ತುಮಕೂರು

ತುಮಕೂರು: ಕಾಯಂ ಚೀಟಿಗೆ ಮಾತ್ರ ಪಡಿತರ

Published On :

ತುಮಕೂರು: ಜಿಲ್ಲಾದ್ಯಂತ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಡಿ ನೆಮ್ಮದಿ ಕೇಂದ್ರಗಳ ಮೂಲಕ ವಿತರಿಸಲಾದ ತಾತ್ಕಾಲಿಕ ಪಡಿತರ ಚೀಟಿಗಳನ್ನು ಪಡಿತರ ಚೀಟಿದಾರರಿಂದ ಗ್ರಾಮಾಂತರ ಪ್ರದೇಶದಲ್ಲಿ ಆಸ್ತಿ ಸಂಖ್ಯೆಗಳ ವಿವರಗಳನ್ನು ಹಾಗೂ ನಗರ, ಪಟ್ಟಣ ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿ ಬಿಲ್ಲುಗಳನ್ನು ಸ್ವೀಕರಿಸಿ ಸದರಿ ತಾತ್ಕಾಲಿಕ ಪಡಿತರ ಚೀಟಿಗಳನ್ನು ಅರ್ಹಗೊಳಿಸಲಾಗಿದೆ. ತಾತ್ಕಾಲಿಕ ಪಡಿತರ ಚೀಟಿಗಳನ್ನು ಸ್ವೀಕರಿಸಿ ಕಾಯಂ ಪಡಿತರ ಚೀಟಿಗಳನ್ನು ಈಗಾಗಲೇ ವಿತರಿಸಲಾಗಿರುತ್ತದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಆದರೆ, ಇನ್ನೂ ಅನೇಕ ತಾತ್ಕಾಲಿಕ ಪಡಿತರ ಚೀಟಿದಾರರು ಕಾಯಂ ಪಡಿತರ ಚೀಟಿಗಳನ್ನು ಪಡೆದಿರುವುದಿಲ್ಲ. ಆದ್ದರಿಂದ ಸರ್ಕಾರವು ಇಂತಹ ತಾತ್ಕಾಲಿಕ ಪಡಿತರ ಚೀಟಿದಾರರಿಗೆ ಜುಲೈ ತಿಂಗಳಿಂದ ಪಡಿತರ ವಸ್ತುಗಳನ್ನು  ಹಂಚಿಕೆಯನ್ನು ತಡೆಹಿಡಿದು, ಕಾಯಂ ಪಡಿತರ ಚೀಟಿಗಳಿಗೆ ಮಾತ್ರ ಪಡಿತರ ವಸ್ತುಗಳನ್ನು ನೀಡಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ತಾತ್ಕಾಲಿಕ ಪಡಿತರ ಚೀಟಿದಾರರು ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ನಗರ, ಪಟ್ಟಣ ಪ್ರದೇಶದಲ್ಲಿ ತಾಲೂಕು ಕಚೇರಿಗಳಲ್ಲಿ ಕಾಯಂ ಪಡಿತರ ಚೀಟಿಗಳನ್ನು ಬಯೋವುಟ್ರಿಕ್ಸ್ ನೀಡಿ ಜೂ.30 ರೊಳಗೆ ಪಡೆಯತಕ್ಕದ್ದು.  ತಾತ್ಕಾಲಿಕ ಪಡಿತರ ಚೀಟಿಯಿಂದ ಪರಿವರ್ತನೆಯಾದ ಕಾಯಂ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕೀಟನಾಶಕವನ್ನೇ ಮದ್ಯವೆಂದು ಸೇವಿಸಿ ಮಹಿಳೆ ಸಾವು
ಕುಣಿಗಲ್:
ಮಹಿಳೆಯೊಬ್ಬಳು ಮದ್ಯದ ಶೀಶೆಯಲ್ಲಿದ್ದ ಕೀಟನಾಶಕವನ್ನೇ ಮದ್ಯ ಎಂದು ಸೇವಿಸಿ ಮೃತಪಟ್ಟಿರುವ ಘಟನೆ ತಾಲೂಕಿನ ಗುನ್ನಾಗರೆ ಗ್ರಾಮದಲ್ಲಿ ನಡೆದಿದೆ. ದೊಡ್ಡಆಲದಮರದ ಹಾಲಿ ಗುನ್ನಾಗರೆಯ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರಾಜು ಎಂಬವರ ಪತ್ನಿ ಗಿರಿಜಾ (35) ಮೃತಪಟ್ಟವರು. ರಾಜು ಹಾಗೂ ಗಿರಿಜಾ ಗುನ್ನಾಗರೆ ಗ್ರಾಮದಲ್ಲಿ ದೇವರಾಜ ಎಂಬವರಿಗೆ ಸೇರಿದ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಗಿರಿಜಾ ಮದ್ಯವ್ಯಸನಿಯಾಗಿದ್ದರು. ತೋಟದಲ್ಲಿನ ಕೆಲ ಬೆಳೆಗಳಿಗೆ ಸಿಂಪಡಿಸಲೆಂದು ಮದ್ಯದ ಬಾಟಲಿಯಲ್ಲಿ ಕೀಟನಾಶಕ ತಂದಿಡಲಾಗಿತ್ತು. ಶುಕ್ರವಾರ ಮಧ್ಯಾಹ್ನ ಬಾಟಲಿಯಲ್ಲಿದ್ದ ಕೀಟನಾಶಕವನ್ನೇ ಮದ್ಯವೆಂದು ತಪ್ಪಾಗಿ ಭಾವಿಸಿ ಗಿರಿಜಾ ಸೇವಿಸಿ ಪರದಾಡುತ್ತಿದ್ದರು. ಈ ವಿಷಯ ತಿಳಿದ ಪತಿ ಆಕೆಯನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆ ತರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಕುಣಿಗಲ್ ಪೊಲೀಸರು ಪತಿ ರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.

ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ
ತಿಪಟೂರು:
ಗ್ರಾಮೀಣ ಭಾಗದಲ್ಲಿ ಸಾರಿಗೆಗೆ ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ರಸ್ತೆಗಳನ್ನು ಮಾಡಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಬಾರ್ಡ್ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮಗಳ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಬಾರ್ಡ್ ಯೋಜನೆಯಡಿ ರಸ್ತೆ ಕಾಮಗಾರಿ ಅಭಿವೃದ್ಧಿ 85 ಲಕ್ಷ ಬಿಡುಗಡೆ ಮಾಡಿದೆ. ನಿಗದಿತ ಅವಧಿಯೊಳಗೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಗುತ್ತಿಗೆದಾರರು ಸಹಕರಿಸುವಂತೆ ತಿಳಿಸಿದರು. ತಾಲೂಕಿನ ರಾಮೇನಹಳ್ಳಿ, ನ್ಯಾಕೇನಹಳ್ಳಿ, ಬಳ್ಳೆಕಟ್ಟೆ, ಉಪ್ಪಾರಹಳ್ಳಿ, ಅರಳಗುಪ್ಪೆ, ಕೊಟ್ಟಿಗೆಹಳ್ಳಿ, ಹಿಂಡಿಸ್ಕೆರೆ,ಅರಳಗುಪ್ಪೆ, ಶಿಡ್ಲೆಹಳ್ಳಿ ಹಾಗೂ ಮಲ್ಲಿಪಟ್ಟಣಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಎಪಿಎಂಸಿ ನಿರ್ದೇಶಕ ಸುರೇಶ್, ಎಂಜಿನಿಯರ್‌ಗಳಾದ ಚನ್ನಿಗರಾಯಪ್ಪ, ದೊಡ್ಡಯ್ಯ, ನಾಗಭೂಷಣಾರಾಧ್ಯ, ಜಯದೀಪ್, ಮುಖಂಡರಾದ ಎಂ.ಟಿ. ಪ್ರಸಾದ್, ಮರುಳಯ್ಯ ಹಾಜರಿದ್ದರು.

ಸಂಪತಕುಮಾರ್‌ಗೆ ಕೆಂಪೇಗೌಡ ಪ್ರಶಸ್ತಿ
ತಿಪಟೂರು: 
ತಿಪಟೂರು ನಗರಸಭೆ ನೌಕರ ಟಿ.ಎಸ್. ಸಂಪತ್‌ಕುಮಾರ್ ಅವರ ಸಮಾಜ ಸೇವೆ ಗುರುತಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜನಸೇವಾ ಸಂಸ್ಥೆಯು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ.

