ತಾಲೂಕು ಆಡಳಿತದ ವಿರುದ್ಧ ಲೋಕಾಯುಕ್ತರ ಆಕ್ರೋಶ
ಕ.ಪ್ರ. ವಾರ್ತೆ ತಿಪಟೂರು ಜೂ.17
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ಲೋಕಾಯುಕ್ತರ ಭೇಟಿ ದಿನಾಂಕವನ್ನು 4-5ದಿನಕ್ಕೂ ಮೊದಲೆ ಮಾಧ್ಯಮಗಳಲ್ಲಿ ಪ್ರಚುರಪಡಿಸದೆ ನಿರ್ಲಕ್ಷಿಸಿರುವುದನ್ನು ಜಿಲ್ಲಾ ಲೋಕಾಯುಕ್ತ ಅಧಿಕಾರಿ ಗೌತಮ್ ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಸೋಮವಾರ ಮಧ್ಯಾಹ್ನ ನಡೆಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಲೋಕಾಯಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ದೂರು ಸಲ್ಲಿಸಲು ಬಾರದಿದ್ದಕ್ಕೆ ಬೇಸರಗೊಂಡರು. ಮುಂದಿನ ವೇಳೆ ಲೋಕಾಯುಕ್ತ ಭೇಟಿ ವೇಳೆ ಹೆಚ್ಚಿನ ಪ್ರಮಾಣದಲ್ಲಿ ದೂರುದಾರರು ಬಂದು ಅವರ ಕುಂದುಕೊರತೆಗಳನ್ನು ವಿವರಿಸಲು ಸಹಕಾರಿಯಾಗುವಂತೆ ಪತ್ರಿಕೆಗಳಲ್ಲಿ ವರದಿಯಾಗುವಂತೆ ತಾಲೂಕು ಆಡಳಿತ ಮಾಡಬೇಕು. ತಾಲೂಕು ಕಚೇರಿ ಬಳಿ ಮುಂದಿನ ಲೋಕಾಯುಕ್ತ ಭೇಟಿ ದಿನಾಂಕ ಇರುವಂತೆ ಬ್ಯಾನರ್ ಕಟ್ಟಬೇಕು. ದೂರುದಾರರಿಗೆ ನೆರವಾಗುವಂತೆ ದೊಡ್ಡ ಸಭಾಂಗಣವನ್ನು ಏರ್ಪಡಿಸಬೇಕೆಂದು ತಿಳಿಸಿದರು. ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸದೆ ಕೇವಲ ಬೆರಳೆಣಿಕೆಯಷ್ಟು ಅಧಿಕಾರಿಗಳ ಹಾಜರಾತಿಯನ್ನು ಕಂಡು ಲೋಕಾಯುಕ್ತರು ಅಸಮಧಾನ ವ್ಯಕ್ತಪಡಿಸಿ ಮುಂದಿನ ಬಾರಿ ಎಲ್ಲಾ ಅಧಿಕಾರಿಗಳು ಭಾಗವಹಿಸಬೇಕೆಂದು ಕಟ್ಟುನಿಟ್ಟಿನ ಆಜ್ಞೆ ಮಾಡಿದರು.
