ತುಮಕೂರು

ಚಿ.ನಾ.ಹಳ್ಳಿ ಬಿಸಿಎಂ ವಿದ್ಯಾರ್ಥಿನಿಲಯ ಅವ್ಯವಸ್ಥೆಗಳ ಆಗರ

Published On :

ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಮಾ. 19
ತಾಲೂಕಿಗೆ ಭೇಟಿ ನೀಡಿದ್ದ ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಪ್ರೇಮಮಹಾಲಿಂಗಪ್ಪ ಅವರು ತಾಲೂಕಿನಲ್ಲಿರುವ ಬಿಸಿಎಂ ಹಾಸ್ಟೆಲ್‌ಗಳ ಅವ್ಯವಸ್ಥೆ ಕಂಡು  ದಿಗ್ಭ್ರಮೆಗೊಂಡರು.
ನಿಲಯಗಳಿಗೆ ಭೇಟಿ ನೀಡಿದಾಗ ಆಹಾರ ಪದಾರ್ಥ ಮತ್ತು ಹಾಜರಾತಿ ಪುಸ್ತಕಗಳನ್ನು ಪರಿಶೀಲಿಸಿದಾಗ ಪುಸ್ತಕದಲ್ಲಿ 65 ಮಕ್ಕಳಿದ್ದರೆ, ನೈಜವಾಗಿದ್ದುದು ಕೇವಲ15 ವಿದ್ಯಾರ್ಥಿಗಳು. ಒಂದೇ ದಿನಕ್ಕೆ ಒಂದು ವಿದ್ಯಾರ್ಥಿ ನಿಲಯದಲ್ಲಿ 50 ಮಕ್ಕಳ  ಆಹಾರ ಕದ್ದರೆ ವರ್ಷಕ್ಕೆ ಎಷ್ಟು ಲಕ್ಷ ರು.ಗಳ ಅವ್ಯವಹಾರ ನಡೆಯಬಹುದು ಎಂದು ಜಿಪಂ ಸದಸ್ಯ ಎಚ್.ಬಿ.ಪಂಚಾಕ್ಷರಿ ಪ್ರಶ್ನಿಸಿದರು.
 ಜಿಲ್ಲಾ ಬಿಸಿಎಂ ಅಧಿಕಾರಿಯವರ ಸ್ವಗ್ರಾಮದಲ್ಲೇ ಈ ರೀತಿ  ಹದಗೆಟ್ಟಿರುವ ವಿದ್ಯಾರ್ಥಿನಿಲಯಗಳಿದ್ದರೆ, ಇನ್ನು ಬೇರೆ ಕಡೆ ಯಾವ ಪರಿಸ್ಥಿತಿಯಲ್ಲಿರಬಹುದು ನೀವೇ ಹೇಳಿ ಎಂದು ಜಿಪಂ ಅಧ್ಯಕ್ಷರು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು. ಕದಿಯುವ ಭರದಲ್ಲಿ ಹಬ್ಬಹರಿದಿನಗಳನ್ನು ಬಿಡುವುದಿಲ್ಲ. ಹಿಂದುಗಳಿಗೆ ಶಿವರಾತ್ರಿ ಪವಿತ್ರವಾದ ಹಬ್ಬ, ಎಂತಹ ಬಡತನವಿರಲಿ ಯಾವ ತಂದೆ ತಾಯಿ  ತಮ್ಮ ಮಕ್ಕಳನ್ನು ವಿದ್ಯಾರ್ಥಿನಿಲಯಗಳಲ್ಲಿ ಬಿಡುವುದಿಲ್ಲ. ಆದರೆ ಇಲ್ಲಿ ಶಿವರಾತ್ರಿ ಹಬ್ಬದ ದಿನ ಮಕ್ಕಳ ಹಾಜರಾತಿ ತೋರಿಸಿದ್ದೀರಿ. ನಿಮ್ಮ ಆತ್ಮಸಾಕ್ಷಿಯಾಗಿ ಹೇಳಿ ಇದು ಅವ್ಯವಹಾರವಲ್ಲವೆ ಎಂದು ಪಂಚಾಕ್ಷರಿ ಪ್ರಶ್ನಿಸಿದರು.
ಪ್ರತಿನಿತ್ಯ ಅದೇ ಆಹಾರ: ನಂತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ಪರಿಶೀಲಿಸಿದಾಗ ಅಲ್ಲಿನ ಮಕ್ಕಳನ್ನು ಮೆನು ಪ್ರಕಾರ ನಿಮಗೆ ಆಹಾರ ನೀಡುತ್ತಿದ್ದಾರೆಯೇ ಎಂದು ಕೇಳಿದರೆ, ಪಾಪ ಆ ಮಕ್ಕಳು ಮೆನು ಎಂದರೆ ಏನು ಎಂಬುದೇ ನಮಗೆ ಗೊತ್ತಿಲ್ಲ ಸಾರ್. ಒಟ್ಟಾರೆ ಪ್ರತಿ ನಿತ್ಯ ಅನ್ನ, ಮುದ್ದೆ, ಸಾರು ಈ ಮೂರು ಆಹಾರಗಳು ಮಾಮೂಲು. ದಿನವಿರಲಿ ಅಥವಾ ಹಬ್ಬದದಿನಗಳಿರಲಿ, ಅದೇ ಅನ್ನ ಮುದ್ದೆ ಸಾರು ಬಿಟ್ಟರೆ ಬೇರೆ ಗೊತ್ತಿಲ್ಲ ಎಂದು ದೂರಿದರು.
