ಅಭ್ಯರ್ಥಿಗಳಿಂದ ಗೆಲ್ಲಲು ಇನ್ನಿಲ್ಲದ ಯತ್ನ
ಕನ್ನಡಪ್ರಭ ವಾರ್ತೆ ಕುಣಿಗಲ್ ಮಾ.6
ಪುರಸಭೆ ಚುನಾವಣೆ ಮತದಾನದ ಮುನ್ನ ದಿನವಾದ ಬುಧವಾರದಂದು, ಬಹುತೇಕ ಅಭ್ಯರ್ಥಿಗಳು, ಅಂತಿಮ ಸುತ್ತಿನ ಪ್ರಚಾರದಲ್ಲಿ ತಮ್ಮ ಕುಟುಂಬ ಸದಸ್ಯರು, ಬಂಧು, ಬಾಂಧವರು, ಹಿತೈಷಿ, ಅಭಿಮಾನಿಗಳೊಂದಿಗೆ ಮತದಾರರ ಮನೆಬಾಗಿಲಿಗೆ ತೆರಳಿ ಮತದಾರ ಪ್ರಭುವಿನ ಓಲೈಕೆಗೆ ಎಲ್ಲಾ ಕಸರತ್ತುಗಳನ್ನು ನಡೆಸಿದ್ದಾರೆ. 23 ವಾರ್ಡ್ಗಳಲ್ಲೂ ಕುರುಡು ಕಾಂಚಣದ ನೃತ್ಯ ಎಲ್ಲೆ ಮೀರಿರುವುದು ವಿಶೇಷವಾಗಿದೆ.
ಬಹುತೇಕ ಅಭ್ಯರ್ಥಿಗಳು ಆಮಿಷ ನೀಡಿ ಮತದಾರ ಪ್ರಭುವಿನ ಓಲೈಕೆಗೆ ಮುಂದಾಗಿದ್ದು, ಪೊಲೀಸರ, ಚುನಾವಣಾಧಿಕಾರಿಗಳ ಕಣುತಪ್ಪಿಸಿ ವ್ಯವಸ್ಥಿತವಾಗಿ ಹಣ ಹಂಚುತ್ತಿದ್ದರೆ, ಪೊಲೀಸರು ಕೈಗೊಂಡ ಕಠಿಣ ಕ್ರಮದಿಂದಾಗಿ ದಾಬಾ, ಬಾರ್ಗಳಲ್ಲಿನ ಮದ್ಯ, ಬಾಡೂಟ ಸಮಾರಾಧಾನೆಗೆ ಕಡಿವಾಣ ಬಿದಿದೆ. ಇದಕ್ಕೆ ಬದಲಾಗಿ ಬಹುತೇಕ ವಾರ್ಡ್ಗಳಲ್ಲಿ ಅಭ್ಯರ್ಥಿಗಳು ಜಾಗೃತರಾಗಿ, 25 ಕೆಜೆ ಅಕ್ಕಿಯ ಚೀಲ, ಖರ್ಚಿಗೆ ಹಣ ಹಾಗೂ ಕೋಳಿಮಾಂಸದ ವಿತರಣೆಯನ್ನು ವ್ಯವಸ್ಥಿತವಾಗಿ ಮಾಡುವ ಮೂಲಕ ಮತದಾರರ ಪ್ರಭುವಿನ ಓಲೈಕೆಗೆ ಮುಂದಾಗಿದ್ದಾರೆ.
ಆಣೆ, ಪ್ರಮಾಣ: ಕೆಲ ವಾರ್ಡ್ಗಳಲ್ಲಿ ಮಹಿಳಾ ಮತದಾರರನ್ನು ಸೆಳೆಯಲು, ಕೆಲವರು ಬೆಳ್ಳಿಯ ಅರಿಷಿಣ, ಕುಂಕುಮ ಬಟ್ಟಲುಗಳಲ್ಲಿ ಮಂಗಳದ್ರವ್ಯ ತುಂಬಿ ಅವುಗಳನ್ನು ದೇವರ ಮುಂದಿಟ್ಟ, ಆಲ್ಲಿಯೆ ಆಣೆ ಪ್ರಮಾಣದ ಮೂಲಕ ಮತ ಸೆಳೆಯುವ ಯತ್ನದಲ್ಲಿ ತೊಡಗಿದ್ದರೆ, ಇನ್ನು ಕೆಲ ವಾರ್ಡ್ಗಳಲ್ಲಿ ಬೆಳ್ಳಿಯ ದೀಪಗಳನ್ನು ದೇವರ ಮುಂದಿಟ್ಟು ಮತದಾರರ ಓಲೈಸುವ ತಂತ್ರಕ್ಕೆ ಶರಣಾಗಿದ್ದಾರೆ. ಬಹುತೇಕ ಕಡೆಗಳಲ್ಲಿ ನೇರವಾಗಿ ನಗದು ಹಣ ನೀಡುವ ಮೂಲಕ ಮತದಾರರನ್ನು ಸೆಳೆಯುವ ತಂತ್ರಕ್ಕೆ ಮುಂದಾಗಿ ದ್ದಾರೆ.
