ಮನೆ ಬಳಿ ಬೇಟೆಗಾಗಿ ಬಂದ ಚಿರತೆ ಬಂಧನ
ಮನೆಯವರ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಾಯ 12 ತಾಸು ಕಾರ್ಯಾಚರಣೆ ನಂತರ ಬಂಧಮುಕ್ತ
ಕ.ಪ್ರ.ವಾರ್ತೆ ಕುಣಿಗಲ್ ಜೂ.18
ಬೇಟೆಗಾಗಿ ಮನೆಯೊಂದರ ಬಳಿ ಬಂದ ಚಿರತೆ, ಸಾಕು ನಾಯಿಯ ಬೇಟೆಯಾಡಲು ಹೋಗಿ, ಮನೆಯವರ ಸಮಯ ಪ್ರಜ್ಞೆಯಿಂದ ಬಂಧಿಯಾಗಿ, ಅರಣ್ಯ ಇಲಾಖೆ ಸಿಬ್ಬಂದಿಯ ಸತತ 12 ತಾಸು ಕಾರ್ಯಾಚರಣೆ ನಂತರ ಬಂಧಮುಕ್ತಗೊಂಡ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿಯ ನಾಗನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ನಾಗನಹಳ್ಲಿ ಗ್ರಾಮದ ಮೃತ್ಯುಂಜಯಚಾರ್ ಹಾಗೂ ಭಾಸ್ಕರಾಚಾರ್ ಸಹೋದರರು ಒಂದೇ ಮನೆಯಲ್ಲಿ ವಾಸವಾಗಿದ್ದು, ಒಟ್ಟಾರೆ ಎರಡೂ ಮನೆಯಿಂದ ಏಳು ಮಂದಿ ಕುಟುಂಬದ ಸದಸ್ಯರಿದ್ದಾರೆ. ಮಂಗಳವಾರ ಬೆಳಗಿನ ಜಾವ ಒಂದು ಗಂಟೆ ಸಮಯದಲ್ಲಿ ಮನೆಯ ಸಾಕುನಾಯಿ ಜೋರಾಗಿ ಕೂಗಲು ಶುರು ಮಾಡಿತು. ವಿದ್ಯುತ್ ಕೈಕೊಟ್ಟಿದ್ದು, ಕತ್ತಲಲ್ಲಿ ಸಾಕುನಾಯಿಯ ಅರಚಿದ್ದರಿಂದ ಎಚ್ಚೆತ್ತ ಭಾಸ್ಕರಾಚಾರ್ ರಾತ್ರಿಯಲ್ಲಿ ಸಾಕು ನಾಯಿ ಕೂಗಿ ಕೇಳಿ ಹೊರಬಂದು ನೋಡಿದಾಗ, ಸಾಕುನಾಯಿ ಮನೆಯ ಮುಂದಿನ ಸ್ನಾನದ ಕೊಣೆಯಲ್ಲಿ ಚಿರತೆಯೊಂದರ ಜೊತೆ ಸೆಣೆಸಾಡುತ್ತಿದ್ದು, ಭಾಸ್ಕಾರಾಚಾರ್ ನಾಯಿಯನ್ನು ಬಿಡಿಸಲು ಮುಂದಾದಾಗ ಗಾಬರಿಗೊಂಡ ಚಿರತೆ ಭಾಸ್ಕಾರಾಚಾರ್ ಮನಯೊಳಗೆ ನುಗ್ಗಿತು.
ನಾಯಿಯ ಆಕ್ರಂದನ ಕೇಳಿದ ಮನೆಯ ಇತರೆ ಸದಸ್ಯರು ಎದ್ದು ಹೊರಬಂದು, ಚಿರತೆ ಒಳಪ್ರವೇಶಿಸಿದ್ದನ್ನು ಕಂಡು, ಮನೆಯ ಮುಂಬಾಗಿಲು ಹಾಕಿ ಚಿರತೆಯನ್ನು ಬಂಧಿಸಿದರು. ಪೊಲೀಸರಿಗೆ, ಅರಣ್ಯ ಇಲಾಖಾಧಿಕಾರಿಗಳಿಗೆ ವಿಷಯ ತಿಳಿಸಿ, ರಾತ್ರಿಯಿಡಿ ಮನೆ ಹೊರಗೆ ಮಲಗಿ ಕಾಲಕಳೆದರು.
ರಾತ್ರಿಯೇ ಪೊಲೀಸರು, ವಲಯ ಅರಣ್ಯಾಧಿಕಾರಿ ಚಿನ್ನಪ್ಪ ಸಿಬ್ಬಂದಿ ಮನೆಯ ಬಳಿ ತೆರಳಿದರು. ಮನೆಯೊಳಗೆ ಚಿರತೆ ಪ್ರವೇಶಿಸಿದ ಸುದ್ದಿ ತಿಳಿದ ಗ್ರಾಮಸ್ಥರು, ದೊಡ್ಡ ದೊಡ್ಡ ಕೋಲುಗಳನ್ನು ಹಿಡಿದು ಮನೆಯ ಸುತ್ತ ಜಮಾವಣೆಗೊಂಡು, ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಾಗ, ಮನೆಯ ಎಡಭಾಗದ ಕಿಟಕಿ ಕಡೆಯಿಂದ ಚಿರತೆ ಕಾಣಿಸಿಕೊಂಡಿತು. ಅದನ್ನು ಕೋಲಿನಿಂದ ತಿವಿದರು.