 ಸಂಜೆ ಚಾಟ್ ನೀಡದೆ, ಬರೀ ಹಾಲಿಲ್ಲದ ನೀರಿನಂತಹ ಕಾಫಿಯನ್ನು ಕೊಡುತ್ತಾರೆ. ಕೇಳಿದರೆ ನಿಲಯ ಪಾಲಕರು ನೀವು ಇಲ್ಲಿ ತಿನ್ನುವುದಕ್ಕಲ್ಲ ಬಂದಿರುವುದು, ಓದುವುದಕ್ಕೆ, ನಿಮ್ಮ ಮನೆಯಲ್ಲಿ ಇಂತಹ ಆಹಾರವು ಸಿಗುವುದಿಲ್ಲ. ಆದರೆ ಇಲ್ಲಿ ಧಿಮಾಕು ತೋರುತ್ತೀರ ಎಂದು ಬಾಯಿಗೆ ಬಂದಂತೆ ನಿಂದಿಸುತ್ತಾರೆ. ಆದ್ದರಿಂದ ನಾವು ಅವರನ್ನು ಏನು ಕೇಳಲು ಹೊಗುವುದಿಲ್ಲ. ಕೊಠಡಿಗಳಲ್ಲಿ ವಿದ್ಯುತ್ ದೀಪ ಹಾಳಾದರೆ ಅದಕ್ಕೂ ನಮ್ಮನ್ನು ದೂರುತ್ತಾರೆ. ವಾರಗಟ್ಟಲೆಯಾದರು ದೀಪವನ್ನು ಹಾಕುವುದಿಲ್ಲ ಎಂದು ಮಕ್ಕಳು ತಿಳಿಸಿದರು.
ಮಾಡದ ತಪ್ಪಿಗೆ ಶಿಕ್ಷೆ: ಇನ್ನು ಸ್ನಾನಕ್ಕೆ  ಮತ್ತು ಬಟ್ಟೆ ತೊಳೆಯಲು ಸೋಪುಗಳನ್ನು ನಾವೇ ತಂದುಕೊಳ್ಳಬೇಕು. ಸಮವಸ್ತ್ರಗಳನ್ನು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಮಾತ್ರ ನೀಡಿದ್ದಾರೆ. ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕಳೆದರೂ  ನೀಡಿಲ್ಲ. ಇದರಿಂದ ಶಾಲೆಗಳಲ್ಲಿ ನಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿದೆ  ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಈ ಬಗ್ಗೆ ಬಿಸಿಎಂ ತಾಲೂಕು ಅಧಿಕಾರಿ ವನಮಾಲ ಭುವಂಕರ್ ಅವರನ್ನು ಪ್ರಶ್ನಿಸಿದಾಗ ಅವರು ತಮ್ಮ ಸಹೋದ್ಯೋಗಿಗಳ ಪರವಾಗಿ ನಿಂತು ವಿದ್ಯಾರ್ಥಿಗಳು ಹೇಳುವುದೆಲ್ಲಾ ಸುಳ್ಳು ಎಂದು ಸಮರ್ಥಿಸಿಕೊಂಡರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಜಿಪಂ ಸದಸ್ಯೆ ಲೋಹಿತಾ ಬಾಯಿ, ನಿಮ್ಮ ಮಕ್ಕಳಿಗೆ ಈ ರೀತಿ ತೊಂದರೆಯಾಗಿದ್ದರೆ ನಿಮ್ಮ ಮನಸ್ಸು ಹೇಗೆ ತುಡಿಯುತ್ತದೆ. ಅದೇ ರೀತಿ ಇವು ಸಹ ನಿಮ್ಮ ಮಕ್ಕಳೆಂದು ನಿಲಯದ ನಿರ್ವಹಣೆ ಮಾಡಬೇಕು ಎಂದರು.
ವರದಿ ತರಿಸಿ: ಮುಂದಿನ ಜಿಲಾ ್ಲಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಕೂಲಂಕಷವಾದ ವರದಿಯನ್ನು ತರಿಸಿ ಎಂದು ಎಚ್.ಬಿ.ಪಂಚಾಕ್ಷರಿಯವರು ಅಧ್ಯಕ್ಷರನ್ನು ಕೇಳಿಕೊಂಡರು. ಅದಕ್ಕೆ ಅಧ್ಯಕ್ಷರು ಈಗಾಗಲೇ ಹಲವು ಕಡೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಬಗ್ಗೆ ಕ್ರಮಕೈಗೊಳ್ಳಿ ಎಂದು  ಅಧಿಕಾರಿಗೆ ಪತ್ರ ಬರೆದರೆ, ಸದರಿ ಅಧಿಕಾರಿ ಕಾರಣ ಕೇಳಿ ನೊಟೀಸ್ ನೀಡಿದ್ದೇನೆ. ಅವರಿಂದ ಇನ್ನು ಉತ್ತರ ಬಂದಿಲ್ಲ, ಉತ್ತರ ಬಂದಮೇಲೆ ಕ್ರಮಕೈಗೊಳ್ಳುತ್ತೇನೆ ಎಂಬ ಸಬೂಬು ಹೇಳುತ್ತಾರೆ ಎಂದು ತಮ್ಮ ಅಸಹಾಯಕತೆಯನ್ನು ಸದಸ್ಯರ ಮುಂದೆ ತೋಡಿಕೊಂಡರು.
 ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷರಾದ ಎಂ.ಎಂ.ಜಗದೀಶ್, ಉಪಾಧ್ಯಕ್ಷರಾದ ಲತಾ ಕೇಶವಮೂರ್ತಿ, ಜಿಪಂ ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.