ಆಶ್ರಯ ಸಮಿತಿ ಕುಣಿಗಲ್ ಪಾಲಿಗೆ ಇದ್ದೂ ಇಲ್ಲದಂತೆ
ಕ.ಪ್ರ.ವಾರ್ತೆ ್ಣ ಕುಣಿಗಲ್ ್ಣ ಮಾ. 19
ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಿಂದಲೂ ನಿವೇಶನ ವಿತರಣೆಯಾಗದೆ ಆಶ್ರಯ ಸಮಿತಿ ಪಟ್ಟಣದ ಪಾಲಿಗೆ ಇದ್ದೂ ಇಲ್ಲದಂತಾಗಿದೆ.
ಪ್ರಸಕ್ತ ಶಾಸಕರ ಅವಧಿ ಇನ್ನೇನು ಕೊನೆಗೊಳ್ಳುವ ಹಂತಕ್ಕೆ ಬಂದಿದ್ದರೆ, ಈಗಾಗಲೆ 2007ರಲ್ಲಿ ಆಯ್ಕೆಯಾದ ಪುರಸಭಾ ಸದಸ್ಯರ ಅಧಿಕಾರವಧಿ ಮುಗಿದು, ನೂತನ ಸದಸ್ಯರು ಆಯ್ಕೆಯಾಗಿ ಅಧಿಕಾರ ಗ್ರಹಣಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಪುರಸಭೆವ್ಯಾಪ್ತಿಯಲ್ಲಿ ಆಶ್ರಯ ಸಮಿತಿ ಇದ್ದೂ ಇಲ್ಲದಂತಾಗಿದೆ.
ಈ ಹಿಂದಿನ ಶಾಸಕರಾದ ಎಸ್.ಪಿ. ಮುದ್ದಹನುಮೇಗೌಡರ ಕಾಲಾವಧಿಯಲ್ಲಿ ಆಶ್ರಯ ಸಮಿತಿ ವತಿಯಿಂದ ನಿವೇಶನ ಮಂಜೂರಾತಿ ಪತ್ರ ವಿತರಣೆಯಾಗಿ, ನಿವೇಶನ ವಿತರಣೆಗೆ ಕೆಲವೊಂದು ತಾಂತ್ರಿಕ ಸಮಸ್ಯೆ ತಲೆದೋರಿತ್ತು, ನಂತರ ಬಂದ ಶಾಸಕ ಎಚ್.ನಿಂಗಪ್ಪ ಈ ನ್ಯೂನತೆಯನ್ನು ಸರಿಪಡಿಸಲು ಹಲವು ಬಾರಿ ಕಸರತ್ತು ನಡೆಸಿ, ವಿಫಲವಾದರಲ್ಲದೆ, ಹೊಸದಾಗಿ ಅರ್ಜಿ ಕರೆದು, ಇದಕ್ಕಾಗಿ ಪಟ್ಟಣದ ಬಿದನಗೆರೆ ಹಾಗೂ ಮಲ್ಲಾಘಟ್ಟ ಗ್ರಾಮದ ಬೇರೆ, ಬೇರೆ ಸರ್ವೆ ನಂಬರ್‌ಗಳಲ್ಲಿ 1054 ನಿವೇಶನ ವಿಂಗಡಿಸಿ, ನೀಡುವ ಸಿದ್ಧತೆಯಲ್ಲಿರುವಾಗಲೆ, ವಚನಭ್ರಷ್ಟತೆ ಸುಳಿವಿಗೆ ಸಿಕ್ಕು ಬಿಜೆಪಿ- ಜೆಡಿಎಸ್ ಸರ್ಕಾರ ಪತನವಾಗಿ, 2008ರ ಚುನಾವಣೆಯಲ್ಲಿ ಬಿ.ಬಿ.ರಾಮಸ್ವಾಮಿಗೌಡ ಶಾಸಕರಾಗಿ ಆಯ್ಕೆಯಾದರು.
ವಿಳಂಬ: ಶಾಸಕರಾಗಿ ಬಿ.ಬಿ.ರಾಮಸ್ವಾಮಿಗೌಡ ಆಯ್ಕೆಯಾದ ನಂತರ, ಬಿಜೆಪಿ ಸರ್ಕಾರದ ಕೆಲವೊಂದು ಗೊಂದಲಕಾರಿ ನಿಲುವುಗಳಿಂದ ಆಶ್ರಯ ಸಮಿತಿ ಅಸ್ತಿತ್ವಕ್ಕೆ ಬರಲು ವಿಳಂಬವಾಗಿ, 2010ರಲ್ಲಿ ಶಾಸಕರ ಅಧ್ಯಕ್ಷೆತೆಯಲ್ಲಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್, ಪುರಸಭಾಧ್ಯಕ್ಷರು, ಸದಸ್ಯರಾಗಿ ಮುಖ್ಯಾಧಿಕಾರಿ ಸದಸ್ಯಕಾರ್ಯದರ್ಶಿ, ಮೂವರು ನಾಮನಿರ್ದೇಶಿತ ಸದಸ್ಯರು ಅಧಿಕಾರೇತರ ಸದಸ್ಯರಾಗಿ ಸಮಿತಿ ಅಸ್ತಿತ್ವಕ್ಕೆ ಬಂತು. ದುರಂತ ಎಂದರೆ ಸಮಿತಿಯು ಇಲ್ಲಿಯವರೆಗೆ ಕೇವಲ ಮೂರು ಬಾರಿ ಸಭೆ ಸೇರಿದ್ದು, ಅದರಲ್ಲಿ ಒಮ್ಮೆ ಮಾತ್ರ ಬಹುತೇಕ ಎಲ್ಲರೂ ಪಾಲ್ಗೊಂಡಿದ್ದು, ಇನ್ನಾವುದೇ ಪ್ರಗತಿ ಕಾಣಲಿಲ್ಲ.
