ಆಧಾರ್ ಅಧ್ವಾನ ಒಪ್ಪಿಕೊಂಡ ಶಾಲಿನಿ ರಜನೀಶ್
ಕ.ಪ್ರ. ವಾರ್ತೆ ತುಮಕೂರು ಜೂ.22
ತುಮಕೂರು ಜಿಲ್ಲೆಯಲ್ಲಿ ಆಧಾರ್ ಕೇಂದ್ರಗಳನ್ನು ಜನಸಂಖ್ಯೆಗನುಗುಣವಾಗಿ ತೆರೆಯಲಾಗಿಲ್ಲ. ಇದಕ್ಕೆ ಸರ್ಕಾರ ನೇರ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಒಪ್ಪಿಕೊಂಡರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಸಕಾಲ ಯೋಜನೆ ಪಕ್ಷಿ ನೋಟ ಕುರಿತ ಸುದ್ದಿಗೋಷ್ಠಿಯಲ್ಲಿ ಆಧಾರ್ ಕುರಿತ ಪ್ರಶ್ನೆಯೊಂದಕ್ಕೆ ಮೇಲಿನಂತೆ ಉತ್ತರಿಸಿದರು.
ನಿಗದಿತ ಅವಧಿಯೊಳಗೆ ಜಿಲ್ಲೆಯ ಎಲ್ಲ ಎಲ್ಪಿಜಿ ಗ್ರಾಹಕರಿಗೆ ಆಧಾರ್ ನಂ. ದೊರಕಿಸಿಕೊಡುವ ಜವಾಬ್ದಾರಿ ಸರ್ಕಾರದ್ದು. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಒಟ್ಟು 90 ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆದು ಸಹಕರಿಸಲಾಗುವುದು. ಜನತೆ ಆತಂಕ ಪಡುವುದು ಬೇಡ ಎಂದು ತಿಳಿಸಿದರು. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಅವರಿಂದ ಮಾಹಿತಿ ಪಡೆದ ಶಾಲಿನಿ ರಜನೀಶ್, ಹೆಚ್ಚುವರಿ ಆಧಾರ್ ಕೇಂದ್ರಗಳನ್ನು ತೆರೆಯುವುದರ ಮೂಲಕ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಮುಂದಾಗಲಿದೆ ಎಂದು ಭರವಸೆ ನೀಡಿದರು.
ಸಾಪ್ಟ್ವೇರ್ ಸಮಸ್ಯೆ: ಆಧಾರ್ ನೋಂದಣಿ ಮಾಡಿಸಿದ್ದರೂ ಇನಿಶಿಯಲ್ ಸಮಸ್ಯೆಯಿಂದಾಗಿ ಬ್ಯಾಂಕ್ಗಳೊಂದಿಗೆ ಸೀಡಿಂಗ್ ಮಾಡಲಾಗುತ್ತಿಲ್ಲ. ಬ್ಯಾಂಕ್ ಖಾತೆಯಲ್ಲಿ ಇನಿಷಿಯಲ್ ಮೊದಲಿಗೆ ಇದ್ದು, ಆಧಾರ್ ನೋಂದಣಿಯಲ್ಲಿ ಕೊನೆಯಲ್ಲಿದ್ದರೆ ಸೀಡಿಂಗ್ ಆಗುತ್ತಿಲ್ಲ. ಹೀಗಾಗಿ ಅಕೌಂಟ್ ನಂಬರ್ಗೆ, ಆಧಾರ್ ನಂಬರ್ ಸರಿ ಹೊಂದುತ್ತಿಲ್ಲ. ಇದಕ್ಕೆ ಸಾಪ್ಟ್ವೇರ್ ಸಮಸ್ಯೆ ಕಾರಣ. ಇದನ್ನು ಕೂಡ ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
75 ಸಾವಿರಕ್ಕಷ್ಟೇ ಎಲ್ಪಿಜಿ: ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1,66,000 ಮಂದಿ ಆಧಾರ್ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದಾರೆ. ಅವರಲ್ಲಿ 75 ಸಾವಿರ ಮಂದಿ ಬ್ಯಾಂಕ್ಗಳೊಂದಿಗೆ ಸೀಡಿಂಗ್ ಮಾಡಿಸಿದ್ದಾರೆ. ಮಿಕ್ಕವರನ್ನು ನೋಂದಣಿ ಮಾಡಿಸಲು ಯತ್ನಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
38 ಸಾವಿರ ಮಂದಿಗೆ ಆಧಾರ್ ಬಾಕಿ: ಜಿಲ್ಲೆಯಲ್ಲಿ ಸುಮಾರು 38 ಸಾವಿರ ಮಂದಿ ಎಲ್ಪಿಜಿ ಗ್ರಾಹಕರಿಗೆ ಆಧಾರ್ ನಂ. ನೀಡಬೇಕಿದೆ. ಆದರೆ 10 ತಾಲೂಕುಗಳಲ್ಲಿ 20 ಆಧಾರ್ ಕೇಂದ್ರಗಳನ್ನು ತೆರೆಯಲಾಗಿದ್ದು, ಜನತೆ ಬೆಳಗಿನಿಂದ ಸಂಜೆ ವರೆಗೆ ತಮ್ಮ-ತಮ್ಮ ಕೆಲಸ ಬಿಟ್ಟು ಕ್ಯೂ ನಿಲ್ಲುತ್ತಿದ್ದಾರೆ. ಆದರೂ ಆಧಾರ್ ನೋಂದಣಿಯಾಗುತ್ತಿಲ್ಲ. ಎಲ್ಪಿಜಿ ನೇರ ನಗದು ವರ್ಗಾವಣೆಗೆ ಇನ್ನೆರಡು ತಿಂಗಳು, ಒಂದು ವಾರ ಮಾತ್ರ ಬಾಕಿಯಿದೆ. ನಿಗದಿತ ಅವಧಿಯೊಳಗೆ ಜಿಲ್ಲೆಯ ಎಲ್ಲ ಎಲ್ಪಿಜಿ ಗ್ರಾಹಕರಿಗೆ ಆಧಾರ್ ನಂ. ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದೆ. ಇದೇ ತಿಂಗಳ 1 ರಂದು ತುಮಕೂರಿನಲ್ಲಿ ಎಲ್ಪಿಜಿ ಗ್ರಾಹಕರಿಗೆ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಚಾಲನೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಸಕಾಲಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

