ತುಮಕೂರು

ಮುಗಿಯೋ ಹಂತಕ್ಕೆ ಬಂತು ಮೇಲ್ಸೇತುವೆ

Published On :

 ಉಗಮ ಶ್ರೀನಿವಾಸ್
ಕ.ಪ್ರ. ವಾರ್ತೆ   ತುಮಕೂರು   ಮಾ.17
ಈಗ ಇದು ಅಧಿಕೃತ. ಮಹತ್ವಾಕಾಂಕ್ಷಿ ಉಪ್ಪಾರಹಳ್ಳಿ ರೇಲ್ವೆ ಮೇಲ್ಸೇತುವೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ವಾರದೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ.
ಚುನಾವಣಾ ನೀತಿ ಸಂಹಿತೆ ಅಡ್ಡಿ ಬರದೇ ಇದ್ದರೆ ಇನ್ನೊಂದು ವಾರದಲ್ಲಿ ಮೇಲ್ಸೇತುವೆ ಮೇಲೆ ವಾಹನಗಳು ಓಡಾಡಲಿವೆ. ಈ ಮೂಲಕ ದಶಕಗಳಿಗೆ ಹೆಚ್ಚಿನ ಮಹತ್ವಾಕಾಂಕ್ಷಿ ಯೋಜನೆ ಕಡೆಗೂ ಸಾರ್ವಜನಿಕರ ಸೇವೆಗೆ ಲಭ್ಯವಾದಂತಾಗಲಿದೆ.
40 ಕೋಟಿ ವೆಚ್ಚ: ಆರಂಭದಲ್ಲಿ 3 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ ಒತ್ತುವರಿ ತೆರವು, ನ್ಯಾಯಾಲಯ ಮುಂತಾದ ಕಾರಣದಿಂದ ಈ ಯೋಜನೆ ಮುಂದಕ್ಕೆ ಹೋಗುತ್ತಲೇ ಬಂತು. ಕಡೆಗೂ ಗಜಗರ್ಭದಂತೆ ಭರ್ತಿ 40 ಕೋಟಿ ರು. ವೆಚ್ಚ ಈ ಯೋಜನೆಗೆ ತಗುಲಿದೆ.
10 ವರ್ಷದಿಂದ ಕಾಮಗಾರಿ: ತುಮಕೂರು ನಗರದ ದಿನೇ ದಿನೇ ಬೆಳೆಯುತ್ತಿದ್ದನ್ನು ಮನಗಂಡು ಈ ಯೋಜನೆಗೆ ಅನುಮೋದನೆ ತೆಗೆದುಕೊಳ್ಳಲಾಯಿತು. ಆರಂಭದಿಂದಲೂ ಹತ್ತು ಹಲವಾರು ವಿಘ್ನಗಳನ್ನು ಹೊತ್ತು ಕಂಡೇ ಈ ಯೋಜನೆ ತೆವಳುತ್ತಾ ಸಾಗಿತು. ಕಡೆ ಕಡೆಗೆ ಸ್ಥಳೀಯ ಶಾಸಕರೇ ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ಮಾಡುವಂತಹ ಪರಿಸ್ಥಿತಿ ಲಭ್ಯವಾಯಿತು. ಈಗ ಬಹುತೇಕ ಕಾಮಗಾರಿ ಮುಗಿದಿದೆ. ವಾರದೊಳಗೆ ವಾಹನಗಳನ್ನು ಬಿಡುವ ಯೋಚನೆ ಇದೆ.
ಟಾರ್ ಹಾಕ್ತಾ ಇದ್ದಾರೆ: ಸರಿ ಸುಮಾರು ಮಾ. 24 ರೊಳಗೆ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದ್ದು ಅಷ್ಟರೊಳಗೆ ಸಂಚಾರಕ್ಕೆ ಈ ಯೋಜನೆ ಮುಕ್ತಗೊಳಿಸುವ ಇರಾದೆ ಹೊಂದಲಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಯವರು ಮೇಲ್ಸೇತುವೆಗೆ ಟಾರ್ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು ಒಂದೆರೆಡು ದಿವಸಗಳಲ್ಲಿ ಟಾರ್ ಕೆಲಸ ಮುಗಿಯಲಿದೆ.
ಇನ್ನಷ್ಟು ಕೆಲಸ ಇವೆ: ಸದ್ಯ ಈ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ನಂತರ ಹಂತ ಹಂತವಾಗಿ ಉಳಿದ ಕೆಲಸದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇನ್ನು ಭದ್ರಮ್ಮ ಛತ್ರದಿಂದ ಹಳೇ ಡಿಡಿಪಿಐ ಕಚೇರಿಯವರೆಗೆ ರಸ್ತೆ ಆಗಬೇಕು. ಹಾಗೆಯೇ ಚನ್ನಂನಂಜಪ್ಪ ಹಾಸ್ಟೆಲ್‌ನಿಂದ ಶೆಟ್ಟಿಹಳ್ಳಿ ಗೇಟ್‌ವರೆಗೂ ರಸ್ತೆ ನಿರ್ಮಾಣ ಆಗಬೇಕಾಗಿದೆ.
ಕಾಲು ಭಾಗದಷ್ಟು ಜನ ಸೇತುವೆಯಿಂದ ಆ ಬದಿಯಲ್ಲಿದ್ದಾರೆ. ತುಮಕೂರು ನಗರದ ಒಟ್ಟು 3 ಲಕ್ಷ ಜನಸಂಖ್ಯೆಯಲ್ಲಿ ಭರ್ತಿ 1 ಲಕ್ಷಕ್ಕೂ ಹೆಚ್ಚು ಮಂದಿ ರೈಲ್ವೆ ಸೇತುವೆಯ ಆಚೆ ಬದಿ ವಾಸಿಸುತ್ತಿದ್ದಾರೆ. ರೈಲ್ವೆ ಮೇಲ್ಸೇತುವೆ ಸಾರ್ವಜನಿಕರಿಗೆ ಮುಕ್ತವಾದ ಕೂಡಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿಟ್ಟಿಸಿರು ಬಿಡುತ್ತಾರೆ.
ಹೋರಾಟಗಳೂ ನಡೆದಿವೆ:  ರೇಲ್ವೆ ಮೇಲ್ಸೇತುವೆಗಾಗಿ ಆ ಭಾಗದ ನಿವಾಸಿಗಳು ಹೋರಾಟವನ್ನು ರೂಪಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ದಿ. ರವೀಶ್ ನೇತೃತ್ವದಲ್ಲಿ ಹೋರಾಟ ಸಮಿತಿ ರಚನೆಗೊಂಡಿತ್ತು. ಒಟ್ಟಾರೆಯಾಗಿ ಹೋರಾಟ, ಎಲ್ಲರ ಪರಿಶ್ರಮದಿಂದ ಈಗ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಚುನಾವಣಾ ನೀತಿ ಸಂಹಿತೆ ಅಡ್‌ಡಿ ಬರದೇ ಇದ್ದರೆ ವಾರದಲ್ಲಿ ಮೇಲ್ಸೇತುವೆ ಮೇಲೆ ಪ್ರಯಾಣಿಸಬಹುದು.


