ತುಮಕೂರು

ನಗರಸಭೆ ಚುನಾವಣೆಯಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳಿ

Published On :

ಕನ್ನಡಪ್ರಭ ವಾರ್ತೆ  ಶಿರಾ  ಮಾ.6
ಇಲ್ಲಿನ ನಗರಸಭೆ ಚುನಾವಣೆಯಲ್ಲಿ ಕ್ರಿಯಾಶೀಲರಾಗಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಅವರು ಮತದಾರರಿಗೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಟಿ.ಬಿ.ಜಯಚಂದ್ರ ಅವರು ಹಿಂದಿನ 5 ವರ್ಷಗಳ ಆಡಳಿತದ ನಗರಸಭೆ ಅಧಿಕಾರಾವಧಿ ಮುಗಿದು ಹೊಸ ಚುನಾವಣೆ ಈಗ ನಡೆಯುತ್ತಿದೆ. ಹಿಂದಿನ 5 ವರ್ಷಗಳ ಹಿಂದೆ ಇದ್ದ ಶಿರಾ ಚಿತ್ರಣ ಈಗ ಏನು ಬದಲಾವಣೆ ಆಗಿದೆ ಎಂದು ಜನತೆ ಅರಿಯಲಿ, ಇಡೀ ತಾಲೂಕನ್ನು ಅಭಿವೃದ್ಧಿಯತ್ತ ಸಾಗಿಸುವಲ್ಲಿ ಶ್ರಮಿಸಿದ್ದೇನೆ. ಈಗ ಪಟ್ಟಣದಲ್ಲಿ ಕೈಗೊಂಡಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಮುಗಿದರೆ ಶಿರಾ ಪಟ್ಟಣದ ಚರಿತ್ರೆಯೆ ಬದಲಾಗುತ್ತದೆ ಎಂದರು.
ನಾನು ಕಳೆದ 3 ದಿನಗಳಿಂದ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಮಾತನಾಡಿಸಿದ್ದೇನೆ. ಅವರೆಲ್ಲ ಇಂತಹ ಬರಗಾಲದಲ್ಲೂ ನೀರಿನ ಸಮೃದ್ಧಿ ಅನುಭವಿಸುತ್ತಿದ್ದು ಶಿರಾ ಪಟ್ಟಣದ ನೀರಿನ ಸೌಲಭ್ಯ ಇರುವಂತೆ ಬೆಂಗಳೂರಿನಲ್ಲೂ ನೋಡಲು ಸಾಧ್ಯವಿಲ್ಲ ಎಂದರು.
ಹಿಂದಿನ ಮೂವರು ನಗರಸಭೆ ಅಧ್ಯಕ್ಷರು ಯಾವ ರೀತಿ ನಗರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸ್ಪಂದಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಶಿರಾ ನಗರದಲ್ಲಿ ಯಾವತ್ತೂ ಕೈಗೊಳ್ಳದ ಕಾಮಗಾರಿಗಳು ನಡೆದಿವೆ. ಸರ್ವೆ ನಂ. 5 ಮತ್ತು 6 ರಲ್ಲಿ ಮತ್ತು ಇತರ ಕಡೆ 3800 ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ಕೊಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಸಚಿವ ಸಂಪುಟದಲ್ಲಿ ಈ ಸಂಬಂಧವಾಗಿ ತೀರ್ಮಾನವಾಗಿದೆ. ಈ ಕಾರ್ಯವನ್ನು ಯಾರು ಮಾಡಿದ್ದರು ಎಂದು ಪ್ರಶ್ನಿಸಿದರು.
ನಿವೇಶನ: ನಗರಸಭೆ ಕೆಲ ವರ್ಗದವರಿಗೆ ಸಮುದಾಯ ಭವನ ನಿರ್ಮಿಸಲು ಜಾಗ ಕೊಡಕೂಡದು ಎಂಬ ಠರಾವು ಮಾಡಿತ್ತು. ಸಾಮಾಜಿಕ ನ್ಯಾಯ ಕಾಪಾಡುವಲ್ಲಿ 15 ಕ್ಕೂ ಹೆಚ್ಚು ವಿವಿಧ ವರ್ಗದ ಸಮುದಾಯಗಳಿಗೆ ಭವನ ನಿರ್ಮಿಸಲು ನಿವೇಶನ ನೀಡಿದ್ದೇನೆ ಎಂದರು.
