ಸಿನಿಕತನ ತೊರೆದು ಚುನಾವಣೆಯಲ್ಲಿ ಪಾಲ್ಗೊಳ್ಳಿ
ಕ.ಪ್ರ. ವಾರ್ತೆ ತುಮಕೂರು ಮಾ.5
ಮತದಾರರು ಸಿನಿಕತನ ತೊರೆದು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜಾತಿ-ಮತ-ಧರ್ಮಕ್ಕೆ ಕಟ್ಟುಬೀಳದೆ ಅರ್ಹರನ್ನು ಗೆಲ್ಲಿಸಬೇಕು. ಚುನಾಯಿತರಾದವರು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನಿರಂತರ ಒತ್ತಡ ತರಬೇಕು. ಈ ದಿಸೆಯಲ್ಲಿ ವಾರ್ಡ್ವಾರು ನಾಗರಿಕ ಸಮಿತಿಗಳನ್ನು ರಚಿಸಿ ಕಾರ್ಯಪ್ರವೃವಾಗಬೇಕು ಎಂಬುದಾಗಿ ನಗರಸಭಾ ಚುನಾವಣೆ ಬಗ್ಗೆ ನಡೆದ ಸಂವಾದದಲ್ಲಿ ಒಟ್ಟಾಭಿಪ್ರಾಯ ರೂಪುಗೊಂಡಿತು.
ತುಮಕೂರಿನ ಎಸ್.ಐ.ಟಿ. ಬಡಾವಣೆ ಹೆಚ್.ಎಸ್.ಆರ್. ಸಭಾಂಗಣದಲ್ಲಿ ನಗೆಮುಗುಳು ಹಾಸ್ಯ ಮಾಸಪತ್ರಿಕೆ ಮತ್ತು ಪೂರಿಮಾ ಸಾಹಿತ್ಯ ಮಂದಿರ ಪುಸ್ತಕ ಪ್ರಕಾಶನ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸುತ್ತಿರುವ ಅಧ್ಯಯನ ಗೋಷ್ಠಿಯ 47 ನೇ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬದುಕುತ್ತಿರುವ ಪ್ರಜ್ಞಾವಂತ ನಾಗರಿಕರು ತಮ್ಮ ಸಿನಿಕತನವನ್ನು ಬಿಟ್ಟು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಮಾತ್ರ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಗತಿಪರ ಚಿಂತಕ ಕೆ. ದೊರೈರಾಜ್ ಅಭಿಪ್ರಾಯಪಟ್ಟರು.
ಧ್ವನಿಯೆತ್ತಬೇಕು: ಅಧಿಕಾರ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಗರಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಹೇರಳವಾಗಿ ಅನುದಾನವನ್ನು ವಿವಿಧ ಯೋಜನೆಗಳ ಮೂಲಕ ನೀಡುತ್ತಿವೆ. ಇಂತಹ ಅನುದಾನದ ಬಳಕೆಯಲ್ಲಾಗಿರುವ ಲೋಪದೋಷಗಳಿಂದ ಭ್ರಷ್ಟಾಚಾರ ಈ ವ್ಯವಸ್ಥೆಯಲ್ಲಿ ವ್ಯಾಪಿಸಿಕೊಂಡಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಜ್ಞಾವಂತ ನಾಗರಿಕರು ಧ್ವನಿಯೆತ್ತಬೇಕಾಗಿದೆ. ಇಲ್ಲವಾದರೆ ವ್ಯವಸ್ಥೆ ಸುಧಾರಣೆ ಸಾಧ್ಯವಿಲ್ಲ ಎಂದರು.
ಜಾಲ ರೂಪಿಸಿಲ್ಲ: ಮಳೆನೀರಿನ ಚರಂಡಿಗಳ ನೀರು ಸರಾಗವಾಗಿ ಹರಿದು ನಿರ್ದಿಷ್ಟ ಸ್ಥಳ ಸೇರುವ ವ್ಯವಸ್ಥೆಯೇ ಇಲ್ಲ. ಕುಡಿಯುವ ನೀರು ವಿತರಣೆಯ ಬಗ್ಗೆ ಸರಿಯಾದ ಜಾಲ ರೂಪಿಸಿಲ್ಲ. ಘನತ್ಯಾಜ್ಯ ಸಂಗ್ರಹ ವಿಲೇವಾರಿ ವ್ಯವಸ್ಥೆ ಅವೈಜ್ಞಾನಿಕವಾಗಿ ನಡೆಯುತ್ತಿದೆ. ತೆರಿಗೆ ಸಂಗ್ರಹ ವಿಧಾನವೂ ದೋಷಪೂರವಾಗಿದೆ. ಇಷ್ಟೆಲ್ಲಾ ಅವ್ಯವಸ್ಥೆಗಳಿರುವ ನಗರವನ್ನು ಸರಿಪಡಿಸುವುದು ಬಹು ದೊಡ್ಡ ಸವಾಲಾಗಿದೆ ಎಂದು ವಿವರಿಸಿದರು. ಎರಡನೆ ಹಂತದ ಹೇಮಾವತಿ ಕುಡಿಯುವ ನೀರಿನ ಯೋಜನೆಗಾಗಿ ನೀರು ಸಂಗ್ರಹಕ್ಕೆ ಹೆಬ್ಬಾಕ ಕೆರೆಯನ್ನು ಅಭಿವೃದ್ಧಿಪಡಿಸಿದ್ದು ಈ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೆರೆಯಲ್ಲಿ ನೀರು ನಿಲ್ಲದೆ ಯೋಜನೆ ವಿಫಲವಾಗುವ ಸ್ಥಿತಿಯಲ್ಲಿದೆ ಎಂಬ ಆತಂಕಕಾರಿ ವಿಷಯವನ್ನು ದೊರೈರಾಜ್ ತಿಳಿಸಿದರು.
