ಅಪಘಾತವಾದಾಗ ತಕ್ಷಣ ನೀರು ಕುಡಿಸಬೇಡಿ
ಕ.ಪ್ರ.ವಾರ್ತೆ ತುಮಕೂರು ಜೂ. 23
ಅಪಘಾತವಾದ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಪ್ರಜ್ಞಾಶೂನ್ಯನಾಗಿದ್ದರೆ ಪೊಲೀಸರಾಗಲೀ, ಸಾರ್ವಜನಿಕರಾಗಲೀ ತಕ್ಷಣ ಗಾಯಾಳು ವ್ಯಕ್ತಿಗೆ ನೀರು ಕುಡಿಸದೇ, ಆತನನ್ನು ಎಚ್ಚರಿಸಿ ಪ್ರಾಥಮಿಕ ಚಿಕಿತ್ಸೆ ನೀಡಬೇಕು ಎಂದು ಬಿಜೆಎಸ್ ಗ್ಲೋಬಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ.ವಿ. ಗುರುಪ್ರಸಾದ್ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಬೆಂಗಳೂರಿನ ಬಿಜೆಎಸ್ ಗ್ಲೋಬಲ್ ಆಸ್ಪತ್ರೆ ಸಹಯೋಗದಲ್ಲಿ ತುಮಕೂರು ಪೊಲೀಸರಿಗಾಗಿ ಆಯೋಜಿಸಿದ್ದ ಮೂಲ ಜೀವ ಬೆಂಬಲ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಯಾವುದೇ ವ್ಯಕ್ತಿ ಅಪಘಾತ, ಹೃದಯಘಾತ, ಲಕ್ವ ಹೊಡೆದು ಪ್ರಜ್ಞಾಹೀನರಾದ ಸಂದರ್ಭದಲ್ಲಿ, ಅಂತಹವರನ್ನು ಮೇಲ್ಮುಖನಾಗಿ ಸಮದಟ್ಟಾಗಿ ಮಲಗಿಸಿ ಕುತ್ತಿಗೆ ನಾಡಿ ಪರೀಕ್ಷಿಸಿ, ಎದೆ ಒತ್ತಿ, ಮೂಗು ಮುಚ್ಚಿ ಬಾಯಿಗೆ ಬಾಯಿಟ್ಟು ಉಸಿರು ತುಂಬುವ ಮೂಲಕ ಸಾವಿನ ಅಂಚಿನಿಂದ ಪಾರು ಮಾಡಬಹುದಾಗಿದೆ. ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿದ ತಕ್ಷಣ ಅಂಬುಲೆನ್ಸ್ನಲ್ಲಿ ಕರೆದೊಯ್ದು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿದರೆ ಗಾಯಾಳುಗಳು ಬೇಗ ಗುಣಮುಖರಾಗಲು ಸಾಧ್ಯವಾಗುತ್ತದೆ. ಪ್ರಥಮ ಚಿಕಿತ್ಸೆ ಆಸ್ಪತ್ರೆಯಲ್ಲಿನ ಶುಚಿತ್ವ, ಸಕಾಲಿಕ ಚಿಕಿತ್ಸೆಗಳು ಸಾವಿನ ದವಡೆಯಲ್ಲಿರುವರನ್ನು ಪಾರು ಮಾಡುವ ಮಾರ್ಗೋಪಾಯಗಳಾಗಿವೆ ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಅಗತ್ಯವಿದೆ: ಅಪಘಾತದಲ್ಲಿ ತಲೆಗೆ ಪೆಟ್ಟು, ತೀವ್ರ ರಕ್ತಸ್ತಾವ, ಉಸಿರಾಟದ ತೊಂದರೆಯಾದರೆ ಮೊದಲು ಅದನ್ನು ತಹಬದಿಗೆ ತರಬೇಕು ಎಂದು ಸಲಹೆ ನೀಡಿದ ಅವರು ಸಾರ್ವಜನಿಕರು, ಪೊಲೀಸರು ವೈದ್ಯಕೀಯ ಉಪಚಾರದ ಪ್ರಾಥಮಿಕ ಚಿಕಿತ್ಸೆಯ ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಎಸ್ಪಿ ರಮನ್ ಗುಪ್ತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ವೈದ್ಯಕೀಯ ಪ್ರಥಮ ಚಿಕಿತ್ಸೆಯ ಜ್ಞಾನ ಬಹುತೇಕರಲ್ಲಿ ಇಲ್ಲವಾದ ಕಾರಣ ಪೊಲೀಸರು ಘಟನಾ ಸ್ಥಳಕ್ಕೆ ತೆರಳುವವರೆಗೆ ಪ್ರತ್ಯಕ್ಷದರ್ಶಿಗಳು ಸಾರ್ವಜನಿಕರು ಗಾಯಾಳುಗಳನ್ನು ಮುಟ್ಟಿ ಉಪಚರಿಸಲು ಹಿಂಜರಿಯುತ್ತಾರೆ. ಪೊಲೀಸರಿಗೂ ಸಹ ಸೂಕ್ತ ಪ್ರಥಮ ಚಿಕಿತ್ಸೆಯ ಜ್ಞಾನ ಇರುವುದಿಲ್ಲ. ಇದರಿಂದ ಸಾವು ನೋವುಗಳ ಸಂಭವಿಸುವ ಅಪಾಯವಿರುತ್ತದೆ. ಆ ಕಾರಣ ಪೊಲೀಸರಿಗೆ ಪ್ರಾಥಮಿಕ ಚಿಕಿತ್ಸೆಯ ಅರಿವು ಮೂಡಿಸಲು ಬೆಂಗಳೂರಿನ ಬಿಜೆಎಸ್ ಗ್ಲೋಬಲ್ ಆಸ್ಪತ್ರೆಯವರು ಉಚಿತವಾಗಿ ಮುಂದೆ ಬಂದಿದ್ದಾರೆ. ಈ ಶಿಬಿರ ಯಶಸ್ವಿಯಾಗುವ ವಿಶ್ವಾಸವಿದ್ದು, ಮುಂದಿನ ದಿನಗಳಲ್ಲಿ ಆಸ್ಪತ್ರೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸರಿಗೂ ವೈದ್ಯಕೀಯ ಅರಿವು ಮೂಡಿಸಲು ಚಿಂತಿಸಿವೆ ಎಂದರು.
ಪೊಲೀಸರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿನದಾಗಿದೆ ಎಂದ ಎಸ್ಪಿ ಅವರು ಕ್ಲಿಷ್ಟಕರ ಪರಿಸ್ಥಿತಿ ಪೊಲೀಸರಿಗೆ ಯಾವಾಗ ತಲೆ ದೋರುತ್ತದೆ ಎಂದು ಹೇಳಲಾಗದು. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಪ್ರಾಣ ಉಳಿಸಲು ಅಗತ್ಯ ತರಬೇತಿಯನ್ನು ಪೊಲೀಸರು ಪಡೆಯುವುದು ಅವಶ್ಯವಿದೆಯೆಂದರು. ಅಡಿಷನಲ್ ಎಸ್ಪಿ ಹನುಮಂತರಾಯ, ಡಿಎಆರ್ ಡಿವೈಎಸ್ಪಿ ತಿಮ್ಮಣ್ಣನವರ್, ಬಿಜಿಎಸ್ ಆಸ್ಪತ್ರೆಯ ಎಜೆಎಂ ಸಂಧ್ಯಾಪ್ರಸಾದ್, ಡಾ.ಭಾಸ್ಕರ್, ಡಾ.ರವಿ ಮತ್ತಿತರ ಗಣ್ಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