ಈ ಭಾರಿ ನಗರಸಭೆಯ 31 ವಾರ್ಡ್‌ಗಳಲ್ಲಿ 12 ಮುಸ್ಲಿಮರಿಗೆ, 4 ಕುರುಬ ಸಮುದಾಯದವರಿಗೆ, ಬಲಜಿಗರಿಗೆ, ಪರಿಶಿಷ್ಟ ಜಾತಿಗೆ 5, ಪರಿಶಿಷ್ಟ ಪಂಗಡಕ್ಕೆ 1, ಗೊಲ್ಲ ಜನಾಂಗಕ್ಕೆ 1, ವೈಶ್ಯರಿಗೆ 1 ಮತ್ತು ಇತರೆ ವರ್ಗದವರಿಗೂ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಾನು ಇಡೀ ಶಿರಾ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿ ರೂಪಿಸುವ ಪಣ ತೊಟ್ಟಿದ್ದು ಇದಕ್ಕಾಗಿ ಒಳ್ಳೆಯ ಕ್ರಿಯಾಶೀಲ ನಗರಸಭೆ ಆಡಳಿತ ಅಸ್ತಿತ್ವಕ್ಕೆ ತರಬೇಕೆಂದು ಮತದಾರರಿಗೆ ಕರೆ ನೀಡಿದರು.
ಗಾಯಿತ್ರಿ ಜಲಾಶಯ: ಹಿಂದಿನ ಸಚಿವರು ಗಾಯಿತ್ರಿ ಜಲಾಶಯದಿಂದ ನೀರು ತರುವ ಯೋಜನೆ ಹಾಕಿಕೊಂಡಿದ್ದರು. ಈ ಯೋಜನೆಯನ್ನೇನಾದರೂ ಚಾಲನೆ ನೀಡಿದ್ದರೆ ಜನ ಯಾವ ರೀತಿ ಎಷ್ಟು ದಿನ ನೀರು ಕುಡಿಯುತ್ತಿದ್ದರು ಎಂದು ಪ್ರಶ್ನಿಸಿದ ಟಿ.ಬಿ.ಯಜಯಚಂದ್ರ  ಶಿರಾಕ್ಕೆ ಗಾಯಿತ್ರಿ ಜಲಾಶಯವೆ ನೀರಿನ ಮೂಲವಾಗಿದ್ದರೆ ಈಗಿನ ಶಿರಾ ಪಟ್ಟಣದ ವೈಭವ ಇರುತ್ತಿತ್ತೆ ಎಂದರು.   ಮಾಜಿ ಸಚಿವ ಬಿ.ಸತ್ಯನಾರಾಯಣ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಚಾಂದ್ ಪಾಷ ಅವರನ್ನು ನಾಯಕರೆ ಅಲ್ಲ ಎಂದು ಹೇಳಿದ್ದಾರೆ. ಅವರು ಜಾಮೀಯಾ ಮಸೀದಿ ಅಧ್ಯಕ್ಷರೂ ಹೌದು. ಬಿ.ಸತ್ಯನಾರಾಯಣ ಅವರು ಶಾಸಕರಾಗಲು ಚಾಂದ್ ಪಾಷ ಅವರೂ ಕಾರಣ ಎಂಬುದನ್ನು ಮರೆತಿದ್ದಾರೆ. ಇಂತಹವರನ್ನು ಬಿ.ಸತ್ಯನಾರಾಯಣ ಅವರು ಟೀಕೆ ಮಾಡುವುದು ಸರಿಯಲ್ಲ. ಶಿರಾ ನಗರಸಭೆ ಚುನಾವಣೆಯಲ್ಲಿ ನಾಲ್ಕೈದು ವಾರ್ಡ್‌ಗಳಲ್ಲಿ ಜೆಡಿಎಸ್ ಗೆದ್ದು ತಮ್ಮ ಶಕ್ತಿ ತೋರಿಸಲಿ. ಕಾಂಗ್ರೆಸ್ 20 ಕ್ಕೂ ಹೆಚ್ಚು ವಾರ್ಡ್‌ಗಳನ್ನು ತನ್ನದಾಗಿಸಿಕೊಳ್ಳುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಲ್.ಎ. ಕೆ.ಪ್ಯಾರು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಕೆ. ದಾಸಪ್ಪ, ಎ.ಪಿ.ಎಂ.ಸಿ. ಅಧ್ಯಕ್ಷ ಶಶಿಧರ ಗೌಡ, ಕೆಪಿಸಿಸಿ ಸದಸ್ಯ ಸಂತೋಷ್ ಜಯಚಂದ್ರ, ಜನಾರ್ದನ, ಡಿ.ಸಿ.ಅಶೋಕ್, ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್, ಬರಗೂರು ನಟರಾಜ್, ಎಸ್.ಎನ್.ಕೃಷಯ್ಯ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.