ತುಮಕೂರು

ಜಿದ್ದಾಜಿದ್ದಿನ ಬಿಜೆಪಿ-ಕೆಜೆಪಿ ಕದನಕ್ಕೆ ಚಾಲನೆ

Published On :

ತುಮಕೂರು: ತುಮಕೂರಿನಲ್ಲಿ ಜಿದ್ದಾ ಜಿದ್ದಿನ ಬಿಜೆಪಿ-ಕೆಜೆಪಿ ಕದನಕ್ಕೆ ಅಧಿಕೃತವಾಗಿ ಗುರುವಾರದಿಂದ ಚಾಲನೆ ನೀಡಲಾಗಿದೆ.
ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರು ಒಂದೇ ದಿನ, ಒಂದೇ ಕಡೆಯಿಂದ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ್ದು ಗಮನಾರ್ಹ. ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮಿಗಳ ಆಶೀರ್ವಾದ ಪಡೆದು ಚುನಾವಣಾ ಪ್ರಚಾರ ಆರಂಭಿಸಿದರೆ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿ ನಡೆಸುವುದರ ಮೂಲಕ ಚುನಾವಣಾ ಪ್ರಚಾರ ಆರಂಭಿಸಿ, ಪತ್ರಕರ್ತರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಗದೆ ಸುದ್ದಿಗೋಷ್ಠಿಯನ್ನು ಮೊಟಕುಗೊಳಿಸಿ ಮಧ್ಯದಲ್ಲೇ ಎದ್ದು ಹೋಗಿದ್ದು ವಿಶೇಷ.
ಶಿರಾಗೇಟ್‌ನಿಂದ ಪ್ರಚಾರ: ಜಿಲ್ಲಾ ಕೆಜೆಪಿ ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕೆ ಎರಡು ದಿನ ಮೊದಲೇ ವೇಳಾಪಟ್ಟಿ ಬಿಡುಗಡೆ ಮಾಡಿ, ಗುರುವಾರ ಸಂಜೆ 4 ಗಂಟೆಗೆ ಶಿರಾಗೇಟ್‌ನಿಂದ ಪ್ರಚಾರ ಕಾರ್ಯ ಆರಂಭಿಸುವುದಾಗಿ ತಿಳಿಸಲಾಗಿತ್ತು. ಕೆಜೆಪಿ ವೇಳಾಪಟ್ಟಿ ಬಿಡುಗಡೆಯಾದ ಒಂದು ದಿನದ ನಂತರ ಜಿದ್ದಿಗೆ ಬಿದ್ದಂತೆ ಜಿಲ್ಲಾ ಬಿಜೆಪಿ ವತಿಯಿಂದ ಅದೇ ದಿನ ಬೆಳಗ್ಗೆ 8-30 ಕ್ಕೆ ಸುದ್ದಿಗೋಷ್ಠಿ ಹಾಗೂ ಶಿರಾಗೇಟ್‌ನಿಂದಲೇ ರೋಡ್ ಶೋ ಏರ್ಪಡಿಸಿರುವುದಾಗಿ ಮಾಹಿತಿ ರವಾನಿಸಲಾಯಿತು. ಒಂದೇ ದಿನ ಒಬ್ಬರು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮತ್ತೊಬ್ಬರು ಪ್ರಾದೇಶಿಕ ಪಕ್ಷದ ರಾಜ್ಯಾಧ್ಯಕ್ಷರಿಂದ ಬೆಳಗ್ಗೆ ಹಾಗೂ ಸಂಜೆ ರೋಡ್ ಶೋಗಳು ನಡೆದವು.