ರು. 11 ಕೋಟಿ ಬಿಡುಗಡೆ...
ರೇಲ್ವೆ ಮೇಲ್ಸೇತುವೆಗೆ ಬಜೆಟ್‌ನಲ್ಲಿ ಮತ್ತೆ ರು. 11 ಕೋಟಿ ಅನುದಾನ ಸಿಕ್ಕಿದೆ. ಈ ಹಣದಲ್ಲಿ ಭದ್ರಮ್ಮ ಛತ್ರ ವೃತ್ತದಿಂದ ಹಳೇ ಡಿಡಿಪಿಐ ಕಚೇರಿಯವರೆಗೆ ಹಾಗೂ ಚನ್ನಂಜಪ್ಪ ಹಾಸ್ಟೆಲ್‌ನಿಂದ ಶೆಟ್ಟಿಹಳ್ಳಿ ಗೇಟ್‌ವರೆಗೆ ರಸ್ತೆ ನಿರ್ಮಾಣ ಮಾಡಲಾಗುವುದು. ಮೊದಲು ಮೇಲ್ಸೇತುವೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿ ನಂತರ ಈ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.


ಕೆಳಸೇತುವೆ ನಿರ್ಮಾಣ
ಈಗಾಗಲೇ ರೇಲ್ವೆ ಮೇಲ್ಸೇತುವೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಮುಂದಿನ ಹಂತದಲ್ಲಿ ಶೆಟ್ಟಿಹಳ್ಳಿ ಕೆಳಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ನಂತರ ಸಾಬರಪಾಳ್ಯದಲ್ಲಿ ಮತ್ತೊಂದು ಕೆಳ ಸೇತುವೆ ಕಾಮಗಾರಿ ಆರಂಭವಾಗಲಿದೆ. ಈಗಾಗಲೇ ಶೆಟ್ಟಿಹಳ್ಳಿ ಕೆಳ ಸೇತುವೆಗೆ ಹಣ ಕೂಡ ಬಿಡುಗಡೆಯಾಗಲಿದೆ. ಟೆಂಡರ್ ಕರೆದು ಕಾಮಗಾರಿ ಶುರುವಾಡುವುದಷ್ಟೇ ಸದ್ಯಕ್ಕೆ ಇರುವ ಬಾಕಿ ಕೆಲಸ.


ವಾರದೊಳಗೆ ಸಂಚಾರ ಮುಕ್ತ: ಸೊಗಡು
ಚುನಾವಣಾ ನೀತಿ ಸಂಹಿತೆ ಅಡ್ಡಿ ಬರದೇ ಇದ್ದರೆ ವಾರದೊಳಗೆ ಮೇಲ್ಸೇತುವೆಯನ್ನು ಸಾರ್ವಜನಿಕರು ಬಳಸಬಹುದಾಗಿದೆ. ಇದೊಂದು ತುಮಕೂರಿನ ಅತಿ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು ಮೇಲ್ಸೇತುವೆ ಮೂಲಕ ಲಕ್ಷಾಂತರ ಜನ ವಾಸಿಗಳಿಗೆ, ಸರ್ಕಾರಿ ನೌಕರರಿಗೆ, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.