ಬಹುಮತ ಕಷ್ಟ: ಜೆಡಿಎಸ್ ಎರಡು ಹೋಳಾಗಿರುವುದರಿಂದ, ಇದರ ಲಾಭವನ್ನು ಕಾಂಗ್ರೆಸ್, ಬಿಜೆಪಿ ಸಮರ್ಥವಾಗಿ ಪಡೆಯುವಲ್ಲಿ ವಿಫಲವಾಗಿರುವುದರಿಂದ ಪ್ರಸಕ್ತ ಚುನಾವಣೆಗಳಲ್ಲಿ ಯಾವುದೇ ಪಕ್ಷ ಬಹುಮತ ಹೊಂದುವ ಲಕ್ಷಣಗಳು ಕಂಡು ಬಾರದೆ, ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ. ಕಾಂಗ್ರೆಸ್ - ಜೆಡಿಎಸ್ ನಡುವೆ 2, 7 ನೇ ವಾರ್ಡ್ನಲ್ಲಿ ನೇರ ಹಣಾಹಣಿ ನಡೆದರೆ, ಕಾಂಗ್ರೆಸ್- ಜೆಡಿಎಸ್-ಜೆಡಿಎಸ್ ಬಂಡಾಯ ಅಭ್ಯರ್ಥಿಗಳ ನಡುವೆ - 1,10,17,18,20,23ನೇ ವಾರ್ಡ್ಗಳಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್- ಬಿಜೆಪಿ- ಜೆಡಿಎಸ್- ಜೆಡಿಎಸ್ ಬಂಡಾಯ ನಡುವೆ-3,6,8,11,13,16,21,22,15ನೇ ವಾರ್ಡ್ನಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಕೆಲವೆಡೆಗಳಲ್ಲಿ ಪಕ್ಷೇತರರು ಸಹ ಪ್ರಮುಖ ಪಕ್ಷಗಳಿಗೆ ಸ್ಪರ್ಧೆ ನೀಡುತ್ತಿದ್ದು 4ನೇ ವಾರ್ಡ್ನಲ್ಲಿ ಪಕ್ಷೇತರ-ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗೆ, 5, 9ನೇ ವಾರ್ಡ್ ಹಾಗೂ12ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸ್ಪರ್ಧೆ ಒಡ್ಡಿದ್ದರೆ, 19ನೇ ವಾರ್ಡ್ನಲ್ಲಿ - ಕಾಂಗ್ರೆಸ್- ಬಿಜೆಪಿ-ಜೆಡಿಎಸ್- ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು ಮತಗಳು ಛಿದ್ರಗೊಂಡು ಯಾವುದೇ ಅಭ್ಯರ್ಥಿ ವಿಜಯಿಯಾದರು ವಿಜಯದ ಅಂತರ ಕಡಿಮೆಯಾಗಲಿದೆ.
ಒಟ್ಟಾರೆಯಾಗಿ ಪ್ರಸಕ್ತ ಚುನಾವಣೆಗಳಲ್ಲಿ ಕಾಂಗ್ರೆಸ್ ತನ್ನ ಸ್ಥಾನ ಸುಧಾರಿಸುವತ್ತ ಸಾಗಿದರೆ, ಜೆಡಿಎಸ್ ಕಳೆದುಕೊಳ್ಳುವ ಭೀತಿ ಎದುರಾಗಿ, ಬಂಡಾಯ ಜೆಡಿಎಸ್ ಅಭ್ಯರ್ಥಿಗಳು ಸಹ ಗೆಲ್ಲುವ ಸಾಧ್ಯತೆಇದ್ದು, ಬಿಜೆಪಿ ಸಹ ಇಷ್ಟೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

