ಅಂತರ್ಜಲ ಕೊರತೆ ಆತಂಕದಲ್ಲಿ ಜಿಲ್ಲೆ
ತುಮಕೂರು: ಜಿಲ್ಲೆ ಅಂತರ್ಜಲ ಕೊರತೆ ಆತಂಕವನ್ನು ಎದುರಿಸುತ್ತಿದೆ ಎಂದು ಖ್ಯಾತ ವಿಜ್ಞಾನ ಸಾಹಿತಿ ಟಿ.ಆರ್. ಅನಂತರಾಮು ಅಭಿಪ್ರಾಯಪಟ್ಟರು.
ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತುಮಕೂರು ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಏರ್ಪಾಟಾಗಿದ್ದ ಜಿಲ್ಲಾ ಪರಿಸರ ಮಿತ್ರ ಶಾಲಾ ಪ್ರಶಸ್ತಿ 2012-13 ವಿತರಣಾ ಸಮಾರಂಭ ಹಾಗೂ ಜಿಲ್ಲಾ ಅರಣ್ಯ, ಪರಿಸರ, ಜೀವಿವೈವಿದ್ಯ ಪರಿಸ್ಥಿತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಫ್ಲ್ಲೋರೈಡ್ಯುಕ್ತ ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಮಳೆ ನೀರನ್ನು ಭೂಮಿಗೆ ಇಂಗಿಸುವ ಕೆಲಸ ಆಗುತ್ತಿಲ್ಲ. ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣದಿಂದ ಮಳೆ ನೀರಿನ ಸದ್ಬಳಕೆ ಹೆಚ್ಚಾಗಬೇಕು ಎಂದು ಅನಂತರಾಮು ಕರೆ ನೀಡಿದರು.
ವಿಶೇಷ ಯೋಜನೆ ಅಗತ್ಯ: ಅಕ್ರಮ ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆಯಿಂದ ಸಂಪೂರ್ಣ ಹಾನಿಗೊಳಗಾಗಿರುವ ತುಮಕೂರು ಜಿಲ್ಲಾ ಪರಿಸರ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸಬೇಕಾದ ಅಗತ್ಯವಿದೆ. ಅಕ್ರಮ ಗಣಿಗಾರಿಕೆಯಿಂದ ಭೂಮಿಯ ಒಡಲನ್ನು ಬಗೆಯಲಾಗಿದೆ. ಬೆಟ್ಟ-ಗುಡ್ಡಗಳೇ ನಶಿಸಿಹೋಗಿವೆ. ಅದೇ ರೀತಿ ನಗರಗಳ ಬೆಳವಣಿಗೆಯಿಂದ ಮರಳುಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಬೇಕಾಬಿಟ್ಟಿ ಮರಳು, ಮಣ್ಣು ತೆಗೆಯುತ್ತಿರುವುದರಿಂದ ಜಿಲ್ಲೆಯ ಕೆರೆಗಳು ವಿರೂಪಗೊಂಡಿವೆ. ನಾಶದತ್ತ ಸಾಗಿವೆ. ಅಲ್ಲದೇ ಸಾಕಷ್ಟು ಕೆರೆಗಳಲ್ಲಿ ನೀರು ಹಿಡಿದಿಡುವ ಶಕ್ತಿ ಇಲ್ಲವಾಗಿದೆ. ಮರಳುಗಣಿಗಾರಿಕೆ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಅಂತರ್ಜಲ ಇಲ್ಲವಾಗುವುದು ಎಂದು ಅನಂತರಾಮು ಎಚ್ಚರಿಕೆ ನೀಡಿದರು.