ಇಂದು ಆರೋಗ್ಯ ತಪಾಸಣಾ ಶಿಬಿರ
ತಿಪಟೂರು:
ನಗರದ ಸಂಜೀವಿನಿ ಪಾಲಿ ಕ್ಲಿನಿಕ್ ಆಸ್ಪತ್ರೆ ಆವರಣದಲ್ಲಿ ತುಮಕೂರಿನ ಆರ್.ಪಿ. ಚೆಸ್ಟ್ ಕ್ಲಿನಿಕ್ ಅಸ್ತಮಾ ಮತ್ತು ಎದೆರೋಗಗಳ ಆಸ್ಪತ್ರೆ ವತಿಯಿಂದ ಉಚಿತ ಅಸ್ತಮಾ ಹಾಗೂ ಎದೆ ರೋಗಗಳಿಗೆ ಆರೋಗ್ಯ ತಪಾಸಣಾ ಚಿಕಿತ್ಸಾ ಶಿಬಿರವನ್ನು ಜೂ.29ರಂದು ಬೆಳಿಗ್ಗೆ 10.30ರಿಂದ 2.30 ರವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಅಸ್ತಮಾ, ನ್ಯುಮೋನಿಯಾ, ಟಿಬಿ, ಎದೆಯ ಕ್ಯಾನ್ಸರ್ ಮತ್ತಿತರ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಉಚಿತ ತಪಾಸಣೆ ನಡೆಸಲಾಗುವುದು. ಶಿಬಿರದಲ್ಲಿ ತಜ್ಞವೈದ್ಯರಾದ ಡಾ.ರವಿಕುಮಾರ್ ಭಾಗವಹಿಸುವರು. ಸಾರ್ವಜನಿಕರು ಭಾಗವಹಿಸಿ ಶಿಬಿರದ ಸಲಹೆ, ಚಿಕಿತ್ಸೆ, ಔಷಧಿ ಸೌಲಭ್ಯ ಪಡೆಯಬೇಕೆಂದು ತಿಳಿಸಲಾಗಿದೆ.

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ತಿಪಟೂರು: 
ತಾಲೂಕಿನ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ 2012-13ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವ ವೀರಶೈವ ಲಿಂಗಾಯಿತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಘವು ತಿಳಿಸಿದೆ. ಅರ್ಹ ವಿದ್ಯಾರ್ಥಿಗಳು ಜೂ.30 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಪ್ರಸನ್ನ ಕುಮಾರ್, ಭೌತಶಾಸ್ತ್ರ ಉಪನ್ಯಾಸಕ, ಸರ್ಕಾರಿ ಬಾಲಕಿಯರ ಪಪೂ ಕಾಲೇಜು, ಮೊ.9482679699 ಇಲ್ಲಿಗೆ ಸಂಪರ್ಕಿಸಿ.

ಆಭರಣ ಅಪಹರಣ
ತಿಪಟೂರು: 
ತೋಟದ ಮನೆಗೆ ನುಗ್ಗಿ ಇಬ್ಬರು ಕಳ್ಳರು ಒಡವೆಗಳಿಗೆ ಪಾಲಿಶ್ ಹಾಕುವುದಾಗಿ ನಂಬಿಸಿ ಚಿನ್ನಾಭರಣ ದೋಚಿ ಬೈಕಿನಲ್ಲಿ ಪರಾರಿಯಾಗಿರುವ ಘಟನೆ ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆಯ ಎಚ್. ಭೈರಾಪುರದಲ್ಲಿ ನಡೆದಿದೆ. ಮನೆಯ ಮಾಲೀಕ ಗಂಗಾಧರ್ ಶನಿವಾರ ಇಲ್ಲದ ಸಮಯ ಸಾಧಿಸಿದ ದುಷ್ಕರ್ಮಿಗಳು ಮನೆಯಲ್ಲಿದ್ದ ದೀಪಿಕಾ ಎಂಬವರಿಗೆ ಒಡವೆಗಳಿಗೆ ಪಾಲಿಷ್ ಹಾಕಿ ಕೊಡುವುದಾಗಿ ನಂಬಿಸಿದ್ದಾರೆ. ದೀಪಿಕಾರಿಂದ 40 ಗ್ರಾಂ ಚಿನ್ನಾಭರಣ ಪಡೆದ ಕಳ್ಳರು ಸ್ವಲ್ಪ ಬಿಸಿ ನೀರು ತರುವಂತೆ ಹೇಳಿದ್ದಾರೆ. ದೀಪಿಕಾ ಬಿಸಿ ನೀರು ತರಲು ಒಳ ನಡೆದ ಕೂಡಲೇ ಇತ್ತ ದುಷ್ಕರ್ಮಿಗಳು ಪಾಲಿಷ್‌ಗೆಂದು ಪಡೆದಿದ್ದ ಒಡವೆಯೊಂದಿಗೆ ಪರಾರಿಯಾದರು. ಈ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದೀಪಿಕಾ ದೂರು ನೀಡಿದ್ದಾರೆ.