ಕನಸು ಹೊಂದರಬೇಕು: ಪರಿಸರವಾದಿ ಟಿ.ವಿ.ಎನ್.ಮೂರ್ತಿ ಅವರು ಪ್ರತಿಯೊಬ್ಬ ಪ್ರಜೆಯು ತನ್ನ ನಗರದ ಅಭಿವೃದ್ಧಿ ಬಗ್ಗೆ ಕನಸು ಹೊಂದಿರಬೇಕು. ಮನೆಗಳಲ್ಲಿ ಉತ್ಪಾದನೆಗೊಳ್ಳುವ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ನಗರಾಡಳಿತದ ಜೊತೆಗೆ ನಾಗರಿಕರು ಸ್ಪಂದಿಸಬೇಕು ಎಂದರು.
ಅಧ್ಯಕ್ಷರು-ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಸಭಾ ನಡವಳಿಕೆ, ಪೌರಸಂಸ್ಥೆಗಳ ನಿಯಮಾವಳಿಗಳ ಬಗ್ಗೆ ತರಬೇತಿ ನೀಡುವ ವ್ಯವಸ್ಥೆ ಇದ್ದರೂ ಇದರ ಬಳಕೆ ಆಗುತ್ತಿಲ್ಲ. ಮುಂಬರುವ ಚುನಾಯಿತ ಪ್ರತಿನಿಧಿಗಳಿಗಾದರೂ ಇಂತಹ ತರಬೇತಿ ನೀಡಿ ಅವರು ಉಪಯುಕ್ತವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಸಲಹೆ ಮಾಡಿದರು.
ಸಿಪಿಐಎಂನ ಮುಖಂಡ 5ನೇ ವಾರ್ಡ್ ಅಭ್ಯರ್ಥಿ ಬಿ. ಉಮೇಶ್ ಅವರು ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಯುವ ಜನತೆ ಕೃಷಿ ಚಟುವಟಿಕೆಗಳ ಬಗ್ಗೆ ಆಲಸ್ಯ ಧೋರಣೆ ತೋರಿ ನಗರೀಕರಣಕ್ಕೆ ಮಾರುಹೋಗಿ ನಗರಗಳಿಗೆ ವಲಸೆ ಬಂದಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಕೇವಲ ವೃದ್ಧರು ಮಾತ್ರ ವಾಸಿಸುವಂತಾಗಿದೆ. ನಗರ ಪ್ರದೇಶ ಬೆಳೆದಂತೆ ಅದಕ್ಕೆ ಪೂರಕವಾದ ಸೌಲಭ್ಯಗಳನ್ನು ನೀಡುವಲ್ಲಿ ಆಡಳಿತ ವಿಫಲವಾಗಿದೆ. ಸ್ಥಳೀಯ ಸಂಪನ್ಮೂಲಗಳನ್ನು ಸದ್ಬಳಕೆಗೆ ಮಾಡಿಕೊಂಡು ಅಭಿವೃದ್ಧಿಗೆ ಹೆಚ್ಚು ಒತ್ತುಕೊಡಬೇಕೆಂದು ಕರೆ ನೀಡಿದರು.
ಸಂಯುಕ್ತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಜಿ.ಎಲ್.ರವಿ, ಹಿರಿಯ ಯೋಗತಜ್ಞ ಜಿ.ವಿ.ವಿ.ಶಾಸ್ತ್ರಿ, ಹಿರಿಯ ಪತ್ರಕರ್ತ ಎಚ್.ಎಸ್. ರಾಮಣ ಮಾತನಾಡಿದರು.
ನಂತರ ನಡೆದ ಸಂವಾದದಲ್ಲಿ ನಿವೃತ್ತ ಎಂಜಿನಿಯರ್ ಡಿ. ತಿಮ್ಮಪ್ಪ, ಚಿಂತಕ ಕೆ.ಪಿ. ಲಕ್ಷ್ಮೀಕಾಂತ ರಾಜೇ ಅರಸು, ಕಿರುತೆರೆ ನಟ ಎನ್.ಎಸ್. ರಮಾನಂದ ಮತ್ತಿತರರು ಮಾತನಾಡಿದರು. ಎಚ್.ಎಸ್. ರಾಮಣ ಮತ್ತು ಎಚ್.ಎಸ್.ಸಾವಿತ್ರಿ ರಾಮಣ ದಂಪತಿ ನೆನಪಿನ ಕಾಣಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

