ತುಮಕೂರು

ಹಣ ಕೊಡದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿ!

Published On :

ಕನ್ನಡಪ್ರಭ ವಾರ್ತೆ ್ಣ ತುಮಕೂರು ್ಣ ಮಾ.12
ನಗರದ ಖಾಸಗಿ ಬಸ್ ನಿಲ್ದಾಣದ ಅಂಗಡಿ ಮಳಿಗೆ ಪಡೆಯಲು ಕಟ್ಟಿದ್ದ ಹಣ ವಾಪಾಸ್ ಮಾಡದೇ ಇದ್ದರೆ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸುವ ಎಚ್ಚರಿಕೆಯನ್ನು ನಗರದ ಖಾಸಗಿ ಬಸ್ ನಿಲ್ದಾಣದ ಅಂಗಡಿ ಮಾಲೀಕರ ಸಂಘ ನೀಡಿದೆ.
2006ರ ಫೆಬ್ರವರಿ 4 ರಂದು ಹಳೆ ಖಾಸಗಿ ಬಸ್ ನಿಲ್ದಾಣ ತೆರವುಗೊಳಿಸಲಾಯಿತು. 14 ರಂದು ಅಂದಿನ ಜಿಲ್ಲಾಧಿಕಾರಿ ಉಮಾಶಂಕರ್ ಜಿಲ್ಲೆಯ ಐಡಿಎಸ್‌ಎಂಟಿ ಸಮಿತಿ ಸಭೆ ಕರೆದು, ಅದೇ ಜಾಗದಲ್ಲಿ ಹೊಸ ಬಸ್ ನಿಲ್ದಾಣ ಮತ್ತು ವಾಣಿಜ್ಯ ಮಳಿಗೆ ನಿರ್ಮಿಸಿ ಹಿಂದೆ ಇದ್ದ ವ್ಯಾಪಾರಸ್ಥರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶ ಹೊಂದಿದ್ದರು.
ಆ ಸಭೆಯಲ್ಲಿ ಹಾಜರಿದ್ದ ಶಾಸಕರು, ಸಂಸತ್ ಸದಸ್ಯರು, ನಗರಸಭೆ ಅಧ್ಯಕ್ಷರು, ವಿವಿಧ ಪಕ್ಷಗಳ ಮುಖಂಡರು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಮತ್ತು ಅಂಗಡಿಗಳನ್ನು ಕಳೆದುಕೊಂಡಿದ್ದ ವರ್ತಕರು ಈ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ್ದರು.
ಈ ನಿರ್ಣಯದಂತೆ 2006 ರ ಮೇ 5 ರಂದು ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಗರದ ಅಶೋಕ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಖಾತೆ ತೆರೆಯಲಾಯಿತು. ಹಿಂದೆ ಇದ್ದ 100 ಕ್ಕೂ ಹೆಚ್ಚು ವರ್ತಕರು ಈ ಖಾತೆಗೆ ಅಂಗಡಿ ಮಳಿಗೆ ಪಡೆಯಲು ಜಿಲ್ಲಾ ಐಡಿಎಸ್‌ಎಂಟಿ ಸಭೆ ಸೂಚಿಸಿದ್ದ ಹಣದಲ್ಲಿ ಶೇ. 25 ರಷ್ಟು ಅಂದರೆ, ಚಿಕ್ಕ ಅಂಗಡಿಗಳಿಗೆ 75 ಸಾವಿರ, ದೊಡ್ಡ ಅಂಗಡಿಗಳಿಗೆ 87,500 ರು. ಹಣ ಜಮಾ ಮಾಡಿದರು.
ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಿ 2009 ರಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಯಿತು. ಆದರೆ ಸರ್ಕಾರದ ಅನುಮೋದನೆ ದೊರೆಯದ ಕಾರಣ ಹಣ ಕಟ್ಟಿದ ವರ್ತಕರಿಗೆ ಮಳಿಗೆ ಸಿಗಲಿಲ್ಲ. 5 ವರ್ಷದ ನಂತರ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಹೈಕೋರ್ಟ್ ತೀರ್ಪಿನ ಪ್ರಕಾರ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ.