ಸೊಗಡು ಹಳೇ ಮನೆ ಬಳಿ ಪ್ರಚಾರ: ಬಿಜೆಪಿ-ಕೆಜೆಪಿ ಚುನಾವಣಾ ಪ್ರಚಾರ, ರೋಡ್ ಶೋ ಶಿರಾಗೇಟ್‌ನಿಂದ ಆರಂಭಗೊಂಡು ಕೋಡಿ ಬಸವೇಶ್ವರ ಸ್ವಾಮಿ ದೇವಾಲಯ, ಚಿಕ್ಕಪೇಟೆ, ಚಿಕ್ಕಪೇಟೆ ಬಳಿಯಿರುವ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣನವರ ಹಳೇ ಮನೆ ಹಾಗೂ ಸೊಗಡು ಪತ್ರಿಕೆ ಕಾರ್ಯಾಲಯದ ಸಮೀಪದಿಂದಲೇ ಹಾದು ಹೋಗಿದ್ದು ವಿಶೇಷ. ಈಶ್ಪರಪ್ಪನವರ ಜತೆ ರೋಡ್ ಶೋ ನಡೆಸಿದ್ದ ಸೊಗಡು ಶಿವಣ್ಣನವರಿಗೆ ಮಹಿಳೆಯರು ಕುಡಿಯುವ ನೀರಿಗೆ ಒತ್ತಾಯಿಸಿದ್ದು ಗಮನಾರ್ಹ. ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಕಿಡಿ ಕಾರಿ, ಹಿಗ್ಗಾ-ಮುಗ್ಗಾ ಟೀಕಿಸಿ ಹೋದರು.
ರೋಡ್ ಶೋ: ಬಿಜೆಪಿ, ಕೆಜೆಪಿ ರೋಡ್ ಶೋ ಗಳಿಗೆ ಎರಡೂ ಪಕ್ಷಗಳೂ ಒಂದೇ ದಿನ ಅಂದರೆ ಬೆಳಗ್ಗೆ -ಸಂಜೆ ಚಾಲನೆ ನೀಡಿದವು. ಬಿಜೆಪಿ ರೋಡ್ ಶೋಗೆ ಹೋಲಿಸಿದರೆ ಕೆಜೆಪಿ ರೋಡ್ ಶೋನಲ್ಲಿ ಕಾರ್ಯಕರ್ತರ ಸಂಖ್ಯೆ ಹೆಚ್ಚಿತ್ತು. ತುಮಕೂರು ನಗರಕ್ಕಷ್ಟೇ ಕೇಂದ್ರೀಕರಿಸಿ ಶಿರಾಗೇಟ್, ಚಿಕ್ಕಪೇಟೆ, ಬನಶಂಕರಿ, ಎಸ್‌ಎಸ್ ಪುರಂ, ದೇವರಾಯಪಟ್ಟಣ ಸೇರಿದಂತೆ ಚುನಾವಣಾ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಟ್ಟು 14 ಕಡೆ ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು.
ಜಿಎಸ್‌ಬಿ, ಸೊಗಡು ವಾಕ್ಸಮರ: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದರೂ ಕೆಜೆಪಿ ಜತೆ ಗುರುತಿಸಿಕೊಂಡಿರುವ ಜಿ.ಎಸ್. ಬಸವರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣನವರ ನಡುವೆ ವಾಕ್ಸಮರ, ಆರೋಪ, ಪ್ರತ್ಯಾರೋಪಗಳು ನಡೆದಿರುವ ಸಂದರ್ಭದಲ್ಲೇ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಿದ್ದು, ಮತ್ತಷ್ಟು ಕಾವೇರುವ ಸಾಧ್ಯತೆಗಳಿವೆ. ಕೆಜೆಪಿ-ಬಿಜೆಪಿ ಚುನಾವಣಾ ಕದನ ವಿಧಾನಸಭಾ ಚುನಾವಣೆಗಿಂತಲೂ ಮುನ್ನವೇ ತುಮಕೂರಿನಲ್ಲಿ ಕಾವೇರಿದ್ದು, ಜನತೆಯ ಚಿತ್ತ ಯಾರತ್ತ ಎಂಬುದನ್ನು ಕಾದು ನೋಡಬೇಕಿದೆ.
-ಅದಲಗೆರೆ ನಾಗೇಂದ್ರಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.