ಸಮಾಜ ಸೇವೆಯಲ್ಲಿ ಸ್ನೇಹಾದ್ರಿ ಸಂಘ ಮಾದರಿ
ಕ.ಪ್ರ. ವಾರ್ತೆ ತುಮಕೂರು ಮಾ.17
ಹತ್ತು ಹಲವು ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡು ಸಮಾಜಮುಖಿ ಕೆಲಸ ನಿರ್ವಹಿಸುತ್ತಿರುವ ಶಾಂತಿ ನಗರದ ಸ್ನೇಹಾದ್ರಿ ಸ್ವಸಹಾಯ ಸಂಘ ಇತರೆ ಸಂಘಗಳಿಗಿಂತ ಮಾದರಿಯಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರಾಜು ಅವರು ಪ್ರಶಂಸಿಸಿದರು.
ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರದಂದು ಜಿ.ಪಂ.,ತಾ.ಪಂ. ಹಾಗೂ ಸ್ನೇಹಾದ್ರಿ ಸ್ವಸಹಾಯ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಿಂದ ಮಹಿಳಾ ಕಾನೂನು ಮತ್ತು ದೌರ್ಜನ್ಯ ತಡೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘಗಳು ಆರ್ಥಿಕ ಅಭಿವೃದ್ಧಿ ಹೊಂದುವುದರ ಬಗ್ಗೆ ಸರ್ಕಾರದ ಯೋಜನೆಗಳ ಬಗ್ಗೆ ಸವಲತ್ತುಗಳನ್ನು ಪಡೆಯುವುದರ ಕುರಿತು ಸ್ನೇಹಾದ್ರಿ ಸಂಘ ಇಂತ ಹಲವು ಕಾರ್ಯಾಗಾರಗಳನ್ನು ಆಯೋಜಿಸಿ ಅರಿವು ಮೂಡಿಸುವಂತ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂಬಂಧ ಕಳೆದ ವಾರ ಸ್ತ್ರೀ ಶಕ್ತಿ ಸಂಘಗಳು ಆರ್ಥಿಕ ಅಭಿವೃದ್ಧಿ ಹೊಂದುವುದರ ಬಗ್ಗೆ ಕಾರ್ಯಾಗಾರ ಏರ್ಪಡಿಸಿ ಆ ಬಗ್ಗೆ ಜಾಗೃತಿ ಮೂಡಿಸುವಂತ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಮಹಿಳಾ ಸ್ವಸಹಾಯ ಸಂಘದವರು ಪಾಲ್ಗೊಂಡಿದ್ದರು. ಇದೇ ರೀತಿ ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ನಡೆಸಲಿ ಎಂದು ಹಾರೈಸಿದ ಅವರು ಜಿಲ್ಲಾ ಪಂಚಾಯತ್ ಇದಕ್ಕೆ ಬೇಕಾದ ಎಲ್ಲಾ ಪ್ರೋತ್ಸಾಹ ನೀಡುತ್ತದೆ ಎಂದರು.
ಸ್ವಚ್ಛತೆಗೆ ಹೆಚ್ಚು ಒತ್ತು: ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘಗಳು ತಮ್ಮ ಕಾರ್ಯ ಚಟುವಟಿಕೆ ಜೊತೆಗೆ ಪರಿಸರ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕಿದೆ. ಪ್ರತಿಯೊಂದು ಮನೆಯಲ್ಲೂ ಶೌಚಾಲಯ ನಿರ್ವಹಣೆ ಮಡುವುದರ ಬಗ್ಗೆ ಪ್ರೇರಿಸಬೇಕಿದೆ. ಹಾಗೂ ಬಯಲು ಮಲ ವಿಸರ್ಜನೆಯಿಂದ ಉಂಟಾಗುವ ರೋಗ ರುಜಿನಗಳ ಬಗ್ಗೆ ಮತ್ತು ಗ್ರಾಮದ ಪರಿಸರ ನೈರ್ಮಲ್ಯ ಹಾಳಾಗುವುದರ ಬಗ್ಗೆ ಆ ಭಾಗದ ಕುಟುಂಬದ ಸದಸ್ಯರಿಗೆ ತಿಳಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ 12 ಸಾವಿರ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿದ್ದು ಅವುಗಳನ್ನು ಈಗಾಗಲೇ 102 ಕೋಟಿ ಠೇವಣಿ ಹಣವನ್ನು ಬ್ಯಾಂಕ್ಗಳಲ್ಲಿ ಇಡಲಾಗಿದೆ. ಅಲ್ಲದೇ 2003 ರಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ಹೆಬ್ಬೂರಿನಲ್ಲಿ ಸ್ತ್ರೀ ಶಕ್ತಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಆ ಸಮಾವೇಶದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ರು. 10 ಸಾವಿರ ಹಣವನ್ನು ಪ್ರೇರಣ ಹಣವನ್ನಾಗಿ ಪಾವತಿಸಲಾಗಿತ್ತು. ಅಂತ ಪ್ರೇರಣ ಹಣವನ್ನು ಪಡೆಯದಿದ್ದ ಸ್ತ್ರೀ ಸಂಘಗಳು ಇದ್ದರೆ ಜಿಲ್ಲಾ ಪಂಚಾಯಿತಿ ಸಿಇಓ ಅವರನ್ನು ಸಂಪರ್ಕಿಸಿ ಪಡೆಯಬಹುದು ಎಂದರು.
