ಕಾಡ್ಗಿಚ್ಚು ತಡೆಗಟ್ಟುವಂತೆ ಇಲಾಖೆಗೆ ಎಚ್ಚರಿಕೆ ನೀಡಿ: ಸಂಘಟನೆಗಳ ಆಗ್ರಹ
ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಅರಣ್ಯ ಸಂಪತ್ತನ್ನು ಹೊಂದಿರುವ ಏಕೈಕ ತಾಣ ಮೂಡಲ ಗುಡ್ಡ. ಇದರಲ್ಲಿರುವ ಅರಣ್ಯ ಸಂಪತ್ತಿಗೆ ಪ್ರತಿ ಬೇಸಿಗೆಯಲ್ಲಿ ರೈತ ವರ್ಗದ ಜನ ತಿಳಿವಳಿಕೆ ಕೊರತೆಯಿಂದ ಬೆಂಕಿ ಹಚ್ಚದಂತೆ ಮನವರಿಕೆ ಮಾಡುವಲ್ಲಿ ಸಂಬಂಧಿಸಿದ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ತಾಲೂಕಿನ ಹಲವಾರು ಸಂಘಟನೆಗಳು ಆರೋಪಿಸಿವೆ.
ಪ್ರತಿ ಬೇಸಿಗೆಯಲ್ಲಿ ಅರಣ್ಯದಲ್ಲಿರುವ ಹುಲ್ಲು, ಮರಗಿಡಗಳ ಎಲೆಗಳು ಒಣಗುವುದು ಸಹಜ. ಆದರೆ ಇದು ಬೆಂಕಿ ಹಚ್ಚಿದರೆ ಮತ್ತೆ ಹುಲುಸಾಗಿ ಚಿಗುರುತ್ತದೆ, ಕೆಲವು ಜಾತಿಯ ಬೀಜಗಳು ಬೆಂಕಿಯಲ್ಲಿ ಸುಟ್ಟರೆ ಮಾತ್ರ ಮರುಮೊಳಕೆಯೊಡೆಯುತ್ತವೆ ಎಂಬ ಕಡಿಮೆ ತಿಳಿವಳಿಕೆಯಿಂದ ರೈತ ವರ್ಗದ ಜನ ಬೆಂಕಿ ಹಚ್ಚಿ ಕಾಡಿನಲ್ಲಿರುವ ಜೀವ ಸಂಕುಲವನ್ನು ನಾಶಮಾಡುತ್ತಿದ್ದಾರೆ. ಆದರೆ ಅವರ ನಂಬಿಕೆ ತಪ್ಪು ಎಂಬುದನ್ನು ಮನವರಿಕೆ ಮಾಡುವಲ್ಲಿ ಇಲಾಖೆ ವಿಫಲವಾಗಿದೆ. ಈ ಬಗ್ಗೆ ತಾಲೂಕಿನ ಜಿಲ್ಲಾ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾಲೂಕು ಪತ್ರಕರ್ತರ ಸಂಘ, ತಾಲೂಕು ವಿತ್ರಾನ ಕೇಂದ್ರ, ಮತ್ತು ಸೃಜನಾ ಮಹಿಳಾ ಸಂಘಟನೆಗಳು ಮತ್ತು ಇನ್ನು ಹಲವು ಸಂಘಟನೆಗಳ ಮತ್ತು ಸಾರ್ವಜನಿಕರ ಸಹಕಾರದಿಂದ ಗುಡ್ಡದ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಕಿ ಹಚ್ಚುವುದರಿಂದ ಆಗುವ ಅನಾಹುತಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಯಿತು. ಆದರೆ ಈ ಸಂದರ್ಭದಲ್ಲಿ ಕಂಡುಬಂದ ವಾಸ್ತವ ಸಂಗತಿ ಅರಣ್ಯ ಇಲಾಖೆ ಬೆಂಕಿ ವ್ಯಾಪಕವಾಗಿ ಪಸರಿಸದಂತೆ ಹಾಕುವ ಬೆಂಕಿ ರೇಖೆಯನ್ನು ಇಲಾಖೆ ಸರಿಯಾಗಿ ನಿರ್ವಹಿಸದ ಕಾರಣ ಅದು ಇಡೀ ಕಾಡನ್ನು ಅಕ್ರಮಿಸುತ್ತದೆ ಎಂದು ಸುತ್ತಮುತ್ತಲ ಗ್ರಾಮಸ್ಥರು ದೂರಿದರು.
ಬೆಂದು ಹೋಗುತ್ತವೆ: ಕಾಡಿಗೆ ಬೆಂಕಿ ಹಚ್ಚುವುದರಿಂದ ಕೋಟ್ಯಾನುಕೋಟಿ ಜೀವರಾಶಿಗಳು, ಸಸ್ಯಸಂಕುಲಗಳು ,ಚಿಕ್ಕಪುಟ್ಟ ಪ್ರಾಣಿಗಳು ಬೆಂದು ಹೋಗುತ್ತವೆ. ಅಳಿದುಳಿದ ಜೀವರಾಶಿಗಳು ತಮ್ಮ ನೆಲೆಯನ್ನು ಬದಲಾಯಿಸುತ್ತವೆ. ಇದರಿಂದ ಅರಣ್ಯಕ್ಕೆ ಪೂರಕವಾದ ವಾತಾವರಣ ನಿರ್ನಾಮವಾಗಿ ಕಾಡು ವಿನಾಶದಂಚಿಗೆ ತಲುಪುತ್ತದೆ. ಆದ್ದರಿಂದ ಅರಣ್ಯಕ್ಕೆ ಬೆಂಕಿ ಹಚ್ಚುವವರ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳ ಬೇಕು.
ಅಧಿಕಾರಿಗಳು ಬೆಂಕಿ ರೇಖೆ ಹಾಕಿದ ನಂತರ ಮೇಲ್ವಿಚಾರಣೆ ನಡೆಸುವಲ್ಲಿ ವಿಫಲಾರಾಗಿರುವುದರಿಂದ ಅವರಿಗೆ ಸೂಕ್ತ ಎಚ್ಚರಿಕೆ ನೀಡಿ ಹಾಗೂ ಸಮರ್ಪಕ ಕರ್ತವ್ಯ ನಿರ್ವಹಣೆ ಮಾಡುವುದಕ್ಕೆ ನಿರ್ದೇಶನ ನೀಡಬೇಕೆಂದು ವಿವಿಧ ಸಂಘಟನೆಯ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

