ತುಮಕೂರು

ಮುಂಗಾರು ದುರ್ಬಲ: ರೈತರಿಗೆ ಭಾರಿ ಹೊಡೆತ

Published On :

ಕ.ಪ್ರ. ವಾರ್ತೆ  ತುಮಕೂರು  ಜೂ.20
ವಾರದ ಹಿಂದೆ ಬೊಬ್ಬಿರಿದ ಮಳೆ ತಣ್ಣಗಾಗಿದ್ದು ಮುಂಗಾರು ಜಿಲ್ಲೆಯಲ್ಲಿ ಅತ್ಯಂತ ದುರ್ಬಲವಾಗಿದೆ. ಹೀಗಾಗಿ ಈ ಬಾರಿ ಕೃಷಿಗೆ ದೊಡ್ಡ ಹೊಡೆತವೇ ಬಿದ್ದಂತಾಗಿದೆ.
ಈಗಾಗಲೇ ರೈತರು ಭೂಮಿಯನ್ನು ಹಸನು ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದರೆ ಮಳೆರಾಯನ ಸುದ್ದಿಯೇ ಇಲ್ಲದಂತಾಗಿದೆ. ಹೀಗಾಗಿ ರೈತರು ಈ ಬಾರಿ ತಲೆ ಮೇಲೆ ಕೈ ಹೊತ್ತುಕೊಂಡು ಕೂರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈವರೆಗೆ 47.7 ಮಿ.ಮೀ ಮಳೆಯಾಗಿದ್ದು, ವಾಡಿಕೆ ಮಳೆಗಿಂತ ಪ್ರತಿಶತ ಹೆಚ್ಚಾದರೂ ಗಣನೀಯ ಪ್ರಮಾಣದಲ್ಲಿ ಮಳೆಬಿದ್ದಿಲ್ಲ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 26.9 ಮಿ.ಮೀ, ಗುಬ್ಬಿ 43.3 ಮಿ.ಮೀ., ಕೊರಟಗೆರೆಯಲ್ಲಿ 54.6 ಮಿ.ಮೀ, ಕುಣಿಗಲ್‌ನಲ್ಲಿ 59.2 ಮಿ.ಮೀ., ಮಧುಗಿರಿಯಲ್ಲಿ 43.6 ಮಿ.ಮೀ., ಪಾವಗಡದಲ್ಲಿ 34.5 ಮಿ.ಮೀ.,  ಶಿರಾದಲ್ಲಿ 66.9 ಮಿ.ಮೀ.,  ತಿಪಟೂರಿನಲ್ಲಿ 45.6 ಮಿ.ಮೀ., ತುಮಕೂರಿನಲ್ಲಿ 65.9 ಮಿ.ಮೀ ಹಾಗೂ ತುರುವೇಕೆರೆಯಲ್ಲಿ 36 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ. ಕಳೆದ ಬಾರಿ ಈ ಅವಧಿಗೆ ಹೋಲಿಸಿದರೆ ಶೇ.36 ಮಿ.ಮೀ ಅಧಿಕ ಮಳೆಯಾಗಿದೆ.
ಮುಂಗಾರು ಹಂಗಾಮಿನ ಪ್ರಾರಂಭದ ಜೂನ್ ಮೊದಲ ವಾರದಲ್ಲಿ ಉತ್ತಮ ಮಳೆಯಿಂದಾಗಿ ಬಿರುಸಿನ ಬಿತ್ತನೆ ಕಾರ್ಯ  ಕೈಗೊಂಡ  ಜಿಲ್ಲೆಯ ರೈತರು 4,79,950 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿಯ ಪೈಕಿ ಈವರೆಗೆ 33.618 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಳಿಸಿದ್ದಾರೆ. ಮಳೆಯಾಧರಿತ ಪ್ರದೇಶದಲ್ಲಿ 32,243 ಹೆಕ್ಟೇರ್ ಬಿತ್ತನೆಯಾಗಿದ್ದು, ನೀರಾವರಿ ಆಶ್ರಿತ ಪ್ರದೇಶದಲ್ಲಿ 1375 ಹೆಕ್ಟೇರ್‌ನಷ್ಟು ಬಿತ್ತನೆ ಮಾಡಲಾಗಿದೆ. ಜಿಲ್ಲೆಯ ಕೊರಟಗೆರೆಯಲ್ಲಿ ಕೃಷಿ ಬಿತ್ತನೆಯೇ ಪ್ರಾಂಭವಾಗದಿರುವುದು ಕೃಷಿ ಇಲಾಖೆ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದ್ದು, ಪಾವಗಡದಲ್ಲಿ  ಜಿಲ್ಲೆಗೆ ಅತೀ ಹೆಚ್ಚು 13443 