ಬದ್ಧತೆಯಿಲ್ಲ: ಇನ್ನು ಪಟ್ಟಣದ ಪ್ರದೇಶದ 1996ರಲ್ಲಿ ನಿವೇಶನ ವಿತರಣೆಯಾಗಿರುವುದು ಬಿಟ್ಟರೆ, ನಂತರ ಬಂದಂತಹ ಯಾವುದೇ ಶಾಸಕರು, ನಿವೇಶನ ರಹಿತರಿಗೆ ನಿವೇಶನ ವಿತರಣೆಗೆ ಬದ್ಧತೆಯಿಂದ ಕಾರ್ಯನಿರ್ವಹಿಸದ ಕಾರಣ ಪಟ್ಟಣ ವ್ಯಾಪ್ತಿಯಲ್ಲಿ ಕಳೆದ 17ವರ್ಷಗಳಿಂದಲೂ ನಿವೇಶನ ವಿತರಣೆಯಾಗದೆ, ವಸತಿ ರಹಿತರು ತಲೆ ಮೇಲೊಂದು ಸೂರು ಹೊಂದಲಾಗದೆ, ಪುರಸಭೆಗೆ ಹಲವು ಬಾರಿ ಅರ್ಜಿ ಸಲ್ಲಿಸಿ, ರೋಸಿಹೋಗಿದ್ದಾರೆಂದು ಆಶ್ರಯ ಸಮಿತಿ ಸದಸ್ಯ ರಾಕ್‌ಲೈನ್ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಹಾಲಿ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕರಿಗೆ, ವಸತಿ ರಹಿತರಿಗೆ ನಿವೇಶನ ವಿತರಣೆಗೆ ಯಾವುದೇ ಬದ್ಧತೆ ಇಲ್ಲವಾಗಿದೆ, ಅಧಿಕಾರೇತರ ಸದಸ್ಯರು ಹಲವು ಬಾರಿ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರೂ ಶಾಸಕರು, ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವುದು ಸಮಿತಿ ಪುರಸಭೆ ವ್ಯಾಪ್ತಿಗೆ ಇದ್ದೂ ಇಲ್ಲದಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಹಲವು ಬಾರಿ ಮನವಿ: ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್, ತಾವು ಈ ಹಿಂದೆ ಪುರಸಭೆಯ ಸದಸ್ಯರಾಗಿದ್ದ ಅವಧಿಯಲ್ಲಿ ನಿವೇಶನ ವಿತರಣೆ ದಿಸೆಯಲ್ಲಿ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ, ಹಲವು ಬಾರಿ ಮನವಿ ಮಾಡಿದ್ದರೂ, ಈ ದಿಸೆಯಲ್ಲಿ ಅವರು ಮುಂದಾಗದಿರುವ ಕಾರಣ ಯೋಜನೆಗೆ ಹಿನ್ನೆಡೆಯಾಗಿರುವುದು ಬೇಸರದ ಸಂಗತಿ ಎಂದಿದ್ದಾರೆ. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಶಂಕರ್, ಶಾಸಕರಿಗೆ ನಿವೇಶನ ವಿತರಣೆ ಬಗ್ಗೆ ಸಾಕಷ್ಟು ಒಲವಿದೆ. ದುರಂತ ಎಂದರೆ, ಎಸ್.ಪಿ.ಎಂ ಶಾಸಕರಾಗಿದ್ದಾಗ ವಿತರಿಸಲಾದ ನಿವೇಶನ ಪತ್ರದಲ್ಲಿ, ಸಾಕಷ್ಟು ತಾಂತ್ರಿಕ ತೊಂದರೆಗಳಿರುವ ಕಾರಣ, ಪಟ್ಟಣದಲ್ಲಿ ನಿವೇಶನ ವಿತರಣೆಗೆ ಅಡಚಣೆಯಾಗಿದೆ. ಈ ತಾಂತ್ರಿಕ ತೊಂದರೆಗಳನ್ನು ಶಾಸಕರು ನಿವಾರಿಸಿ,ಶೀಘ್ರವಾಗಿ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ವಿವಿಧ ಹಂತದ ಜನಪ್ರತಿನಿಧಿಗಳ ವೈಯುಕ್ತಿಕ ಗೊಂದಲ, ಪ್ರತಿಷ್ಠೆಗಳ ನಡುವೆ, ಪುರಸಭೆ ವ್ಯಾಪ್ತಿಯ ನಿವೇಶನ ರಹಿತರು ಪರದಾಡುವಂತಾಗಿದ್ದು, ಇನ್ನಾದರೂ ಎಚ್ಚೆತ್ತು ಅಗತ್ಯ ಕ್ರಮ ಕೈಗೊಂಡು ನಿವೇಶನ ವಿತರಣೆಗೆ ಮುಂದಾಗವರೆ ಎಂದು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