ನಾಳೆ ವಿಚಾರ ಸಂಕಿರಣ
ಇಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಇದೇ ತಿಂಗಳ 30ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ 'ಎ.ಸಿ. ಮಹದೇವಪ್ಪ ಅವರ ಬದುಕು-ಬರಹ ಸಾಧನೆ' ಕುರಿತು ವಿಚಾರ ಸಂಕಿರಣ ಮತ್ತು 'ಅರಿವು' ನಾಟಕ ಕೃತಿ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ವಿದ್ಯಾವಾಚಸ್ಪತಿ ಕವಿತಾಕೃಷ್ಣ ವಹಿಸಲಿದ್ದಾರೆ. ಕಲಾಶ್ರೀ ಅವರು ಕೃತಿ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಯಾಗಿ ಮಾಲೂರಪ್ಪ ಆಗಮಿಸಲಿದ್ದಾರೆ. ಕಮಲಾ ಬಡ್ಡಿಹಳ್ಳಿ, ಪದ್ಮ ಕೃಷ್ಣಮೂರ್ತಿ, ಕುಮಾರ್ ಗುಬ್ಬಿ ವೀರಣ್ಣ, ಉಮಾಶರ್ಮ ಉಪನ್ಯಾಸ ನೀಡಲಿದ್ದಾರೆ.

ನಾಳೆ ರೇಕಿ ತರಗತಿ
ಇಲ್ಲಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಆವರಣದ ರಂಗ ತಾಲೀಮು ಕೊಠಡಿಯಲ್ಲಿ ಜೂ.30 ರಂದು ರೇಕಿ ಮಾಸ್ಟರ್ ಡಾ. ಸತ್ಯನಾರಾಯಣ ಅವರ ನೇತೃತ್ವದಲ್ಲಿ ರೇಕಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ ಕುರಿತು ತರಗತಿ ನಡೆಯಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಡಾ. ಸತ್ಯನಾರಾಯಣ್ ತಿಳಿಸಿದ್ದಾರೆ.

ನಾಳೆ ಉದ್ಘಾಟನೆ
ಇಲ್ಲಿನ ಜಯದೇವ ಹಾಸ್ಟೆಲ್ ಸಭಾಂಗಣದಲ್ಲಿ ಜೂ.30ರಂದು ಬೆಳಗ್ಗೆ 10.30 ಕ್ಕೆ ರಾಧಾ ಸಂಪತ್ ಕಲಾ ವೃಂದದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಪತ್ರಕರ್ತ ಎಸ್.ನಾಗಣ್ಣ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿ.ಎಸ್.ಸೋಮಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿ.ಬಿ. ಜ್ಯೋತಿ ಗಣೇಶ್, ಬಿ.ಸಿ. ಶೈಲಾ ನಾಗರಾಜ್, ಬಸವರಾಜ್ ಆಪಿನಕಟ್ಟೆ, ಲಕ್ಷ್ಮಣದಾಸ್,  ಆನಂದರಾಮು ಆಗಮಿಸಲಿದ್ದಾರೆ.

ಅತ್ಯಾಚಾರಕ್ಕೆ ಖಂಡನೆ
ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕ್ರಮವನ್ನು ಜಿಲ್ಲಾ ಎಸ್‌ಸಿ, ಎಸ್‌ಟಿ ಪದವೀಧರ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ವಿದ್ಯಾರ್ಥಿನಿಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒಕ್ಕೂಟದ ಜಿಲ್ಲಾ ಅಧ್ಯಕ್ಷ ರಂಗಧಾಮಯ್ಯ ಜೆ.ಸಿ.ಕೊಟ್ಟಶಂಕರ್, ಶಿವಾನಂದ್ ಮುಂತಾದವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.