ಕುರಿ ಕೊಂದ ಚಿರತೆ: ಗಾಬರಿಗೊಂಡ ಚಿರತೆ ಮನೆಯ ಒಳಗೆ ನಿಲ್ಲಿಸಿದ್ದ ಬೈಕ್ಗಳ ಮೇಲೆ ಹಾರಿತು. ಬೈಕ್ ಚೆಲ್ಲಾಪಿಲ್ಲಿಯಾಯಿತು, ನಂತರ ಮನೆಯ ಹಿಂಭಾಗದ ಕೊಟ್ಟೆಗೆಯಲ್ಲಿದ್ದ ಎರಡುಕುರಿ, ಮೂರು ಮೇಕೆಯ ಮೇಲೆ ದಾಳಿ ನಡೆಸಿದ್ದು, ಕುರಿಯೊಂದನ್ನು ಕೊಂದು, ಸಮೀಪದ ಅಡುಗೆ ಕೋಣೆಯಲ್ಲಿನ ಮಂಚದ ಕೆಳಗೆ ಅವಿತುಕೊಂಡಿತು. ಬೆಳಗ್ಗೆ ತಾಪಂ ಸದಸ್ಯ ಹನುಮಾನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಭೇಟಿ ನೀಡಿ, ಇಲಾಖೆಯ ಹಿರಿಯಾಧಿಕಾರಿಗಳೊಂದಿಗೆ ಚರ್ಚಿಸಿ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಲು ಸೂಚನೆ ನೀಡಿದರು.
ಪರದಾಟ: ಚಿರತೆ ನೋಡಲು ಜನಜಾತ್ರೆಯೆ ಸೇರಿತು. ಜನರನ್ನು ನಿಯಂತ್ರಿಸಲು ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಪರದಾಡುವಂತಾಯಿತು. ಈ ಮಧ್ಯೆ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ವನ್ಯಜೀವಿ ಉದ್ನಾವನದ ಅರವಳಿಕೆ ತಜ್ಞ ಡಾ.ಚಟ್ಟಿಯಪ್ಪನ್ ಮತ್ತು ತಂಡ, ಪ್ರಭಾರ ಉಪ ಅರಣ್ಯ ಸಂರಕ್ಷಕ ದೇವರಾಜ್, ಸಿಪಿಐ ಧಮೇಂದ್ರ, ಪಿಎಸೈ ಗುರುಪ್ರಸಾದ ಆಗಮಿಸಿ, ಚಿರತೆ ಹಿಡಿಯಲು ಕಾರ್ಯತಂತ್ರ ರೂಪಿಸಿದರು. ಮನೆಯ ಸದಸ್ಯರಿಂದ ಮನೆಯೊಳಗಿನ ಮಾಹಿತಿ ಪಡೆದು, ಕೆಲವರನ್ನು ಮನೆಯ ಮೇಲೆ ಹತ್ತಿಸಿ ಪ್ರತಿಯೊಂದು ಕೊಣೆಯನ್ನು ದೊಡ್ಡದೊಡ್ಡ ಬೊಂಬಿನ ಸಹಾಯದಿಂದ ಜಾಲಾಡಿದ್ದು, ಅಂತಿಮವಾಗಿ ಮನೆಯ ಬಲಮೂಲೆಯಲ್ಲಿದ್ದ ಅಡುಗೆ ಮನೆ ಕೊಣೆಯ ಮಂಚದ ಕೆಳಗೆ ಚಿರತೆ ಕಾಣಿಸಿಕೊಂಡಿತು.
ಅಡುಗೆಮನೆಯ ಕೊಣೆಯ ಬಾಗಿಲು ಹಾಕಿ, ಬಾಗಿಲಿಗೆ ರಂದ್ರಕೊರೆದು, ರಂದ್ರದ ಮೂಲಕ ಅರವಳಿಕೆ ತಜ್ಞರು, ಏರ್ಗನ್ ಮೂಲಕ ಎರಡು ಬಾರಿ ಚುಚ್ಚುಮದ್ದ ನೀಡಿ, ಚಿರತೆಯನ್ನು ಮತ್ತು ಬರಿಸುವಲ್ಲಿ ಯಶಸ್ವಿಯಾದರು.
ನಂತರ ಅದನ್ನು ಹೊರತಂದು ಬೋನಿನಲ್ಲಿ ಬಂಧಿಸಿ, ಅಗತ್ಯ ಔಷಧೋಪಚಾರ ನೀಡಿ, ಮುತ್ತತ್ತಿ ಅರಣ್ಯಕ್ಕೆ ಕಳಿಸಿಕೊಡಲಾಗುವುದೆಂದು ವಲಯ ಅರಣ್ಯಾಧಿಕಾರಿ ಚಿನ್ನಪ್ಪ ತಿಳಿಸಿದರು. ರಾತ್ರಿ ಎರಡಕ್ಕೆ ಪ್ರಾರಂಭವಾದ ಕಾರ್ಯಾಚರಣೆ ಮಧ್ಯಾಹ್ನ ಎರಡು ಗಂಟೆಗೆ ಮುಕ್ತಾಯಗೊಂಡು ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆಯಿಂದ ಎಂಟು ವರ್ಷದ ಗಂಡು ಚಿರತೆ, ಬಂಧಮುಕ್ತಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

