ತುಮಕೂರು

ಭ್ರಷ್ಟಾಚಾರದಿಂದ ಹೊರಬರಲು ಸಾಂಸ್ಕೃತಿಕ ಕಲೆ ಪೂರಕ: ಡಾ. ಲಕ್ಷ್ಮಣದಾಸ್

Published On :

ತುಮಕೂರು: ದೇಶವನ್ನೇ ತಲ್ಲಣಗೊಳಿಸುತ್ತಿರುವ ಹಿಂಸೆ, ಅತ್ಯಾಚಾರ, ಭ್ರಷ್ಟಾಚಾರಗಳಿಂದ ಹೊರಬರಲು ನಾಟಕ, ಸಂಗೀತ, ಸಾಂಸ್ಕೃತಿಕ ಕಲೆಗಳು ಪೂಕರವಾಗಿ ಕೆಲಸ ಮಾಡುತ್ತವೆ ಎಂದು ಕಲಾಶ್ರೀ ಡಾ. ಲಕ್ಷ್ಮಣದಾಸ್ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರಯೋಗದಾಟಗಳ ರಂಗಕೇಂದ್ರ ನಾಟಕಮನೆ ವತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ರಾಜಕಾರಣಿಗಳಿಂದ ಇವುಗಳಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿಯತ್ತ ಜನರು ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಾಗ ತಾನಾಗಿಯೇ ಬದಲಾವಣೆ ಕಾಣಲಿದೆ ಎಂದರು. ಹಣವೇ ಎಲ್ಲಾ ವಿಷಯಗಳಲ್ಲಿಯೂ ಪ್ರಾಧಾನ್ಯತೆ ಪಡೆಯುತ್ತಿರುವ ಇಂದಿನ ದಿನಗಳಲ್ಲಿ ಕಲಾವಿದರು ನಿಜವಾಗಿಯೂ ತಲ್ಲಣದಲ್ಲಿದ್ದಾರೆ. ಒಂದೆಡೆ ಕಲೆಯ ಅಪಮೌಲ್ಯ ನಡೆಯುತ್ತಿದ್ದು, ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ. ಇದು ತಪ್ಪಬೇಕು. ನಿಷ್ಪಕ್ಷಪಾತವಾಗಿ ಕಲಾ ಸೇವೆ ಮಾಡುವಂತಹ ವ್ಯಕ್ತಿಗಳನ್ನು ಪ್ರೋತ್ಸಾಹಿಸಬೇಕಾಗಿದೆ. ನಾಟಕ ಮಹಾಲಿಂಗು ಸೇರಿದಂತೆ ಹಲವು ಕಲಾವಿದರು ತಮ್ಮ ಜೀವನವನ್ನೇ ಕಲೆಗಾಗಿ ಮುಡಿಪಾಗಿಟ್ಟಿದ್ದಾರೆ. ತಂದೆ, ತಾಯಿ, ಬಂಧು ಬಳಗ ಎಲ್ಲವೂ ರಂಗಭೂಮಿಯೇ ಆಗಿದೆ. ಆದ್ದರಿಂದ ಇಂತಹವನ್ನು ಪ್ರೋತ್ಸಾಹಿಸುವುದರಿಂದ ಕಲೆ ಮತ್ತಷ್ಟು ಜನರಿಗೆ ಆಶ್ರಯ ತಾಣವಾಗುತ್ತದೆ ಎಂದು ಲಕ್ಷ್ಮಣದಾಸ್ ನುಡಿದರು.
ರಂಗಸಂಪನ್ಮೂಲ ಕೇಂದ್ರ: ತುಮಕೂರು ಒಂದು ಪ್ರಬುದ್ಧ ರಂಗಸಂಪನ್ಮೂಲ ಕೇಂದ್ರ. ಹಲವಾರು ಜನರನ್ನು ಚಲನಚಿತ್ರರಂಗ, ರಂಗಭೂಮಿಗೆ ನೀಡಿದೆ. ಹಲವಾರು ಜನ ಇಂದಿಗೂ ರಂಗಭೂಮಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗುಬ್ಬಿ ವೀರಣ್ಣ ರಂಗಭೂಮಿಯಲ್ಲದೆ, ಬಾಲಭವನ, ಡಾ.ಅಂಬೇಡ್ಕರ್ ಭವನಗಳು ದುರಸ್ತಿಯಾಗಿ ಕಲೆ, ನಾಟಕಗಳ ಪ್ರದರ್ಶನಕ್ಕೆ ಅವಕಾಶ ದೊರೆಯುವಂತಾಗಬೇಕು ಎಂದರು.
ಪೈಪೋಟಿ: ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಂಸ್ಕೃತಿಕ ಕೇಂದ್ರದ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ತಂತ್ರಜ್ಞಾನ ಬೆಳದಂತೆ ಜೀವನವನ್ನು ಧಾರಾವಾಹಿಗೆ ಹೊಲಿಸಿ ನೋಡುವಂತಹ ಸ್ಥಿತಿಗೆ ನಮ್ಮ ಮಾಧ್ಯಮಗಳು ಅಧಃಪತನದತ್ತ ತೆಗೆದುಕೊಂಡು ಹೋಗುತ್ತಿದೆ. ಅನೈತಿಕತೆ, ಅಶ್ಲೀಲವನ್ನೇ ಜನರಿಗೆ ತುಂಬಲು ಪೈಪೋಟಿ ನಡೆಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಸಾಂಸಾರಿಕ ಜಗಳಗಳು ಟಿ.ವಿ.ಗಳಿಗೆ ಟಿ.ಆರ್.ಪಿ ತಂದುಕೊಡುವ ವಸ್ತುಗಳಾಗುತ್ತಿದ್ದು,ಇದರಿಂದ ಕಲಾವಿದರು ಹೊರತಾಗಿಲ್ಲ. ಸದ್ದಿಲ್ಲದೆ ಕಲಾಸೇವೆ ಮಾಡುತ್ತಿರುವ ನಾಟಕಮನೆಯಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಮೂಲಕ ಜನರು ಕಲಾಸೇವೆ ನಿರಂತರವಾಗಿ ನಡೆದುಕೊಂಡಲು ಹೋಗಲು ಸಹಕರಿಸಬೇಕು ಎಂದರು.
ರಂಗ ಸಂಘಟಕ ನಾಟಕಮನೆ ಮಹಾಲಿಂಗು, ಕಲಾವಿದ ಪುಟ್ಟಬೋರಯ್ಯ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.