ಕ್ಲಿಷ್ಟಕರ ಸನ್ನಿವೇಶದಲ್ಲಿದ್ದೇವೆ: ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಮಾತನಾಡಿ, ನಾವು ಸಣ್ಣವರಿದ್ದಾಗ, ಕೈಯಲ್ಲಿ ಮರಳು ಬಗೆದು ನೀರು ಕುಡಿಯುತ್ತಿದ್ದೆವು. ಆದರೆ ಇಂದು ಜಿಲ್ಲೆಯಲ್ಲಿ 1300 ಅಡಿಗೆ ಅಂತರ್ಜಲ ಕುಸಿದಿದೆ. ಕ್ಲಿಷ್ಟಕರ ಸನ್ನಿವೇಶದಲ್ಲಿದ್ದೇವೆ. ಅರಣ್ಯ ಉಳಿಸಿ, ಬೆಳೆಸದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ಪ್ರಶಸ್ತಿ ಪಡೆದ ಶಾಲೆಗಳು: ಇದೇ ಸಂದರ್ಭದಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲಾ ಪ್ರಶಸ್ತಿಗಳನ್ನು ನೀಡಲಾಯಿತು. ತಿಪಟೂರು ತಾಲೂಕು ಅಲ್ಬೂರು ಸರ್ಕಾರಿ ಪ್ರೌಡಶಾಲೆ, ಪಾವಗಡ ತಾಲೂಕು ರಾಮಯ್ಯನ ಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಮಿತ್ರ ಶಾಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಹಸಿರು ಶಾಲೆ ಪ್ರಶಸ್ತಿ: ಚಿಕ್ಕನಾಯಕನಹಳ್ಳಿ ತಾಲೂಕು ಗೊಲ್ಲರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾವಗಡ ತಾಲೂಕು ಪೊನ್ನ ಸಮುದ್ರದ ವಿನಾಯಕ ವಿದ್ಯಾಪೀಠ ಪ್ರೌಡಶಾಲೆ, ತುರುವೇಕೆರೆ ತಾಲೂಕು ದೊಂಬರಹಳ್ಳಿ ಸೋಮೇಶ್ವರ ಪ್ರೌಢಶಾಲೆ, ಕೊರಟಗೆರೆ ತಾಲೂಕು ಕಬ್ಬಿಗೆರೆ ಮಾರುತಿ ಗ್ರಾಮಾಂತರ ಪ್ರೌಢಶಾಲೆ.
ತುಮಕೂರು ತಾಲೂಕು ಕುಚ್ಚಂಗಿ ಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಬ್ಬಿ ತಾಲೂಕು ಚೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿರಾ ತಾಲೂಕು ಗೊಮ್ಮನಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಣಿಗಲ್ ತಾಲೂಕು ಕಲ್ಲುಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತುಮಕೂರು ತಾಲೂಕು ಹೆಬ್ಬೂರು ಎಸ್ಎಚ್ವಿ ಆಂಗ್ರ ಶಾಲೆಗೆ ಹಸಿರು ಶಾಲೆ ಪ್ರಶಸ್ತಿ ನೀಡಲಾಯಿತು.
ಕಿತ್ತಳೆ ಶಾಲೆ ಪ್ರಶಸ್ತಿ: ಚಿಕ್ಕನಾಯಕನಹಳ್ಳಿ ತಾಲೂಕು ಬರಗೀಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಣಿಗಲ್ ತಾಲೂಕು ಎಂ. ಬೊಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ತುರುವೇಕೆರೆ ತಾಲೂಕು ಬಾಣಸಂದ್ರದ ವಿಎಸ್ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಶಿರಾ ತಾಲೂಕು ದ್ವಾರನಕುಂಟೆ ಕಾಳಿದಾಸ ಪ್ರೌಢಶಾಲೆ, ಮಧುಗಿರಿ ತಾಲೂಕು ವಡ್ಡರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊರಟಗೆರೆ ತಾಲೂಕು ಅಕ್ಕಿರಾಂಪುರ ಸರ್ಕಾರಿ ಪ್ರೌಢಶಾಲೆ, ತುಮಕೂರು ತಾಲೂಕು ಕುಪ್ಪೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಧುಗಿರಿ ಚಿರಾಕ್ ಪಬ್ಲಿಕ್ ಶಾಲೆ, ಕುಣಿಗಲ್ ತಾಲೂಕು ಕೆಂಪಸಾಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಿತ್ತಳೆ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್. ನಿರಂಜನಾರಾಧ್ಯ ಅವರಿಗೆ ಟಿ.ಆರ್. ಅನಂತರಾಮು ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಪರಿಸರ ಪ್ರಶಸ್ತಿ ವರದಿಯನ್ನು ಟಿ.ಆರ್. ಅನಂತರಾಮು, ಕಲ್ಪತರು ಪರಿಸರ ಮಿತ್ರ ಶಾಲಾ ಪ್ರಶಸ್ತಿ ಕೃತಿಯನ್ನು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ವೆಂಕಟೇಶ್ ಬಿಡುಗಡೆ ಮಾಡಿದರು. ಜಿಲ್ಲೆಯ ವಿವಿಧ ಶಾಲೆಗಳಿಗೆ ಪರಿಸರ ಶಾಲಾ ಪ್ರಶಸ್ತಿಯನ್ನು ಸಿ.ಎಂ. ಸತೀಶ್ ವಿತರಿಸಿದರು.
ತುಮಕೂರು ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಆಂಜಿನಪ್ಪ, ಜಿಲ್ಲಾ ತರಬೇತಿ ಸಂಸ್ಥೆ ಪ್ರಿನ್ಸಿಪಾಲ್ ಈಶ್ವರಯ್ಯ, ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ. ಯತಿರಾಜು ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