ಹಿಂದೆ ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ವರ್ತಕರು ತುಂಬಾ ಬಡವರಾಗಿದ್ದು, ಇವತ್ತಿಗೂ ಜೀವನಕ್ಕೆ ಪರದಾಡುತ್ತಿದ್ದಾರೆ. 8-10 ಜನ ಸಾವಿಗೀಡಾಗಿದ್ದು ಉಳಿದವರು ಸಾಂಸಾರಿಕ ಜವಾಬ್ದಾರಿಗಳಿಂದ ತುಂಬಾ ನೊಂದಿದ್ದಾರೆ. ಅಂಗಡಿ ಮಳಿಗೆ ಪಡೆಯಲು ಸಾಲ ಮಾಡಿ ಬ್ಯಾಂಕಿಗೆ ಹಣ ಕಟ್ಟಿ ಅದಕ್ಕೆ ಬಡ್‌ಡಿ ಕಟ್ಟುತ್ತಿದ್ದಾರೆ. ಈಗ ಅಂಗಡಿಯೂ ಸಿಗದೇ ಕಟ್ಟಿದ ಹಣವೂ ಸಿಗದೆ ಮಾನಸಿಕ ಒತ್ತಡದಲ್ಲಿದ್ದಾರೆ ಎನ್ನುತ್ತಾರೆ ತುಮಕೂರು ನಗರದ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳ ಮಾಲಿಕರ ಸಂಘದ ಅಧ್ಯಕ್ಷ ಫಯಾಜ್ ಉಲ್ಲಾಖಾನ್ ಹಾಗೂ ಕಾರ್ಯದರ್ಶಿ ಎನ್.ಎಸ್.ಪಂಡಿತ್ ಜವಹರ್ ಅವರು.
ಅಂಗಡಿ ಪಡೆಯಲು ಬ್ಯಾಂಕಿಗೆ ಜಮಾ ಮಾಡಿದ್ದ ಹಣಕ್ಕೆ ಶೇ. 18 ರಂತೆ ಬಡ್‌ಡಿ ಸೇರಿಸಿ ಹಣ ಕಟ್ಟಿದವರಿಗೆ ವಾಪಾಸ್ ಕೊಡಬೇಕೆಂದು ರಾಜ್ಯದ ಉಚ್ಛ ನ್ಯಾಯಾಲಯ ಆದೇಶಿಸಿದೆ. ಕೋರ್ಟ್ ತೀರ್ಪಿನಂತೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಹಣ ವಾಪಾಸ್ ಮಾಡುವಂತೆ ವಿನಂತಿಸಿದ್ದೆವು. ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ.
ಈಗಾಗಲೇ 3 ತಿಂಗಳಲ್ಲಿ 25 ಬಾರಿ ಪೌರಾಯುಕ್ತರನ್ನು ಭೇಟಿ ಮಾಡಿ ಹಣ ಮರುಪಾವತಿಸುವಂತೆ ವಿನಂತಿಸಿದ್ದವು. ಆದರೆ ಅಧಿಕಾರಿಗಳು ಉದಾಸೀನ ಮನೋಭಾವ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಅಂಗಡಿ ಮಳಿಗೆಗೆ ಹಣ ಕಟ್ಟಿರುವವರು ಬಹಳಷ್ಟು ಮಂದಿ ದಲಿತರು, ಅಲ್ಪಸಂಖ್ಯಾತರಾಗಿದ್ದು ಆರ್ಥಿಕವಾಗಿ ತುಂಬಾ ದುರ್ಬಲರಾಗಿದ್ದಾರೆ. ಜೀವನ ನಡೆಸಲು ತುಂಬಾ ಪರದಾಡುತ್ತಿದ್ದಾರೆ. ಹೀಗಾಗಿ ಹಣ ಮರುಪಾವತಿಸುವಂತೆ ಅವರು ಕೋರಿದ್ದಾರೆ.
ಕಳೆದ 7 ವರ್ಷಗಳಿಂದ ನಾವು ಪಡುತ್ತಿರುವ ಕಷ್ಟ, ಅನುಭವಿಸುತ್ತಿರುವ ನೋವಿನ ಬಗ್ಗೆ ಅಧಿಕಾರಿಗಳಿಗೆ ಸಹಾನುಭೂತಿ ಅಲ್ಲವಾಗಿದೆ ಎಂದು ಆರೋಪಿಸಿದ್ದಾರೆ. 94 ಅಂಗಡಿಗಳ ಹರಾಜಿನಿಂದ ಮುಂಗಡ ಹಣವಾಗಿ 6 ಕೋಟಿ ನಗರಸಭೆಗೆ ಬಂದಿದೆ. ನಾವು ಮಾಜಿ ಗುತ್ತಿಗೆದಾರರು ಅಂಗಡಿ ಪಡೆಯಲು ಕೆನರಾ ಬ್ಯಾಂಕಿಗೆ ಕಟ್ಟಿದ ಮುಂಗಡ ಹಣ 1 ಕೋಟಿಯಲ್ಲಿ 55 ಲಕ್ಷ ಕಾಮಗಾರಿಗೆ ಉಪಯೋಗಿಸಿ 45 ಲಕ್ಷ ಉಳಿದಿದೆ. ಒಟ್ಟು 6.5 ಕೋಟಿ ಹಣದಲ್ಲಿ ಕೋರ್ಟ್ ಆದೇಶದಂತೆ ಅಂಗಡಿ ಮಳಿಗೆ ಪಡೆಯಲು ಹಣ ಕಟ್ಟಿದ್ದ ಮಾಜಿ ಗುತ್ತಿಗೆದಾರರ ಹಣವನ್ನು ಸುಲಭವಾಗಿ ಮರುಪಾವತಿಸಬಹುದಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.