಚ್ಚರಿಕೆಗಷ್ಟೇ ಸೀಮಿತವಾಗುವ ರೀತಿಯಲ್ಲಿ ನಡೆದಿದೆ ಈ ಜಿಪಂ ಕೆಡಿಪಿ ಸಭೆ.
ಯಾಂತ್ರಿಕವಾಗಿ ನಡೆದಿದೆ ಸಭೆ: ಏನೋ ಸಭೆ ನಡೆಯಬೇಕು. ಈ ಮೂಲಕ ಕಾನೂನು ಪಾಲಿಸಬೇಕು ಎಂಬಂತಾಗಿದೆ ಈ ಕೆಡಿಪಿ ಸಭೆ. ಅಕ್ಷರಶಃ ಈ ಜಿಪಂ ಕೆಡಿಪಿ ಸಭೆ ಸಚಿವರ ನೇತೃತ್ವದಲ್ಲಿ ಯಾಂತ್ರಿಕವಾಗಿ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಅದಕ್ಷ, ಅಶಿಸ್ತಿನ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಈ ಕೆಡಿಪಿ ಸಭೆಗೆ ಘನತೆ ಬರುವುದೇ ಕನಿಷ್ಠ ಪ್ರಾಮಾಣಿಕ, ದಕ್ಷ ಅಧಿಕಾರಿಗಳನ್ನು ಗೌರವಿಸಿದಾಗ ಎಂಬ ಮಾತುಗಳು ಸಭೆ ಮುಗಿದಾಗಲೆಲ್ಲಾ ಕೇಳಿ ಬರುವುದು ಸಾಮಾನ್ಯವಾಗಿ ಹೋಗಿದೆ.
ಟಿಬಿಜೆ ಆದರ್ಶ ಮೆರೆಯುವರೇ?
ತುಮಕೂರು ಜಿಲ್ಲೆ ಕೂಡ ಬೇರೆ ಜಿಲ್ಲೆಗಳಂತೆ ಗಣಿಗಾರಿಕೆ, ಮರಳು ಲೂಟಿಗೆ ಕುಖ್ಯಾತಿಯಾಗಿದೆ. ಸದ್ಯ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆಯಾದರೂ, ಮರಳು ಲೂಟಿ ನಿರಂತರವಾಗಿ ನಡೆದಿದೆ. ಶಿರಾದ ಖ್ಯಾತ ಮೊದಲೂರು ಕೆರೆ ಜಿಲ್ಲೆಯ ಮರಳು ಲೂಟಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಕೊರಟಗೆರೆ ಕೊಡ ಹೊರತಲ್ಲ. ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿ ಮರಳು ಲೂಟಿ ನಿರಂತರವಾಗಿ ನಡದೇ ಇದೆ. ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೊದಲೂರು ಕೆರೆಯಲ್ಲಿ ನಡೆದಿರುವ ನಿರಂತರ ಮರಳು ಲೂಟಿಯನ್ನು ತಡೆಗಟ್ಟುವರೇ, ಈಗಾಗಲೇ ಮರಳು ಲೂಟಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸುವರೇ, ಜಿಲ್ಲೆಯ ಇತರೆ 10 ಮಂದಿ ಶಾಸಕರಿಗೆ ಮಾದರಿಯಾಗುವರೇ, ಈ ಕುರಿತು ಜೂ. 15 ರಂದು ಏರ್ಪಾಟಾಗಿರುವ ತಮ್ಮ ಪ್ರಥಮ ಜಿಪಂ ಕೆಡಿಪಿ ಸಭೆಯಲ್ಲಿ ಏನಾದರೂ ಒಳ್ಳೆಯದನ್ನು ಹೇಳುವರೇ ಎಂಬುದು ಜನತೆಯ ಕುತೂಹಲವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

