ವಾಟರ್ಗ್ರಿಡ್ ಬಗ್ಗೆ ಉಸಿರೆತ್ತದ ಸಚಿವ ಜಯಚಂದ್ರ
ಅದಲಗೆರೆ ನಾಗೇಂದ್ರಕುಮಾರ್
ಕ.ಪ್ರ. ವಾರ್ತೆ ತುಮಕೂರು ಜೂ.30
ವಾಟರ್ಗ್ರಿಡ್ ಕೆನಾಲ್ ಯೋಜನೆ ಜಾರಿ ಕುರಿತು ಉಸಿರೆತ್ತದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ರಾಜ್ಯದ ರೈತರ ಪರ ಕಣ್ಣೀರು ಸುರಿಸಿದ್ದಾರೆ.
ರಾಜಧಾನಿ ಬೆಂಗಳೂರು, ಸ್ವಂತ ತುಮಕೂರು ಜಿಲ್ಲೆ ಸೇರಿದಂತೆ ಮಧ್ಯ ಕರ್ನಾಟಕದ 9 ಜಿಲ್ಲೆಗಳ ಸುಮಾರು 10 ಸಾವಿರ ಕೆರೆಗಳಿಗೆ ಕುಡಿಯುವ ನೀರು ತುಂಬಿಸುವ ಪರಮಶಿವಯ್ಯ ವರದಿಯಾಧಾರಿತ ವಾಟರ್ಗ್ರಿಡ್ ಕೆನಾಲ್ ಯೋಜನೆ ಕುರಿತು ಸೊಲ್ಲೆತ್ತದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಟಿ.ಬಿ. ಜಯಚಂದ್ರ ರೈತಪರ ಕಣ್ಣೀರು ಸುರಿಸಿರುವುರುದು ಹಲವರ ಟೀಕೆಗೆ ಕಾರಣವಾಗಿದೆ.
ಸ್ವಂತ ತಾಲೂಕು ಚಿಕ್ಕನಾಯನಕಹಳ್ಳಿಯಲ್ಲಿ ಏರ್ಪಾಟಾಗಿದ್ದ 9 ನೇ ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ರಾಜ್ಯದ ಕೃಷಿ ಹಾದಿ ಭಯಾನಕವಾಗಿದೆ. ರೈತರ ಸ್ಥಿತಿಗತಿ ಶೋಚನೀಯವಾಗಿದೆ. ಕೃಷಿ ಸಾಗುತ್ತಿರುವ ಹಾದಿ ನೋಡಿದರೆ ದಿಗಿಲಾಗುತ್ತದೆ. ತೆಂಗು, ಕೊಬ್ಬರಿ ನೆಚ್ಚಿಕೊಂಡಿರುವ ರೈತರು ಸಾಯುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯಿದೆ. ಜಿಲ್ಲೆ ನೋಡಿದರೆ ಬೇಸರವಾಗುತ್ತದೆ ಎಂದೆಲ್ಲಾ ಕಣ್ಣೀರು ಸುರಿಸಿದರು. ಆದರೆ ಇದೇ ಸಚಿವ ಜಯಚಂದ್ರ ಬರಪೀಡಿತ ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ನೀರುಣಿಸುವ ಪರಮಶಿವಯ್ಯ ವರದಿ ಕುರಿತಂತೆ ಈವರೆಗೆ ಅಧಿಕೃತವಾಗಿ ತುಟಿ ಬಿಚ್ಚಿಲ್ಲ. ಕೇವಲ 3-4 ಜಿಲ್ಲೆಗಳಿಗಷ್ಟೇ ನೀರೊದಗಿಸುವ ಪೈಪ್ಲೈನ್ ಆಧಾರಿತ ಎತ್ತಿನಹೊಳೆ ಯೋಜನೆಗೆ ಜೋತು ಬಿದ್ದಿರುವ ಜಯಚಂದ್ರ ಅಪ್ಪಿತಪ್ಪಿಯೂ ಸಹ ವಾಟರ್ಗ್ರಿಡ್ ಕೆನಾಲ್ ಯೋಜನೆ ಕುರಿತಂತೆ ಬಾಯಿ ಬಿಡುತ್ತಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ, ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಯೋಜನೆ ಜಾರಿಗೆ ಸಹಕರಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ್, ಕೋಲಾರ, ಚಿಕ್ಕಬಳ್ಳಾಪುರ ಶಾಸಕರು ವಾಟರ್ಗ್ರಿಡ್ ಕೆನಾಲ್ ಯೋಜನೆ ಜಾರಿಗೆ ಉತ್ಸುಕರಾಗಿದ್ದರೂ, ಜಯಚಂದ್ರ ಮಾತ್ರ ಯೋಜನೆ ಜಾರಿಗೆ ಸಂಬಂಧಿಸಿದಂತೆ ತೇಲಿಸಿ ಮಾತನಾಡುತ್ತಿದ್ದಾರೆ. ಸಚಿವರ ಈ ತೇಲಿಸಿ ಮಾತನಾಡುವ ಬುದ್ಧಿವಂತಿಕೆಯ ಗುಣ 9 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲೂ ಅಧಿಕೃತವಾಗಿಯೇ ಗೋಚರಿಸಿದೆ.