ಹೆಕ್ಟೇರ್‌ನಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಉಳಿದಂತೆ ಚಿಕ್ಕನಾಯಕನಹಳ್ಳಿಯಲ್ಲಿ 7732 ಹೆಕ್ಟೇರ್, ಗುಬ್ಬಿ 1490 ಹೆಕ್ಟೇರ್, ಕುಣಿಗಲ್‌ನಲ್ಲಿ 3525 ಹೆಕ್ಟೇರ್, ಮಧುಗಿರಿ 260 ಹೆಕ್ಟೇರ್, ಪಾವಗಡ 13443 ಹೆಕ್ಟೇರ್, ಶಿರಾ 1502 ಹೆಕ್ಟೇರ್, ತಿಪಟೂರು 3016 ಹೆಕ್ಟೇರ್, ತುಮಕೂರು 488 ಹೆಕ್ಟೇರ್ ಹಾಗೂ ತುರುವೇಕೆರೆಯಲ್ಲಿ 2162 ಹೆಕ್ಟೇರ್‌ನಷ್ಟು ಬಿತ್ತನೆ ಪ್ರಮಾಣ ದಾಖಲಾಗಿದೆ.
ಬಿತ್ತನೆ ಬೀಜ ದಾಸ್ತಾನು, ವಿತರಣೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ವಿತರಿಸಲು ಕೃಷಿ ಇಲಾಖೆ 31903.29 ಕ್ವಿಂಟಾಲ್‌ನಷ್ಟು  ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದ್ದು, ಈವರೆಗೆ 13999.30 ಕ್ವಿಂಟಾಲ್‌ನಷ್ಟು ವಿತರಣೆ ಮಾಡಿದೆ.
ದಾಸ್ತಾನು ಮಾಡಿ ವಿತರಿಸಿರುವ ಬಿತ್ತನೆ ಬೀಜಗಳ ಪೈಕಿ ಹೆಸರು 379.50 ಕ್ವಿಂಟಾಲ್‌ನಷ್ಟು ದಾಸ್ತಾನಿದ್ದು, 301.40 ಕ್ವಿಂಟಾಲ್ ವಿತರಣೆಯಾಗಿದೆ. ಉದ್ದು 51.20 ಕ್ವಿಂ. ದಾಸ್ತಾನಿದ್ದು, 19.25 ಕ್ವಿಂ ವಿತರಣೆಯಾಗಿದೆ. ಅಲಸಂದೆ 93.40 ಕ್ವಿಂಟಾಲ್ ದಾಸ್ತಾನಿದ್ದು, 36.90 ಕ್ವಿಂ.ನಷ್ಟು ವಿತರಣೆಯಾಗಿದೆ. ತೊಗರಿ 479.55 ಕ್ವಿಂ. ದಾಸ್ತಾನಿದ್ದು, 192.27 ಕ್ವಿಂ.ನಷ್ಟು ವಿತರಣೆಯಾಗಿದೆ. ಜಿಲ್ಲೆಯ 50 ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ  ಬಿತ್ತನೆ ಬೀಜವನ್ನು ವಿತರಿಸುತ್ತಿದ್ದು, ಅಗತ್ಯ ಪ್ರಮಾಣದ ರಸಗೊಬ್ಬರವನ್ನು ದಾಸ್ತಾನು ಮಾಡಿ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
ಜಿಲ್ಲೆಯಲ್ಲಿ ಜೂನ್ ಎರಡನೇ ವಾರದ ಅಂತ್ಯದಿಂದ ಮಳೆ ಕ್ಷೀಣಿಸಿದ್ದು, ರೈತರು ಮತ್ತು ಜನಸಾಮಾನ್ಯರಲ್ಲಿ ಆತಂಕ ಉಂಟು ಮಾಡಿದೆ. ಈಗಾಗಲೇ ಅಕ್ಕಿ, ಬೇಳೆಕಾಳುಗಳು ತರಕಾರಿಗಳು ಬೆಲೆ ಕೆ.ಜಿಗೆ 50 ರು. ದಾಟಿದ್ದು, ಮಳೆಯ ಕಣ್ಣಾಮುಚ್ಚಾಲೆ ಇದೇ ರೀತಿ ಮುಂದುವರಿದರೆ ದೈನಂದಿನ ಬದುಕು ನಡೆಸುವುದೇ ಅಸಾಧ್ಯವಾಗಲಿದೆ. ಮಳೆ ಬಾರದೇ ಹೋದರೆ ಕೃಷಿ ಇಳುವರಿ ಪೂರ್ಣ ಕುಸಿದು ರೈತರು ಪಟ್ಟಣ, ನಗರ ಪ್ರದೇಶಗಳಿಗೆ ವಲಸೆ ಹೋಗಿ ದುಡಿಯುವ ಸ್ಥಿತಿ ನಿರ್ಮಾಣವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.