25 ಸಾವಿರ ಪ್ರೇರಣ ಹಣ: ಶೌಚಾಲಯ ನಿರ್ಮಾಣಕ್ಕಾಗಿ 12 ಕೋಟಿ ಹಣ ಜಿಲ್ಲಾ ಪಂಚಾಯತಿಯಲ್ಲಿದೆ. ಈ ಹಣವನ್ನು ಸದುಪಯೋಗಪಡಿಸಿಕೊಂಡು ತುಮಕೂರು ಜಿಲ್ಲೆಯನ್ನು ಮುಕ್ತಿ ಶೌಚಾಲಯ ಜಿಲ್ಲೆಯನ್ನಾಗಿ ಮಾಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ತಮ್ಮ ಪ್ರೇರಣೆಯಿಂದ ಒಂದೊಂದು ಕುಟುಂಬದಲ್ಲಿ ಶೌಚಾಲಯ ನಿರ್ಮಿಸಿದರೆ ವಲಸೆ ಸದಸ್ಯರಿಗೆ ರೂ 75 ರಂತೆ ಪ್ರೇರಣೆ ಹಣ ನೀಡಲಾಗುತ್ತದೆ. ಅಲ್ಲದೇ ಮುಕ್ತ ಶೌಚಾಲಯ ಗ್ರಾಮವನ್ನಾಗಿ ಮಾಡಿದರೆ ಅಂತಹ ಸಂಘಗಳಿಗೆ 25 ಸಾವಿರ ಪ್ರೇರಣ ಹಣವನ್ನು ನೀಡಲಾಗುತ್ತದೆ ಎಂದು ಗೋವಿಂದರಾಜು ಅವರು ಘೋಷಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ರಜನಿ ಮಾತನಾಡಿದರು. ಕಾರ್ಯಾಗಾರದಲ್ಲಿ ವಕೀಲರಾದ ಐ.ಕೆ. ಪರ್ವಿನ್ ಅವರು ಮಹಿಳಾ ರಕ್ಷಣಾ ಕಾನೂನು ಕುರಿತು ವರದಕ್ಷಿಣೆ ವಿರೋದಿ ವೇದಿಕೆ ಕಾರ್ಯದರ್ಶಿ ಸಾ.ಚಿ ರಾಜ್ಕುಮಾರ್ ಅವರು ಮಹಿಳಾ ದೌರ್ಜನ್ಯ ತಡೆಯುವಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಪಾತ್ರ ಕುರಿತು ಹಗೂ ವಕೀಲರಾದ ಎಸ್. ರಮೇಶ್ ಅವರು ಸ್ವಾಸ್ಥ ಸಮಾಜ ನಿರ್ಮಾಣದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪಾತ್ರ ಕುರಿತು ಉಪನ್ಯಾಸ ನೀಡಿದರು.
ತಾಲೂಕು ಪಂಚಯತ್ ಇ.ಓ ವೆಂಕಟೇಶಯ್ಯ ಸ್ನೇಹಾದ್ರಿ ಸ್ವಸಹಾಯ ಸಂಘದ ಪದಾದಿಕಾರಿಗಳು ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು ಮತ್ತಿತರರರು ಉಪಸ್ಥಿತರಿದ್ದರು.
ಸ್ನೇಹಾದ್ರಿ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ಎಸ್. ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಎನ್. ಡಿ ರಂಗರಾಜು ನಿರೂಪಿಸಿದರು. ಲೋಕೇಶ್ ಪ್ರಭು ವಂದಿಸಿದರು. ಉಮಾ ರಾಜಶೇಖರ್ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

