ತಪೋಕ್ಷೇತ್ರ ಕಗ್ಗೆರೆಯಲ್ಲಿ ಇಂದು ಮಹಾರಥೋತ್ಸವ
ಕ.ಪ್ರ. ವಾರ್ತೆ ಕುಣಿಗಲ್ ಮಾ.17
ಕ್ರಾಂತಿ ಯೋಗಿ ಬಸವಣ್ಣನವರ ಕಾಲಾನಂತರ, ವಚನಸಾಹಿತ್ಯವನ್ನು ಉತ್ತುಂಗಕ್ಕೇರಿಸಿ, ಜನಸಾಮಾನ್ಯರಿಗೂ ತಲುಪುವಂತೆ ಮಾಡಿದ ತೋಂಟದ ಸಿದ್ದಲಿಂಗೇಶ್ವರ ಯತಿಗಳು, ಸತತ 14 ವರ್ಷಗಳ ಕಾಲ ತಪಸ್ಸು ಮಾಡಿದ ತಪೋಕ್ಷೇತ್ರವಾದ ಕಗ್ಗೆರೆಯಲ್ಲಿ ಇದೇ 18ರಂದು ಮಹಾರಥೋತ್ಸವ ನಡೆಯಲಿದೆ.
16 ನೇ ಶತಮಾನದಲ್ಲಿ ವಚನಸಾಹಿತ್ಯವನ್ನು ಮತ್ತಷ್ಟು ಖ್ಯಾತಿಗೊಳಿಸಿ, ಧರ್ಮಸಂಸ್ಥಾಪನೆಗೆ ಹಲವು ಪವಾಡಗಳನ್ನು ಸೃಷ್ಟಿಸಿದ ಸಿದ್ದಲಿಂಗಯತಿಗಳು, ಸುಮಾರು ಐದುನೂರಾಐವತ್ತು ವರ್ಷಗಳ ಹಿಂದೆ ನಾಗಿನಿನದಿ ದಡದಲ್ಲಿರುವ, ಇಂದಿನ ಕಗ್ಗೆರೆ ಗ್ರಾಮದ ಮೂಲಕ ತಮ್ಮ ಶಿಷ್ಯರಾದ 101ವಿರಕ್ತರೊಂದಿಗೆ ಪರ್ಯಟನೆ ಕೈಗೊಂಡ ಸಂದರ್ಭದಲ್ಲಿ, ಗ್ರಾಮದ ಮುಖಂಡ ನಂಬಿಯಣ್ಣ ದಂಪತಿಗಳು ಭಿನ್ನಹ ( ಊಟಕ್ಕೆ)ಕ್ಕೆ ಮನವಿ ಮಾಡಿ, ತಾವು ಬರುವವರೆಗೂ ಇಲ್ಲಿಯೇ ಇರುವಂತೆ ಕೋರಿಕೊಂಡ ಮೇರೆಗೆ ಯತಿಗಳು ಅಲ್ಲಿಯೇ ಇರುವ ತೋಟದಲ್ಲಿ ಧ್ಯಾನಾಸಕ್ತರಾದರು ಎಂಬ ಐತಿಹ್ಯವಿದೆ.
ನಂಬಿಯಣ್ಣನ ಪತ್ನಿ ಅಡುಗೆ ಸಿದ್ಧಪಡಿಸಿ ಯತಿಗಳನ್ನು ಆಹ್ವಾನಿಸಲು ಮುಂದಾದಾಗ, ಮತ್ತೊಂದು ಗ್ರಾಮದ ಕೆಂಚೊಡ್ಡರೆಂಬ ಜನಾಂಗದವರು, ಗ್ರಾಮದ ಮೇಲೆ ದಾಳಿ ನಡೆಸಿದರು. ನಂಬಿಯಣ್ಣನ ಪತ್ನಿ ಸಿದ್ಧಪಡಿಸಿದ ಊಟವನ್ನು ಹಗೇವಿನಲ್ಲಿ ಬಚ್ಚಿಟ್ಟಳು, ಕೆಲ ತಿಂಗಳ ಕಾಲ ಕಾದಾಟ, ಹೊಡೆದಾಟದ ನಡೆದ ನಂತರ, ಎರಡೂ ಗ್ರಾಮದ ನಡುವೆ ಶಾಂತಿ ಏರ್ಪಟ್ಟು, ನಂಬಿಯಣ್ಣ ದಂಪತಿಗಳು ತೋಟದ ಮಾರ್ಗವಾಗಿ ಹಾದುಹೋಗುವಾಗ ಹುತ್ತದಿಂದ ಪಂಚಾಕ್ಷರಿ ಮಂತ್ರ ಕೇಳಿ, ತಾವು ಸಿದ್ದಲಿಂಗಯತಿಗಳಿಗೆ ನೀಡಿದ ಭಿನ್ನಹದ ನೆನಪಾಯಿತು.