ಸರ್ಕಾರಿ ಭೂಮಿ ಒತ್ತುವರಿ: ಈ ಸಂದರ್ಭದಲ್ಲಿ ನೊಣವಿನಕೆಯ ನಿವಾಸಿ ನಿವೃತ್ತ ಕೋ.ಆಪರೇಟಿವ್ ಡೆವಲಪ್ಮೆಂಟ್ ಬ್ಯಾಂಕಿನ ಎ.ಎಸ್. ಮಲ್ಲಯ್ಯನವರು ನೀಡಿದ ದೂರನ್ನು ವಿಚಾರಿಸಿದ ಅವರು ನೊಣವಿನಕೆರೆ ವೈ.ಟಿ.ರಸ್ತೆಯಿಂದ ರಾಜ್ಕುಮಾರ್ ರಸ್ತೆವರೆಗೂ ರಸ್ತೆಯ ಎರಡೂ ಬದಿಯಲ್ಲಿ ಹಿಡುವಳಿದಾರರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದರ ಬಗ್ಗೆ ದೂರು ಸಲ್ಲಿಸಿದ್ದಾರೆಂದು ಎಫ್.ಡಿ.ಎ. ಅಧಿಕಾರಿ ಇ.ಓ.ಶೇಖರಪ್ಪನವರನ್ನು ವಿಚಾರಿಸಿದರು. ಈ ದೂರಿಗೆ ಉತ್ತರಿಸಿದ ಇಓ ಒತ್ತುವರಿ ಬಗ್ಗೆ ಪಿಡಿಓ ಅವರಿಗೆ ಇಲಾಖೆಗೆ ವರದಿ ಸಲ್ಲಿಸಲು ಹೇಳಿದ್ದು, ವರದಿ ನೋಡಿ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಆಡಳಿತ ವಿಫಲ: ತಾಲೂಕು ಕಚೇರಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಮಯಕ್ಕೆ ಸರಿಯಾಗಿ ನೀಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದ್ದು, ಅನೇಕ ಅರ್ಜಿಗಳು ತಿರಸ್ಕೃತಗೊಂಡಿವೆ. ಇದಕ್ಕೆ ಕಾರಣವೇನು ಹಾಗೂ ತಾಲೂಕಿನಲ್ಲಿ ಒಟ್ಟು ಎಷ್ಟು ಜನ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದರ ಬಗ್ಗೆ ವರದಿ ಸಲ್ಲಿಸಬೇಕೆಂದು ತಾಲೂಕು ಕಚೇರಿ ಅಧಿಕಾರಿಗಳಿಗೆ ತಿಳಿಸಿದರು.
ಹೊನ್ನವಳ್ಳಿ ಆಶ್ರಯ ಯೋಜನೆ ಅಡಿ ನಿರ್ಮಿಸುತ್ತಿರುವ 80 ಮನೆಗಳಿಗೆ ಸರ್ಕಾರದಿಂದ 40ಸಾವಿರ ಹಣ ನೀಡಲಾಗುತ್ತಿದೆ. ಆದರೆ ಇದು ಉಳ್ಳವರ ಪಾಲಾಗುತ್ತಿದ್ದು, ಬಡವರಿಗೆ ಆ ಹಣ ತಲುಪುವಂತೆ ಯೋಜನೆಯನ್ನು ಪರಿಶೀಲಿಸಿ ಎಂದು ಲೋಕಾಯುಕ್ತರು ಪಿಡಿಓ ಅಧಿಕಾರಿಗಳಿಗೆ ತಿಳಿಸಿದರು.
ವ್ಯಾಪಾರಕ್ಕೆ ತೊಂದರೆ: ನಗರದ ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ವಿಜಯ್ ಕಾಂಡಿಮೆಂಡ್ಸ್ನ ಮಾಲಿಕರಾದ ವಿಜಯ್ ಕುಮಾರ್ ನಮ್ಮ ಅಂಗಡಿ ಪಕ್ಕದಲ್ಲಿ ಲೋಕೇಶ್ ಎಂಬುವವರು ಹೂವಿನ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದು, ನಮ್ಮ ಅಂಗಡಿಯ ಗೋಡೆಗೆ ಬ್ಯಾನರ್ ಕಟ್ಟಿಕೊಂಡಿದ್ದಾರೆ. ಇದರಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಅಂಗಡಿ ತೆರೆವುಗೊಳಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಲೋಕಾಯುಕ್ತರಿಗೆ ದೂರು ನೀಡಿದರು. ಶೀಘ್ರವಾಗಿ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಕೆರೆಗೋಡಿ-ರಂಗಾಪುರ ಗ್ರಾಮದ ವಾಸಿ ಬಾಲಯ್ಯ ನನ್ನ ಜಮೀನಿನಲ್ಲಿ ಬೇರೆಯವರು ಅಕ್ರಮವಾಗಿ ಮನೆಕಟ್ಟಲು ಯತ್ನಿಸುತ್ತಿದ್ದಾರೆಂದು ಲೋಕಾಯುಕ್ತರಿಗೆ ತಿಳಿಸಿದಾಗ, ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಒಟ್ಟು 4 ಅರ್ಜಿಗಳು ಬಂದಿದ್ದವು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳವುದಾಗಿ ಲೋಕಾಯುಕ್ತರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