ಸಮ್ಮೇಳಕ್ಕೆ ಸೀಮಿತವಾಗದಿರಲಿ: ರಾಜ್ಯದ ಕೃಷಿ ಹಾದಿ ಭಯಾನಕವಾಗಿದೆ. ರೈತರ ಸ್ಥಿತಿ-ಗತಿ ಶೋಚನೀಯವಾಗಿದೆ. ತಮಗೆ ಜವಾಬ್ದಾರಿಯಿದೆ ಎಂದು ಹೇಳಿಕೊಂಡಿರುವ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರರ ಮೇಲಿನ ರೈತಪರ ಕಾಳಜಿ ಮೆಚ್ಚತಕ್ಕದ್ದೇ. ಆದರೆ ಹಿಂದಿನ ಸರ್ಕಾರಗಳ ಬಜೆಟ್ನಲ್ಲಿ ವಾಟರ್ಗ್ರಿಡ್ ಕೆನಾಲ್ ಜಾರಿಗೆ ಹಣ ಮೀಸಲಿಟ್ಟಿದ್ದರೂ, ಯೋಜನೆಯನ್ನು ನೆನೆಗುದಿಗೆ ಬಿದ್ದಿರುವ 78 ಇತರೆ ನೀರಾವರಿ ಯೋಜನೆಗಳ ಜತೆ ಸೇರಿಸಿ ಮಾತನಾಡಿರುವ ಜಯಚಂದ್ರರ ನಿಲುವು ಪ್ರಶ್ನಾರ್ಹ. ಹೀಗಾಗಿ ಜಯಚಂದ್ರರ ರೈತಪರ ಕಣ್ಣೀರು ಕೇವಲ ಚಿಕ್ಕನಾಯಕನಹಳ್ಳಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸೀಮಿತವಾಗಲಿದೆಯೇ ಅಥವಾ ಬಜೆಟ್ನಲ್ಲಿ ವ್ಯಕ್ತವಾಗಲಿದೆಯೇ ಎಂಬುದನ್ನು ಮುಂಬರುವ ರಾಜ್ಯ ಬಜೆಟ್ನಲ್ಲಿ ಕಾದು ನೋಡಬೇಕಿದೆ.
ಆರೋಪ ಸಾಲದು, ದೂರು ನೀಡಬೇಕು
ತುಮಕೂರು: ಬರೀ ಆರೋಪ ಮಾಡಿದರೆ ಸಾಲದು. ದೂರು ನೀಡಬೇಕು. ಆಗ ಮಾತ್ರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಚಿವ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದ್ದಾರೆ. ತುಮಕೂರು ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅಳತೆಗೆಟ್ಟ ಸಮವಸ್ತ್ರ, ಪಠ್ಯಪುಸ್ತಕ ಕೊರತೆ, ಕಂಪ್ಯೂಟರ್ ಪೂರೈಕೆಯಲ್ಲಾಗಿರುವ 250 ಕೋಟಿ ರು. ಅವ್ಯವಹಾರ, ಬಿಸಿಯೂಟದ 50 ಕೆಜಿ ಅಕ್ಕಿ ಚೀಲದಲ್ಲಿ 5 ಕೆಜಿ ಕಡಿಮೆಯಿರುವುದರ ಕುರಿತು ಆರೋಪ ಮಾಡಿದ್ದರು. ಆರೋಪಕ್ಕೆ ಚಿಕ್ಕನಾಯಕನಹಳ್ಳಿ ಸಾಹಿತ್ಯ ಸಮ್ಮೇಳನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಟಿಬಿಜೆ, ವೈ.ಎ. ನಾರಾಯಣಸ್ವಾಮಿ ಬರೀ ಆರೋಪ ಮಾಡಿದರೆ ಸಾಲದು. ದೂರು ನೀಡಬೇಕು. ಆಗ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಸ್ಪಷ್ಟಪಡಿಸಿದರು.
ಕಾನೂನು ಪುಸ್ತಕ ಕನ್ನಡೀಕರಣ
ತುಮಕೂರು: ಇಂಗ್ಲಿಷ್ ಭಾಷೆಯಲ್ಲಿರುವ ಕಾನೂನು ಪುಸ್ತಕಗಳ ಕನ್ನಡೀಕರಿಸುವಲ್ಲಿ ವಿಫಲರಾಗಿದ್ದೇವೆ ಎಂದು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿರುವ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಇಂಗ್ಲಿಷ್ ನಲ್ಲಿರುವ ಕಾನೂನು ಪುಸ್ತಕಗಳನ್ನು ಭಾಷಾಂತರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. ಹೀಗಾಗಿ ಪುಸ್ತಕಗಳ ಭಾಷಾಂತರ ಹೊಣೆಗಾರಿಕೆಯೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಚಿವರದ್ದೇ. ರಾಜ್ಯದಲ್ಲಿ ಕಾನೂನು ವಿಶ್ವ ವಿದ್ಯಾಲಯವೂ ಇದೆ. ಬೇರೆ - ಬೇರೆ ವಿಶ್ವ ವಿದ್ಯಾಲಯಗಳಿವೆ. ವಿವಿ ಪ್ರಸಾರಾಂಗಗಳಿವೆ. ಸಚಿವರು ಈ ಸಂಸ್ಥೆಗಳ ಮೇಲೆ ಯಾವ ರೀತಿ ಒತ್ತಡ ಹೇರಲಿದ್ದಾರೆ. ಭಾಷಾಂತರದ ನಿಟ್ಟಿನಲ್ಲಿ ಸಚಿವರು ಯಾವ ರೀತಿ ಕಾರ್ಯನಿರ್ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