ಹುತ್ತದಲ್ಲಿರುವವರು ಸಿದ್ದಲಿಂಗಯತಿಗಳೇ ಎಂದು ತಿಳಿದು, ಫಾಲ್ಗುಣ ಶುದ್ಧ ಸಪ್ತಮಿಯಂದು, ಎಪ್ಪತ್ತು ಕೊಡಗಳ ಮೂಲಕ ಹುತ್ತವನ್ನು ಕರಗಿಸಿ, ತಮ್ಮಿಂದಾದ ತಪ್ಪಿಗೆ, ಯತಿಗಳಲ್ಲಿ ಕ್ಷಮೆ ಕೋರಿದ ನಂಬಿಯಣ್ಣ, ಪತ್ನಿಗೆ ಅಡುಗೆಗೆ ಸಿದ್ಧಮಾಡಲು ಹೇಳಿದಾಗ, ಯತಿಗಳು ಅಂದು ಮಾಡಿದ ಅಡುಗೆಯನ್ನು ಕೊಡುವಂತೆ ಸೂಚಿಸಿದರು. ನಂಬಿಯಣ್ಣನ ಪತ್ನಿ ಹಗೇವಿನಲ್ಲಿದ್ದ ಅಡುಗೆ ನೋಡಿದಾಗ ಆಗತಾನೆ ಮಾಡಿದ್ದಂತೆ ಇದ್ದುದು ಶ್ರೀಗಳ ಪವಾಡವೆಂದು ನಂಬಿದರು. ಕಗ್ಗೆರೆ ಗ್ರಾಮಸ್ಥರು ಯತಿಗಳ ಪವಾಡ ಕಂಡು ಯತಿಗಳನ್ನು ಗೌರವಾದರಗಳಿಂದ ಆದರಿಸಿದರು.
ರಥೋತ್ಸವ: ನಂಬಿಯಣ್ಣ ದಂಪತಿಗಳು ಹುತ್ತದ ಮೇಲೆ ಹಾಲು ಸುರಿದು ಕರಗಿಸಿ ಸಿದ್ದಲಿಂಗ ಯತಿಗಳನ್ನು ಹೊರಬರುವಂತೆ ಮಾಡಿದ ಅಮೃತಘಳಿಗೆಯಲ್ಲೆ ಇಂದಿಗೂ ಸಹ ರಥೋತ್ಸವ ನೆರವೇರುತ್ತಿದ್ದು, ಯಡೆಯೂರು ಸಿದ್ದಲಿಂಗೇಶ್ವರ ಎಂದರೆ ಹುತ್ತದಲ್ಲಿ ಧ್ಯಾನಾಸಕ್ತರಾಗಿರುವ ಯತಿಗಳ ಭಾವಚಿತ್ರ ಸೃಷ್ಟಿಯಾಗಿದ್ದು, ಪವಿತ್ರ ತಪೋಕ್ಷೇತ್ರವಾದ ಕಗ್ಗೆರೆಯಲ್ಲಿ ಎಂಬುದು ದನರ ನಂಬಿಕೆ.
ಮಲತಾಯಿ ಧೋರಣೆ: ಆದರೆ ಸಿದ್ದಲಿಂಗೇಶ್ವರರು ಜೀವಂತ ಸಮಾಧಿಯಾದ ಯಡೆಯೂರು ಅಭಿವೃದ್ಧಿಗೆ 45ಕೋಟಿ ರು.ಗಳ ವೆಚ್ಚದಲ್ಲಿ ಸರ್ಕಾರ ಗಮನ ಹರಿಸುತ್ತಿದ್ದು, ಶ್ರೀಗಳ ತಪೋಕ್ಷೇತ್ರವಾದ ಕಗ್ಗೆರೆ ಕ್ಷೇತ್ರದ ಕಡೆಗೆ, ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು, ದೇವಾಲಯದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೂ ಸೂಕ್ತ ವೇತನ ಸೌಲಭ್ಯ ಇಲ್ಲದೆ ನಿರ್ಲಕ್ಷ್ಯವಹಿಸುತ್ತಿರುವ ಬಗ್ಗೆ ಸ್ಥಳೀಯರು ಹಾಗೂ ದೇವಾಲಯದ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ನಡುವೆಯು ಹಚ್ಚಹಸಿರಿನ ವಾತಾವರಣದಲ್ಲಿರುವ ಕಗ್ಗೆರೆ ಕ್ಷೇತ್ರಕ್ಕೆ ವಾರ್ಷಿಕ ಲಕ್ಷಾಂತರ ಭಕ್ತರು ಬಂದುಹೋಗುತ್ತಿದ್ದು, ಸರ್ಕಾರ ಮತ್ತಷ್ಟು ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿಗೊಳಿಸುವ ಮೂಲಕ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಮತ್ತಷ್ಟು ಸೌಕರ್ಯ ಕಲ್ಪಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

