ತುಮಕೂರು

ಅಪಘಾತದಲ್ಲಿ ವ್ಯಕ್ತಿ ಸೇರಿ 13 ಹೋರಿಗಳು ಸಾವು

Published On :

ಕ.ಪ್ರ. ವಾರ್ತೆ ಟಿ ತಿಪಟೂರು ಟಿ ಮಾ.4
ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 206ರ ಕಾಮಗೊಂಡನಹಳ್ಳಿ ಗೇಟ್ ಬಳಿ ಕ್ರೂಸರ್ ಮತ್ತು ಕ್ಯಾಂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಕ್ಯಾಂಟರ್‌ನಲ್ಲಿದ್ದ 15 ಹೋರಿಗಳ ಪೈಕಿ 13 ಹೋರಿಗಳು ಸ್ಥಳದಲ್ಲೇ  ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸೋಮವಾರ ಸಂಜೆ ನಡೆದಿದೆ.
ತುಮಕೂರಿನ ಸಿದ್ಧಗಂಗಾ ದನಗಳ ಜಾತ್ರೆಯಲ್ಲಿ ಹೋರಿಗಳನ್ನು ಖರೀದಿಸಿ, ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ಗ್ರಾಮದ ರೈತರು ಮತ್ತು ವ್ಯಾಪಾರಸ್ಥರು ಪ್ರತೀ ಗುರುವಾರ ನಡೆಯುವ ಪ್ರಸಿದ್ಧ ದನಗಳ ಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಸ್ವ ಗ್ರಾಮ ಗಂಡಸಿಗೆ ವಾಹನದಲ್ಲಿ   ಕೊಂಡೊಯ್ಯುತ್ತಿದ್ದರೆನ್ನಲಾಗಿದೆ.
ಬದುಕುಳಿದ 2 ಹೋರಿ: ವಾಹನದಲ್ಲಿ ಉಳುಮೆಗೆ ಉಪಯೋಗಿಸಲು ಯೋಗ್ಯವಾಗಿರುವ ಹಾಗೂ ತೀರಾ ಎಳೆಯ ಪ್ರಾಯದ (5 ರಿಂದ 6 ವರ್ಷ) 15 ಹೋರಿಗಳ ಜೊತೆಗೆ 6 ಜನರಿದ್ದರು. ಇದರಲ್ಲಿ ಗಂಡಸಿಯ ಸತೀಶ್ (35) ಮತ್ತು 13 ಹೋರಿಗಳು ಸಾವನ್ನಪ್ಪಿದ್ದು, ಎಂಥವರ ಹೃದಯವನ್ನೂ ಕಲುಕುವಂತೆ ಮಾಡಿದೆ.  ಉಳಿದಂತೆ  ಐವರು ಗಾಯಗೊಂಡಿದ್ದು, 2 ಹೋರಿಗಳು ಮಾತ್ರ ಬದುಕುಳಿದಿವೆ. ಉಳಿದ 5 ಗಾಯಾಳುಗಳನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಮೃತಪಟ್ಟಿರುವ ಹೋರಿಗಳ ಪೈಕಿ ಪ್ರತಿಯೊಂದೂ ಹೋರಿಯೂ 35ರಿಂದ 40ಸಾವಿರ ಬೆಲೆ ಬಾಳುವಂತವಾಗಿದ್ದು ಎಲ್ಲಾ ಹೋರಿಗಳು ಹತ್ತಾರು ವರ್ಷ ಕೃಷಿ ಕಾರ್ಯಗಳಿಗೆ ಯೋಗ್ಯವಾಗಿದ್ದವು.   ಅಲ್ಲದೆ ಹೋರಿಗಳಿಗೆ ಯಾವುದೇ ವಿಮೆಯನ್ನೂ ಮಾಡಿಸದಿರುವುದು ಲಕ್ಷಾಂತರ ರು. ನಷ್ಟವಾಗಿದ್ದು ಸರ್ಕಾರ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹೋರಿಗಳನ್ನು ತುಂಬಿಕೊಂಡು ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ, ಶಿವಮೊಗ್ಗ ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದು ಇದರಲ್ಲಿ ಪ್ರಯಾಣಿಸುತ್ತಿದ್ದ ಐವರೂ ತೀವ್ರ ಗಾಯಾಳುಗಳಾಗಿದ್ದು, ಇವರನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪ್ರಕರಣವನ್ನು ಕಿಬ್ಬನಹಳ್ಳಿ ಠಾಣೆಯ ಪಿಎಸೈ ರಾಜು ಡಿ.ಎಲ್. ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.